ಭಾನುವಾರ, ಜೂಲೈ 12, 2020
29 °C
ಸಮಗ್ರ ಅಭಿವೃದ್ಧಿಗೆ ಆದ್ಯತೆ; ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿಕೆ

ನನ್ನ ಕೆಲಸದ ವೇಗಕ್ಕೆ ಅಧಿಕಾರಿಗಳು ಹೊಂದಿಕೊಳ್ಳಬೇಕು: ಗೋಪಾಲಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರ ಮುಖ್ಯ, ಮುಂದೆ ನನ್ನ ವೇಗಕ್ಕೆ ಅಧಿಕಾರಿಗಳು ಹೊಂದಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವಿರಿಸಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಬೇಕೆಂಬ ಮಹದಾಸೆಯಿಂದ ಪ್ರೀತಿಯಿಂದ ನಾನು ಮಹತ್ವದ ಸ್ಥಾನ ಸ್ವೀಕರಿಸಿದ್ದೇನೆ. ಇತರ ಜಿಲ್ಲೆಗಳಿಂದ ಹಾಸನ ಮಾದರಿ ಎನಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು.

ಮಹಾಲಕ್ಷ್ಮಿ ಲೇಔಟ್‍ನಿಂದ ರಾಜಕೀಯ ಜೀವನ ಪ್ರಾರಂಭಿಸಿರುವ ನಾನು ಮುಂದಿನ ಚುನಾವಣೆಗೆ ಹಾಸನವನ್ನು ರಾಜಕೀಯ ಕ್ಷೇತ್ರ ಮಾಡಿಕೊಳ್ಳುತ್ತೇನೆಂಬುದು ಸುಳ್ಳು. ನಾನು ಹಾಸನ ಜಿಲ್ಲೆಯ ಅಳಿಯ ಎಂದ ಮಾತ್ರಕ್ಕೆ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸಬೇಕೆಂಬ ನಿಯಮವಿಲ್ಲ. 1983ರಲ್ಲಿಯೇ ಶಾಸಕನಾಗಬೇಕಿದ್ದ ನನಗೆ 2013ರಲ್ಲಿ ಅದೃಷ್ಟ ಒಲಿದಿದೆ. ದೇವರ ಕೃಪೆಯಿಂದ ಈಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಂದಿದ್ದೇನೆ. ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಇನ್ನೂ ಆಗಬೇಕಿರುವ ಕೆಲಸ ಸಾಕಷ್ಟಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಂಸದ ಹಾಗೂ ಎಲ್ಲ ಶಾಸಕರ ಸಲಹೆ ಪಡೆದು ಕೆಲಸ ಮಾಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ, ರಾಜಕೀಯ ಪರಿಗಣಿಸುವುದಿಲ್ಲ ಎಂದು ತಿಳಿಸಿದರು.

ನಾನು ರೈತ ಕುಟುಂಬದಿಂದ ಬಂದಿದ್ದೇನೆ. ಜಿಲ್ಲೆಯ ಆಲೂಗಡ್ಡೆ, ತೆಂಗು ಬೆಳೆಗಾರರ ಸಮಸ್ಯೆ ಅರಿತಿದ್ದೇನೆ. ಮುಖ್ಯಮಂತ್ರಿ ಜತೆಗೆ ಚರ್ಚಿಸಿ ನಷ್ಟಕ್ಕೀಡಾಗಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡುತ್ತೇನೆ. ಇನ್ನೊಂದು ವಾರದಲ್ಲಿ ಕೆಡಿಪಿ ಸಭೆ ಕರೆದು ಎಲ್ಲ ಸಮಸ್ಯೆ ಅರಿಯುತ್ತೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ವರದಿಯಾಗದೆ ಎಲ್ಲರೂ ನೆಮ್ಮದಿಯಾಗಿದ್ದೆವು. ಆದರೆ ಹೊಟ್ಟೆ ಪಾಡಿಗಾಗಿ ಮುಂಬೈಗೆ ತೆರಳಿದ್ದ ನಮ್ಮವರಿಗೆ ಕೊರೊನಾ ಸೋಂಕು ತಗುಲಿದ್ದು ಅವರೆಲ್ಲರನ್ನೂ ಕಾಪಾಡುವುದು ನಮ್ಮ ಜವಾಬ್ದಾರಿ. ಆದ್ದರಿಂದ ಮೊದಲ ಆದ್ಯತೆ ಕೊರೊನಾ ಹಿಮ್ಮೆಟ್ಟಿಸುವುದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನಿರಂತರ ಸಭೆಗಳ ಮೂಲಕ ಎಲ್ಲ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾ‌ಸ್‌ ಗೌಡ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎ.ಪರಮೇಶ್‌, ಶಾಸಕ ಪ್ರೀತಂ ಜೆ.ಗೌಡ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು