ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿಗೆ ತಕ್ಕಂತೆ ವರ್ತಿಸಿ: ಜೆಡಿಎಸ್‌ಗೆ ತಾಕೀತು

ಪ್ರೀತಂ ವಿರುದ್ಧ ವರಿಷ್ಠರಿಗೆ ದೇವೇಗೌಡ ದೂರು: ಹಾಸನಕ್ಕೆ ಬಂದ ಅಗರವಾಲ್‌
Published 6 ಏಪ್ರಿಲ್ 2024, 14:21 IST
Last Updated 6 ಏಪ್ರಿಲ್ 2024, 14:21 IST
ಅಕ್ಷರ ಗಾತ್ರ

ಹಾಸನ: ‘ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪರ ಪ್ರಚಾರಕ್ಕೆ ಪ್ರೀತಂಗೌಡರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಎಚ್.ಡಿ. ದೇವೇಗೌಡರು ಬಿಜೆಪಿ ವರಿಷ್ಠರಿಗೆ ದೂರು ನೀಡಿದ್ದು, ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‌ದಾಸ್‌ ಅಗರವಾಲ್‌ ಹಾಸನಕ್ಕೆ ಶನಿವಾರ ದಿಢೀರ್ ಭೇಟಿ ನೀಡಿದರು.

ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಉಪಸ್ಥಿತಿಯಲ್ಲಿ ಉಭಯ ಪಕ್ಷಗಳ ಮುಖಂಡರೊಂದಿಗೆ ಸಮನ್ವಯ ಸಭೆ ನಡೆಸಿದ ಅವರು, ‘ಮೈತ್ರಿಗೆ ಅನುಗುಣವಾಗಿ ಜೆಡಿಎಸ್ ನಾಯಕರೂ ನಡೆದುಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಮಾತನಾಡಿದ ಅಗರವಾಲ್‌, ‘ಪ್ರೀತಂಗೌಡರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ನಮ್ಮ ಆಸ್ತಿ. ಜೆಡಿಎಸ್ ನಾಯಕರು ಅವರಿಗೆ ಏಕೆ ಕರೆ ಮಾಡಿ ಮಾತನಾಡಿಲ್ಲ ಎಂದು ಪ್ರಶ್ನಿಸಿದರು. ಅವರನ್ನು ಭೇಟಿಯಾಗದೇ, ಬಿಜೆಪಿಯ ಉಳಿದ ನಾಯಕರನ್ನು ಭೇಟಿ ಮಾಡಿರುವ ಜೆಡಿಎಸ್ ಮುಖಂಡರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಜೆಡಿಎಸ್ ನಾಯಕರು ತಮ್ಮ ನಡೆ‌ವಳಿಕೆ ಬದಲಿಸಿಕೊಳ್ಳಬೇಕು. ಪ್ರೀತಂಗೌಡ ಖಂಡಿತಾ ಮೈತ್ರಿ ಪರ ಕೆಲಸ ಮಾಡುತ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು’ ಎನ್ನಲಾಗಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಗರವಾಲ್‌, ‘ನಾವು ಕಾಂಟ್ರ್ಯಾಕ್ಟ್ ಮ್ಯಾರೇಜ್ ಆಗುವುದಿಲ್ಲ. ವಿವಾಹ ನಮಗೆ ಧಾರ್ಮಿಕ ವಿಷಯ. ದೀರ್ಘಕಾಲ ಜೊತೆಯಾಗಿ ನಡೆಯಲು ಸಂಬಂಧ ಬೆಳೆಸುತ್ತೇವೆ. ಎರಡೂ ಕೈಸೇರಿದರೆ ಚಪ್ಪಾಳೆಯಾಗುತ್ತದೆ. ನಾವು ಸಹ ಈ ಸಂಬಂಧ ದೀರ್ಘಕಾಲ ಮುಂದುವರಿಯಬೇಕೆಂದು ಬಯಸುತ್ತೇವೆ’ ಎಂದು ಹೇಳುವ ಮೂಲಕ, ‘ಮೈತ್ರಿ ಮುಂದುವರಿಕೆಯಲ್ಲಿ ಜೆಡಿಎಸ್ ಪಾತ್ರವೂ ಮುಖ್ಯ’ ಎಂದು ಪರೋಕ್ಷವಾಗಿ ಹೇಳಿದರು.

‌‘ಪ್ರೀತಂಗೌಡರಿಗೆ ಮೈಸೂರು ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಅವರು ಅಲ್ಲಿದ್ದು ಕೆಲಸ ಮಾಡಬೇಕು. ಪದೇಪದೇ ಹಾಸನಕ್ಕೆ ಬರಲಾಗದು. ಕರ್ನಾಟಕದ ಉಸ್ತುವಾರಿಯಾಗಿರುವ ನಾನು, ತವರು ರಾಜ್ಯ ಉತ್ತರ ಪ್ರದೇಶಕ್ಕೆ ಹೋಗಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

ಪ್ರಜ್ವಲ್‌ ರೇವಣ್ಣ ಮಾತನಾಡಿ, ‘ಅಗರವಾಲ್‌ ಅವರ ನೇತೃತ್ವದಲ್ಲಿ ಯಶಸ್ವಿ ಸಭೆ ನಡೆಸಲಾಗಿದೆ. ಪ್ರೀತಂಗೌಡರು ಮೈಸೂರು ಕ್ಷೇತ್ರದ ಉಸ್ತುವಾರಿ ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಬರಲಿದ್ದಾರೆ’ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT