ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು, ಹಳೇಬೀಡಿನ ಜನರಲ್ಲಿ ಚಿಗುರಿದ ಆಶಾಭಾವ

ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ: ಪ್ರವಾಸೋದ್ಯಮದ ಅಭಿವೃದ್ದಿ ನಿರೀಕ್ಷೆ; ಪ್ರವಾಸಿಗರ ಸಂಖ್ಯೆ ಹೆಚ್ಚಳ ಸಾಧ್ಯತೆ
Published 20 ಸೆಪ್ಟೆಂಬರ್ 2023, 6:13 IST
Last Updated 20 ಸೆಪ್ಟೆಂಬರ್ 2023, 6:13 IST
ಅಕ್ಷರ ಗಾತ್ರ

ಹಳೇಬೀಡು: ಹೊಯ್ಸಳರ ನಾಡು, ಶಿಲ್ಪಕಲೆಯ ನೆಲೆವೀಡಾಗಿರುವ ಬೇಲೂರು, ಹಳೇಬೀಡು ವಿಶ್ವ ಮನ್ನ ಣೆಯ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯ ಸ್ಥಳೀಯರ ನಿರೀಕ್ಷೆಗಳು ಇದೀಗ ಸಾಕಾರಗೊಳ್ಳಲಿವೆ.

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ, ಮೂಲೆ ಗುಂಪಾಗಿರುವ ಸ್ಮಾರಕಗಳು ಬೆಳಕಿಗೆ ಬರುತ್ತವೆ. ದೇಗುಲದ ಆವರಣದ ಲ್ಲಿರುವ ಮ್ಯುಸಿಯಂ, ಹಿಂಭಾಗದ ಲ್ಲಿರುವ ಕೇದಾ ರೇಶ್ವರ ದೇವಾಲಯ, ಜೈನ ಬಸದಿ ಹಾಗೂ ಉತ್ಖನನ ಸ್ಮಾರಕಗಳನ್ನು ಒಂದೇ ಸಂಕೀರ್ಣದಲ್ಲಿ ಪ್ರವಾಸಿಗರು ನೋಡುವಂತೆ ಮಾಡುವ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಕನಸು ನನಸಾಲಿದೆ.

‘ಚಟಚಟ್ಟಿಹಳ್ಳಿಯ ಚಟ್ಟೇಶ್ವರ ದೇವಾಲಯ, ಹಳೇಬೀಡಿನ ಕಸ್ತೂರಿ ರಂಗನಾಥ, ಮುತ್ತಿನ ವೀರಭದ್ರ ದೇವಾಲಯ, ಅಡಗೂರಿನ ಲಕ್ಷ್ಮಿ ನಾರಾಯಣ ದೇವಾಲಯಗಳನ್ನು ಯುನೆಸ್ಕೊ ತಂಡ ಪರಿಶೀಲನೆ ವೇಳೆ ವೀಕ್ಷಣೆ ಮಾಡಿತ್ತು. ಈ ದೇವಾಲಯಗಳು ವಿಶ್ವದ ವಿವಿಧೆಡೆಯ ಪ್ರವಾಸಿಗರ ಗಮನ ಸೆಳೆಯಲಿವೆ’ ಎನ್ನುತ್ತಾರೆ ಇತಿಹಾಸ ಪ್ರಾಕ್ತನಶಾಸ್ತ್ರ ಪ್ರಾಧ್ಯಾಪಕ ಹಳೇಬೀಡು ಬಸವರಾಜು.

ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವುದರಿಂದ ಹಳೇ ಬೀಡು ಹಾಗೂ ಬೇಲೂರು ವಿಶ್ವಪರಂಪರೆ ಪಟ್ಟಿಗೆ ಸೇರಿರುವ ವಿಚಾರ ದೃಢವಾಗಿದೆ.

1957ರಲ್ಲಿ ಜಾರಿಗೆ ಬಂದಿರುವ ಪುರಾತತ್ವ ಅಧಿನಿಯಮ ಜಾರಿಯಾಗಬಹುದು. ಸ್ಮಾರಕ ಸುತ್ತ 100 ಮೀಟರ್ ಅಂತರದಲ್ಲಿರುವ ಕಟ್ಟಡಗಳನ್ನು ಯುನೆಸ್ದವರು ತೆರವು ಮಾಡುತ್ತಾರೆ. ಯುನೆಸ್ಕೊದಿಂದ ಅಭಿವೃದ್ಧಿಗೆ ಹಣ ಬರುವುದರಿಂದ ತೆರವು ಕಾರ್ಯ ಖಚಿತವಾಗಿ ನಡೆಯುತ್ತದೆ. ಹೊಯ್ಸಳೇಶ್ವರ ದೇವಾಲಯದ ಬಳಿಯ ಬಸ್ತಿಹಳ್ಳಿ, ಹಳೆ ಸಂತೆ ಬೀದಿ, ಬೂದಿಗುಂಡಿ ಹಾಗೂ ಹೊಯ್ಸಳೇಶ್ವರ ದೇವಾಲಯ ರಸ್ತೆಯಲ್ಲಿ 100 ಮೀಟರ್ ಅಂತರದ ಕಟ್ಟಡ ತೆರವಾಗಬಹುದು ಎಂಬ ಭಯದ ಕೆಲವರಿಂದ ಕೇಳಿ ಬಂದಿದೆ. ‘ವಿಶ್ವಪರಂಪರೆ ಪಟ್ಟಿಗೆ ಸೇರಿದ ಮಾತ್ರಕ್ಕೆ ತಕ್ಷಣ ಅಭಿವೃದ್ಧಿ ಕೆಲಸ ಆಗುವುದಿಲ್ಲ. ವಿವಿಧ ಹಂತದಲ್ಲಿ ಕೆಲಸ ಆಗಬೇಕಾಗುತ್ತದೆ ಎಂಬ ಸಮಾಧಾನದ ಮಾತು ಹಲವರು ಹೇಳುತ್ತಾರೆ.

‘100 ಮೀಟರ್ ಅಂತರದ ಕಟ್ಟಡ ತೆರವು ಮಾಡುವುದು ಯುನೆಸ್ಕೊ ನಿಯಮ ಅಲ್ಲ. ಅದು ಪುರಾತತ್ವ ಇಲಾಖೆ ನಿಯಮ. ಸಂದರ್ಭ ಬಂದಾಗ ಸ್ಮಾರಕ ಅವಶೇಷ ಅವಶೇಷಗಳನ್ನು ಹೊರತೆಗೆಯುವ ಸಂದರ್ಭದಲ್ಲಿ ಯಾವಾಗಲಾದರೂ ಕಟ್ಟಡ ತೆರವು ಆಗಬಹುದು’ ಎಂಬ ಮಾತು ಪುರಾತತ್ವ ಶಾಸ್ತ್ರಜ್ಞಹೇಳುತ್ತಾರೆ.

‘ಗ್ರಾಮ ಪಂಚಾಯಿತಿ ಸ್ವಚ್ಛತೆ ಕೈಗೊಂಡರೂ ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ ಹೊಯ್ಸಳೇಶ್ವರ ದೇವಾಲಯದ ಸುತ್ತ ನೈರ್ಮಲ್ಯದ ಕೊರತೆಯಾಗುತ್ತದೆ. ಪಾರ್ಕಿಂಗ್ ಸ್ಥಳ, ಮಯೂರ ಹೋಟೆಲ್ ಮುಂಭಾಗದ ರಸ್ತೆ, ಕೆಪಿಎಸ್ ಶಾಲೆ ಬಳಿಯ ಪ್ರದೇಶ ಕಸದ ತೊಟ್ಟಿಯಾಗುತ್ತದೆ. ಸ್ಮಾರಕ ಸುತ್ತ ಸ್ವಚ್ಛಕಾರ್ಯ ಆಗಬೇಕು. ಶೌಚಾಲಯ, ವಿಶ್ರಾಂತಿ ತಾಣ ಮೊದಲಾದ ಸೌಲಭ್ಯಗಳಾಗಬೇಕು’ ಎಂದು ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಹೇಳಿದರು.

ಕ್ಯಾತನಕೆರೆ ಗ್ರಾಮದ ಕೊರಮ ಸಮುದಾಯದವರ ಬಿದಿರು ಬುಟ್ಟಿ ಉದ್ದಿಮೆ, ಹಳೇಬೀಡು ಸುತ್ತಲಿನ ಕುಂಬಾರರ ಮಣ್ಣಿನ ಮಡಿಕೆ ಮುಂತಾದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ದೊರಕಬಹುದು. ಹೋಟೆಲ್‌, ವಸತಿಗೃಹ, ಹೋಂ ಸ್ಟೇಗಳನ್ನು ಬೆಳೆಸಲು ಅವಕಾಶ ದೊರಕುತ್ತದೆ. ಅಭಿವೃದ್ಧಿಯ ಜೊತೆಯಲ್ಲಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಆಶಾಭಾವ ಜನರಲ್ಲಿ ಮೂಡಿದೆ.

‘ಸ್ಥಳೀಯರಿಗೆ ಕೆಲಸ: ಆದಾಯ ಹೆಚ್ಚಳ’

ವಿಶ್ವಪರಂಪರೆ ಪಟ್ಟಿಗೆ ಬೇಲೂರು, ಹಳೇಬೀಡು ಸೇರಿರುವುದರಿಂದ ಸ್ಮಾರಕ ಮಾತ್ರ ಅಭಿವೃದ್ದಿ ಆಗುವುದಿಲ್ಲ. ಸರ್ಕಾರಕ್ಕೆ ಬರುವ ತೆರಿಗೆ ಆದಾಯ ಹೆಚ್ಚುತ್ತದೆ. ಸ್ಥಳೀಯವಾಗಿ ನೂರಾರು ಕೈಗಳಿಗೆ ಕೆಲಸ ದೊರಕುತ್ತದೆ ಎಂದು ನವದೆಹಲಿಯ ಪುರಾತತ್ವ ಇಲಾಖೆ ಮಹಾನಿರ್ದೇಶಕರ ಕಚೇರಿಯ ಉಪ ಅಧಿಕ್ಷಕ ಪಿ. ಅರವಝಿ ಹೇಳುತ್ತಾರೆ.

ಭೂಮಿಯಲ್ಲಿ ಹುದುಗಿರುವ, ಪ್ರಚಾರಕ್ಕೆ ಬಾರದೇ ಮೂಲೆ ಗುಂಪಾದ ಸ್ಮಾರಕಗಳು ಬೆಳಕಿಗೆ ಬರುತ್ತವೆ. ಇತಿಹಾಸದ ಮಾಹಿತಿ ಸಂಪೂರ್ಣವಾಗಿ ದೊರಕಿಲ್ಲ. ಸಮಗ್ರ ಇತಿಹಾಸದ ಮಾಹಿತಿ ಸಂಗ್ರಹಿಸುವತ್ತ ಪುರಾತತ್ವ ಶಾಸ್ತ್ರಜ್ಞರು ಹಾಗೂ ಇತಿಹಾಸಕಾರರು ಹೆಜ್ಜೆ ಹಾಕಲು ಅನುಕೂಲ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT