ತಾ.ಪಂ, ಜಿ.ಪಂ ನಲ್ಲೂ ಬಿಜೆಪಿಗೆ ಅಧಿಕಾರ

ಹಾಸನ: ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲ್ಲಿದ್ದು, ಕಾರ್ಯಕರ್ತರು ಒಗ್ಗೂಡಿ ಪಕ್ಷಕ್ಕಾಗಿ ದುಡಿಯಬೇಕು ಎಂದು ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಕರೆ ನೀಡಿದರು.
ನಗರದ ಎಚ್.ಎಂ.ಟಿ. ಕಲ್ಯಾಣ ಮಂಟಪದಲ್ಲಿ ಗುರುವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅರಸೀಕೆರೆ ನಗರಸಭೆ ಹಾಗೂ ಸಕಲೇಶಪುರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದೇ 18 ಮತ್ತು 19 ರಂದು ರಾಜ್ಯ ಕಾರ್ಯಕಾರಿಣಿ ಸಭೆ ಜಿಲ್ಲೆಯಲ್ಲಿ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪೂರ್ವಭಾವಿ ಸಭೆಗೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಸುರೇಶ್ ಸೇರಿದಂತೆ ಹಲವು ನಾಯಕರು ಗೈರು ಹಾಜರಿ ಹಾಗೂ ಬೆರಳಣಿಕೆ ಕಾರ್ಯಕರ್ತರು ಭಾಗವಹಿಸಿದ್ದರಿಂದ ಸಚಿವರು ಅಸಮಾಧಾನಗೊಂಡರು. ‘ಅನ್ಯ ಕಾರ್ಯ ನಿಮ್ಮಿತ್ತ ಹೋಗಬೇಕಾಗಿರುವುದರಿಂದ ಸಭೆಯನ್ನು ಎಚ್.ಕೆ. ಸುರೇಶ್ ಬಂದು ಮುಂದುವರೆಸಲಿದ್ದಾರೆ’ ಎಂದು ಎರಡು ನಿಮಿಷದಲ್ಲಿ ತಮ್ಮ ಭಾಷಣ ಮುಗಿಸಿ ಹೊರಟರು.
ಸಚಿವರು ಕಾರು ಹತ್ತಬೇಕು ಎನ್ನುವಷ್ಟರಲ್ಲಿ ಎಚ್.ಕೆ. ಸುರೇಶ್ ಬಂದು ಮಾತನಾಡಿಸಲು ಪ್ರಯತ್ನಿಸಿದರೂ ಗಮನ ಹರಿಸಲಿಲ್ಲ.
ಬಿಜೆಪಿ ಮುಖಂಡರಾದ ಚಂದ್ರಕಲಾ, ಕೆ.ಟಿ. ಕುಮಾರಸ್ವಾಮಿ, ಲೋಹಿತ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಇದ್ದರು.
ಅಬಕಾರಿ ಇಲಾಖೆ ಗುರಿ ಸಾಧನೆ: ಅಬಕಾರಿ ಇಲಾಖೆ ನಿಗದಿತ ಗುರಿ ಸಾಧಿಸಿ, ಹೆಚ್ಚುವರಿಯಾಗಿ ₹300 ಕೋಟಿ ಆದಾಯ ಬಂದಿದೆ ಎಂದು ಕೆ. ಗೋಪಾಲಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಅಬಕಾರಿ ಇಲಾಖೆಗೆ ₹22, 700 ಕೋಟಿ
ಆದಾಯ ಗುರಿ ನಿಗದಿಪಡಿಸಲಾಗಿತ್ತು. ಈಗಾಗಲೇ ಗುರಿ ಪೂರ್ಣಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ
ಬದಲಾವಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಪ‍್ರತಿಕ್ರಿಯಿಸಿ, ಈಶ್ವರಪ್ಪ ಮತ್ತು ಯಡಿಯೂರಪ್ಪ ಕುಳಿತು ಸಮಸ್ಯೆ
ಬಗೆಹರಿಸಿಕೊಳ್ಳುತ್ತಾರೆ. ನನ್ನ ಇಲಾಖೆಯಲ್ಲಿ ಯಾರು ಹಸ್ತಕ್ಷೇಪ ಮಾಡಿಲ್ಲ ಎಂದರು.
ಅರಕಲಗೂಡು ತಾಲ್ಲೂಕು ಗಂಗೂರಿನ ಜೀತ ವಿಮುಕ್ತ ಕುಟುಂಬಗಳ ತೆರವು ಕಾರ್ಯಾಚರಣೆ ಕುರಿತು
ಮಾತನಾಡಿ, ಈ ಸಂಬಂಧ ಜಿಲ್ಲಾಧಿಕಾರಿ, ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಕುಳಿತು
ಚರ್ಚಿಸಿ, ಜೀತ ವಿಮುಕ್ತರಿಗೆ ಅನುಕೂಲವಾಗುವ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.