ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂ ಐಸೋಲೇಷನ್ ರದ್ದು: ಸಚಿವ ಅಶ್ವತ್ಥ ನಾರಾಯಣ

ಕೋವಿಡ್‌ ನಿರ್ವಹಣೆಗೆ ಜಿಲ್ಲೆಗೆ ₹10 ಕೋಟಿ:
Last Updated 22 ಮೇ 2021, 13:21 IST
ಅಕ್ಷರ ಗಾತ್ರ

ಹಾಸನ: ಕೊರೊನಾ ಸೋಂಕು ತಗುಲಿ ಮನೆಯಲ್ಲೇ ಪ್ರತ್ಯೇಕವಾಗಿ (ಹೋಂ ಐಸೋಲೇಷನ್‌) ಇರಲು ಅವಕಾಶ ಇಲ್ಲ. ವಾರದ ಹಿಂದೇಯೇ ಹೋಂ ಐಸೋಲೇಷನ್‌ ರದ್ದು ಪ‍ಡಿಸಲಾಗಿದ್ದು, ಎಲ್ಲರನ್ನೂ ಕಡ್ಡಾಯವಾಗಿ ಕೋವಿಡ್ ಕೇರ್‌ ಕೇಂದ್ರ (ಸಿಸಿಸಿ) ಕ್ಕೆ ಸ್ಥಳಾಂತರ ಮಾಡಿ, ಸೋಂಕಿತರ ವಿವರ ಸಂಪೂರ್ಣ ನಮೂದಿಸಬೇಕು ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣಹೇಳಿದರು.

ಕೊರೊನಾ ಮುಕ್ತ ಗ್ರಾಮ ಮಾಡಲು ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಗಮನ ಕೊಡಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಮತ್ತು ಆರೋಗ್ಯಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ರೋಗ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಬೇಕು.ಸೋಂಕಿತರನ್ನು ಆರೈಕೆ ಕೇಂದ್ರಕ್ಕೆ ಸೇರಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಗ ಲಕ್ಷಣಗಳು ಪ್ರಾರಂಭವಾದ ಮಾಹಿತಿ ಪಡೆಕೊಂಡರೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ. ಏಕೆಂದರೆ 7–8ನೇ ದಿನ ರೋಗ ಹೆಚ್ಚಾಗಲಿದೆ. ಆರ್‌ಟಿಪಿಸಿಆರ್‌ ವರದಿ24 ಗಂಟೆಯೊಳಗೆ ಬರುವಂತೆ ನೋಡಿಕೊಳ್ಳಬೇಕು. ಮೊದಲ ಅಲೆಗೆ ಹೋಲಿಸಿದೆ ಮರಣ ಪ್ರಮಾಣಎರಡನೇ ಅಲೆಯಲ್ಲಿ ಕಡಿಮೆ ಇದೆ. ಇನ್ನೂ ಕಡಿಮೆ ಮಾಡಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಕೋವಿಡ್ ನಿರ್ವಹಣೆಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಅಡಿ ಜಿಲ್ಲೆಗೆ ₹10 ಕೋಟಿ ಅನುದಾನವನ್ನು ಸೋಮವಾರ ಬಿಡುಗಡೆ ಮಾಡಲಾಗುವುದು. ಆಮ್ಲಜನಕ, ರೆಮ್‌ಡಿಸಿವಿರ್‌, ಬ್ಲ್ಯಾಕ್‌ ಫಂಗಸ್‌ ಔಷಧಿ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಯಾವ ಔಷಧಿಯೂ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಅಗತ್ಯಬಿದ್ದರೆ ಇನ್ನಷ್ಟು ಹಣಕಾಸು ಸಂಪನ್ಮೂಲವನ್ನು ಸರ್ಕಾರ ಒದಗಿಸಲಿದೆ. ಕೋವಿಡ್‌ ವೆಚ್ಚಕ್ಕೆ ನಿರ್ಬಂಧವಿಲ್ಲ, ಜಿಲ್ಲಾಡಳಿತಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಎಷ್ಟು ಔಷಧಿಗೆ ಬೇಡಿಕೆ ಇಟ್ಟರೂ ಕೊಡಲು ಸರ್ಕಾರ ಸಿದ್ಧವಿದೆ ಎಂದರು.

ಕೋವಿಡ್ ಪರೀಕ್ಷೆ ನಡೆಸಲು ರ್‍ಯಾಪಿಡ್‌ ಆಂಟಿಜನ್‌, ಆರ್‌ಟಿಪಿಸಿಆರ್ ಕಿಟ್‌ಗಳನ್ನು ಹೆಚ್ಚು ನೀಡಲಾಗುವುದು. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ (ಎಬಿವಿಆರ್‌ಕೆ) ಯೋಜನೆಯಡಿ ಸೋಂಕಿತರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ 50 ಹಾಸಿಗೆ ಕಾಯ್ದಿರಿಸುವಂತೆ ಡಿ.ಸಿಗೆ ಸೂಚನೆ ನೀಡಲಾಗಿದೆ. ಕೋವಿಡ್ ರೋಗಿಗಳ ಚಿಕಿತ್ಸೆಗೆ ಹೆಚ್ಚು ಹಣ ಪಡೆಯುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ 50 ವೆಂಟಿಲೇಟರ್‌ಗಳನ್ನು ತ್ವರಿತವಾಗಿ ಒದಗಿಸಲುಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲೇ 2 ಸಾವಿರ ವೈದ್ಯರ ನೇಮಕ ಮಾಡಿಕೊಳ್ಳುತ್ತಿದ್ದು, ಖಾಲಿ ಇರುವ ಜಾಗಕ್ಕೆ ನಿಯೋಜಿಸಲಾಗುವುದು ಎಂದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಎಸ್‌ಡಿಆರ್‌ಎಫ್‌ ಅನುದಾನದಲ್ಲಿ ತಾಲ್ಲೂಕು ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಮಾಡಲಾಗಿದೆ. ಎರಡು ದಿನಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಬಿಡುಗಡೆ ಮಾಡಲಾಗುವುದು. ಸೋಂಕಿತರು ಬಿಡುಗಡೆಯಾದ ಬಳಿಕವೂ ಉಸಿರಾಟ ಸಮಸ್ಯೆ ಎದುರಿಸುತ್ತಿರುವುದರಿಂದ ಜಿಲ್ಲೆಗೆ 700 ಆಕ್ಷಿಜನ್ ಕಾನ್ಸನ್‌ಟ್ರೇಟರ್‌ ನೀಡುವಂತೆ ಉಪ ಮುಖ್ಯಮಂತ್ರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT