ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು ಮುಖ್ಯರಸ್ತೆ ವಿಸ್ತರಣೆಗೆ ‘ಗ್ರಹಣ’: ಪ್ರವಾಸಿಗರು, ಸ್ಥಳೀಯರ ಪರದಾಟ

ಕೋರ್ಟ್‌ನಿಂದ ತಡೆಯಾಜ್ಞೆ ತಂದ ಕಟ್ಟಡಗಳ ಮಾಲೀಕರು, ಹೆಚ್ಚುತ್ತಿರುವ ವಾಹನ ದಟ್ಟಣೆ
Last Updated 23 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬೇಲೂರು: ಚನ್ನಕೇಶವ ದೇಗುಲವಿರುವ ಈ ಪಟ್ಟಣ ವಿಶ್ವದ ಪ್ರಮುಖ ಪ್ರವಾಸಿ ತಾಣ. ದೇಶ, ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ದೇಗುಲದ ಶಿಲ್ಪ ವೈಭವ ವೀಕ್ಷಿಸಲು ಬರುತ್ತಾರೆ. ಆದರೆ, ದೇವಾಲಯಕ್ಕೆ ಬರಬೇಕಾದರೆ ಕಿರಿದಾದ ಮುಖ್ಯರಸ್ತೆಯಲ್ಲೇ ಬರಬೇಕು. ಮುಖ್ಯರಸ್ತೆ ವಿಸ್ತರಣೆ ಮಾಡಿ ಪ್ರವಾಸಿಗರಿಗೆ ಮತ್ತು ಸ್ಥಳೀಯ ಜನರಿಗೆ ಅನುಕೂಲ ಕಲ್ಪಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಈಡೇರಿಲ್ಲ.‌

ಮಂಗಳೂರಿನಿಂದ–ವಿಲ್ಲುಪುರಂಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ನಡುವೆ ಮುಖ್ಯರಸ್ತೆ ಹಾದು ಹೋಗುತ್ತದೆ. ಪಟ್ಟಣದ ಜೆ.ಪಿ. ನಗರದಿಂದ ಹಳೇಬೀಡು ರಸ್ತೆಯವರೆಗೆ ರಸ್ತೆ ವಿಸ್ತರಣೆ ಮಾಡಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ.

ಈಗಿರುವ ರಸ್ತೆ ಅತ್ಯಂತ ಕಿರಿದಾಗಿದೆ. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಮತ್ತು ಜನರು ಪರದಾಡಬೇಕಿದೆ. ವಾಹನ ದಟ್ಟಣೆಯಿಂದಾಗಿ ಪ್ರವಾಸಿಗರು ನಲುಗುವಂತಾಗಿದೆ. ದೇಗುಲ ತಲುಪುವಷ್ಟರಲ್ಲಿ ಮೈಕೈ ನೋವು ಕಾಣಿಸಿಕೊಂಡು ಪ್ರವಾಸಿಗರು ಉತ್ಸಾಹ ಕಳೆದುಕೊಳ್ಳುತ್ತಾರೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ದಿನ ಬಿಟ್ಟು ದಿನ ಒಂದು ಬದಿಯಲ್ಲಿ ವಾಹನ ನಿಲುಗಡೆಗೆ ಪೊಲೀಸರು ಅವಕಾಶ ಕಲ್ಪಿಸಿದ್ದರೂ ಸವಾರರು ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುತ್ತಿರುವುದು ವಾಹನ ದಟ್ಟಣೆ ಹೆಚ್ಚಲು ಕಾರಣವಾಗಿದೆ. ಪಾದಚಾರಿ ಮಾರ್ಗದಲ್ಲಿ ಓಡಾಡಲು ಆಗುವುದಿಲ್ಲ. ಆಗಾಗ್ಗೆ ಅಪಘಾತಗಳು ಸಂಭವಿಸಿ ಸಾವು, ನೋವಿಗೂ ಕಾರಣವಾಗುತ್ತಿದೆ.

ಶಾಸಕರಾಗಿದ್ದ ವೈ.ಎನ್‌.ರುದ್ರೇಶ್‌ಗೌಡರ ಸಲಹೆ ಮೇರೆಗೆ, ಸರ್ವೇನಡೆಸುವಂತೆ ಸಕಲೇಶಪುರ ಉಪವಿಭಾಗಾಧಿಕಾರಿಗೆ ಅಂದಿನ ಜಿಲ್ಲಾಧಿಕಾರಿ ಸೂಚಿಸಿದ್ದರು. ಮುಖ್ಯರಸ್ತೆ ವಿಸ್ತರಣೆಗಾಗಿ 100 ವರ್ಷಗಳ ಹಿಂದಿನ ದಾಖಲಾತಿ, ಗ್ರಾಮ ಠಾಣಾ ನಕ್ಷೆ ಸೇರಿದಂತೆ ವಿವಿಧ ದಾಖಲಾತಿಗಳ ಆಧಾರದ ಮೇಲೆ ಪಟ್ಟಣದ ಜೆ.ಪಿ ನಗರದಿಂದ ನೆಹರೂ ನಗರದವರೆಗೆ 296 ಕಟ್ಟಡಗಳನ್ನು ಗುರುತು ಮಾಡಲಾಗಿತ್ತು. ರಸ್ತೆಯ ಮಧ್ಯಭಾಗದಿಂದ 50 ಅಡಿ ವಿಸ್ತರಣೆ ಮಾಡಲು ಅಳತೆ ಮಾಡಿ ಕಟ್ಟಡ ಒಡೆಯಲು ಗುರುತು ಮಾಡಿದ್ದರು. ಈ ಸಂಬಂಧ ಕಟ್ಟಡ ಮಾಲೀಕರಿಗೆ ಪುರಸಭೆ ನೋಟಿಸ್‌ ನೀಡಿತ್ತು.

ನೋಟಿಸ್‌ ಆಧಾರದ ಮೇಲೆ 116 ಕಟ್ಟಡಗಳ ಮಾಲೀಕರು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದರು. ಆದರೆ, ತಡೆಯಾಜ್ಞೆ ತೆರವುಗೊಳಿಸಲು ಜಿಲ್ಲಾಡಳಿತ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

‘ಕಟ್ಟಡ ತೆರವು, ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಜವಾಬ್ದಾರಿ. ಕಟ್ಟಡ ತೆರವು ಮಾಡಿಕೊಟ್ಟರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮುಖ್ಯರಸ್ತೆ ಅಭಿವೃದ್ಧಿ ಮಾಡಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಂಜಿನಿಯರ್‌ ಹೇಳುತ್ತಾರೆ.

ಪಟ್ಟಣದಲ್ಲಿ ಯಾವುದೇ ಪ್ರತಿಭಟನೆ, ರಸ್ತೆ ತಡೆ, ಮೆರವಣಿಗೆ, ದೇವರ ಉತ್ಸವಗಳು ನಡೆದರೂ ಇದೇ ರಸ್ತೆಯಲ್ಲಿ ನಡೆಯಬೇಕಾಗಿದೆ. ಈ ಸಂದರ್ಭದಲ್ಲಿ ಉತ್ಸವಗಳಲ್ಲಿ ಸಾವಿರಾರು ಜನರು ಭಾಗವಹಿಸುವುದರಿಂದ ವಾಹನಗಳು ಗಂಟೆಗಟ್ಟಲೇ ನಿಲ್ಲಬೇಕಾದ ಸ್ಥಿತಿ ಇದೆ. ಇತ್ತೀಚೆಗೆ ನಡೆದ ಹನುಮ ಜಯಂತಿ ಸಂದರ್ಭದಲ್ಲಿ ನೂರಾರು ವಾಹನಗಳು ಗಂಟೆಗಟ್ಟಲೇ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ದೇಶ, ವಿದೇಶಗಳಿಂದ ಬಂದ ಪ್ರವಾಸಿಗರು ತೀವ್ರ ತೊಂದರೆ ಎದುರಿಸುವಂತಾಯಿತು.

ಹಾಗಾಗಿ ಪಟ್ಟಣದ ಮುಖ್ಯರಸ್ತೆಯಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಮುಖ್ಯರಸ್ತೆ ವಿಸ್ತರಣೆಯ ಜೊತೆಯಲ್ಲಿಯೇ ಹಾಸನ ರಸ್ತೆಯಿಂದ ಚನ್ನಕೇಶವ ದೇಗುಲಕ್ಕೆ ನೇರ ಸಂಪರ್ಕ ಕಲ್ಪಿಸುವ ಹೊಳೆಬೀದಿಯಲ್ಲಿ ಪರ್ಯಾಯ ರಸ್ತೆ ನಿರ್ಮಿಸಲು ಶಾಸಕ ಕೆ.ಎಸ್‌.ಲಿಂಗೇಶ್‌ ಉತ್ಸುಕರಾಗಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ₹15 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ, ಈ ಯೋಜನೆಯು ನನೆಗುದಿಗೆ ಬಿದ್ದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬೇಲೂರು ಪಟ್ಟಣದ ಹೊರಭಾಗದಲ್ಲಿ ವರ್ತುಲ ರಸ್ತೆ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವ ಸಹ ನನೆಗುದಿಗೆ ಬಿದ್ದಿದೆ. ಈ ಬಗ್ಗೆಯೂ ಶಾಸಕರು, ಸರ್ಕಾರ ಕ್ರಮಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.

‘ಬೇಲೂರು ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಮಾಡುವ ಪ್ರಸ್ತಾವ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಂದಿಲ್ಲ. ಮುಖ್ಯರಸ್ತೆಗೆ ಈಗಾಗಲೇ ಡಾಂಬರೀಕರಣ ಮಾಡಲಾಗಿದೆ. ಅದರ ನಿರ್ವಹಣೆ ಮೂರು ವರ್ಷ. ಮುಂದಿನ ವರ್ಷದ ಮಾರ್ಚ್‌ ತಿಂಗಳ ನಂತರ ಹೊಸ ಬಜೆಟ್‌ನಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತ್ಯನಾರಾಯಣ್‌ ತಿಳಿಸಿದರು.

‘ತುರ್ತಾಗಿರಸ್ತೆ ವಿಸ್ತರಣೆ ಆಗಲಿ’

ಜಗತ್ಪ್ರಸಿದ್ಧ ಚನ್ನಕೇಶವ ದೇಗುಲಕ್ಕೆ ಸಾವಿರಾರು ಜನರು ಭೇಟಿ ನೀಡುವುದರಿಂದ ಮುಖ್ಯರಸ್ತೆ ವಿಸ್ತರಣೆ ಆಗಲೇಬೇಕು. ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಕಟ್ಟಡ ತೆರವು ಮಾಡಿಕೊಟ್ಟರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ಅಭಿವೃದ್ಧಿ ಕೈಗೊಳ್ಳಲಿದೆ. ಈ ಸಂಬಂಧ ಜಿಲ್ಲಾಡಳಿತದ ಮೇಲೂ ಒತ್ತಡ ಹೇರಲಾಗಿದೆ ಎಂದು ಶಾಸಕ ಕೆ.ಎಸ್‌.ಲಿಂಗೇಶ್‌ ತಿಳಿಸಿದರು.

ಎಚ್.ಡಿ.ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಿ ಪಟ್ಟಣದ ಹೊಳೆಬೀದಿಯಲ್ಲಿ ಪರ್ಯಾಯ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ₹15 ಕೋಟಿ ಮಂಜೂರು ಮಾಡಿಸಲಾಗಿತ್ತು. ಹಣ ಈಗ ವಾಪಸ್‌ ಹೋಗಿದೆ. ಈ ವಿಚಾರವಾಗಿ ಸಂಬಂಧಪಟ್ಟ ಸಚಿವರ ಬಳಿ ಮಾತುಕತೆ ನಡೆಸಿ ಪರ್ಯಾಯ ರಸ್ತೆ ನಿರ್ಮಿಸಲು ಒತ್ತಾಯಿಸಲಾಗುವುದು’ ಎಂದರು.

‘ಸೂಕ್ತ ಪರಿಹಾರ ಕೊಡಲಿ’

‘ಪಟ್ಟಣದ ಮುಖ್ಯರಸ್ತೆ ವಿಸ್ತರಣೆಗೆ ಕಟ್ಟಡ ಮಾಲೀಕರ ವಿರೋಧವಿಲ್ಲ. ಈ ಕಟ್ಟಡಗಳೇ ಜೀವನಕ್ಕೆ ಆಧಾರವಾಗಿವೆ. ರಸ್ತೆ ವಿಸ್ತರಣೆ ವಿರುದ್ಧ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಸೂಕ್ತ ಪರಿಹಾರ ನೀಡಿ ಕಟ್ಟಡ ವಿಸ್ತರಣೆ ಮಾಡಲಿ’ ಎಂದು ಮುಖ್ಯರಸ್ತೆಯಲ್ಲಿರುವ ಕಟ್ಟಡಗಳ ಮಾಲೀಕರ ಸಂಘದ ಅಧ್ಯಕ್ಷ ಉಮಾಶಂಕರ್‌ ‌ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT