ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳಮುಖಿಯರನ್ನು ನೋಡುವ ಸ್ಥಿತಿ ಬದಲಾಗಲಿ

ಡ್ಯಾಪ್ಕ್ಯೂ ಜಿಲ್ಲಾ ಮೇಲ್ವಿಚಾರಕ ಬಿ.ಎಂ.ರವಿಕುಮಾರ್ ಸಲಹೆ
Last Updated 26 ಜುಲೈ 2018, 13:56 IST
ಅಕ್ಷರ ಗಾತ್ರ

ಹಾಸನ: ದೌರ್ಜನ್ಯ ಮತ್ತು ಕಳ್ಳತನವನ್ನು ಕೇವಲ ಮಂಗಳಮುಖಿ ಸಮುದಾಯ ಮಾಡುತ್ತಿಲ್ಲ. ಆದರೆ ಸಣ್ಣ ತಪ್ಪುಗಳನ್ನು ದೊಡ್ಡದಾಗಿ ಬಿಂಬಿಸಿ ಸಮುದಾಯವನ್ನು ಸಮಾಜದಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡ್ಯಾಪ್ಕ್ಯೂ ಜಿಲ್ಲಾ ಮೇಲ್ವಿಚಾರಕ ಬಿ.ಎಂ.ರವಿಕುಮಾರ್ ತಿಳಿಸಿದರು.

ಸಂಗಮ ಸಂಸ್ಥೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಹಮ್ಮಿಕೊಂಡಿದ್ದ 377 ಕಾಯ್ದೆ ತೀರ್ಪು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೃತೀಯ ಲಿಂಗಿಗಳು ಅಥವಾ ಮಂಗಳಮುಖಿಯರು ಮಾಡುವ ಸಣ್ಣ ತಪ್ಪುಗಳನ್ನು ದೊಡ್ಡದೆಂದು ತೋರಿಸಲಾಗುತ್ತಿದೆ. ಇದರಿಂದ ಸಮುದಾಯಕ್ಕೆ ಮುಜುಗರ ಉಂಟು ಮಾಡಿ, ಅಪರಾಧಿಗಳೆಂದು ಬಿಂಬಿಸಲಾಗುತ್ತಿದೆ. ವಾಸ್ತವವಾಗಿ ಅವರು ತಪ್ಪು ಮಾಡಿರುವುದಿಲ್ಲ ಸಮಾಜ ಅವರನ್ನು ನೋಡುವ ಮನಸ್ಥಿತಿ ಬದಲಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಭೀಮವಾದ) ಸಂಘಟನಾ ಸಂಚಾಲಕ ನಾಗರಾಜ್ ಹೆತ್ತೂರು ಮಾತನಾಡಿ, ಮಂಗಳಮುಖಿಯರು ಹಾಗೂ ಲೈಂಗಿಕ ಕಾರ್ಯಕರ್ತರಿಗೆ ಸಮಾಜದಲ್ಲಿ ಎಲ್ಲರಂತೆ ಬದುಕುವ ಹಕ್ಕಿದೆ. ಆದರೆ ಅವರನ್ನು ಅಸ್ಪೃಶ್ಯರಿಗಿಂತ ಕೀಳಾಗಿ ನೋಡುವ ಸ್ಥಿತಿ ಸಮಾಜದಲ್ಲಿದೆ. ಭಿಕ್ಷಾಟನೆ ಸೇರಿದಂತೆ ಯಾವುದೇ ವಿಚಾರದಲ್ಲಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳದೆ ತಮ್ಮ ಹಕ್ಕನ್ನು ಕಾಪಾಡಿಕೊಂಡು ಸಮಾಜದಲ್ಲಿ ಬದುಕಬೇಕು ಎಂದು ತಿಳಿಸಿದರು.

ವಿದ್ಯಾವಂತರೆ ಮಂಗಳಮುಖಿಯರ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ತೃತೀಯ ಲಿಂಗಿಗಳು, ಲೈಂಗಿಕ ಕಾರ್ಯಕರ್ತರ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆ ಇದೆ. ಪೊಲೀಸರು, ಸಮಾಜದ ಹಿರಿಯರು ಹಾಗೂ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಸಂವಾದ ನಡೆಸುವ ಮೂಲಕ ಸಮುದಾಯದ ಬಗೆಗಿನ ಪೂರ್ವಾಗ್ರಹ ಬದಲಾಯಿಸಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಸಹಕಾರ ಅತ್ಯಗತ್ಯ ಎಂದು ನುಡಿದರು.

ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಮಾತನಾಡಿ, ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಎಲ್ಲರೂ ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ಮಂಗಳಮುಖಿಯರ ಮಾನವ ಹಕ್ಕು ಉಲ್ಲಂಘನೆ ಕುರಿತು ರಚಿಸಿರುವ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು.
ಸಂಗಮ ಸಂಸ್ಥೆಯ ಕಾನೂನು ಸಲಹೆಗಾರರಾದ ನಿಶಾ ಗೋಳೂರು, ಕಾರ್ಯಕಾರಿ ನಿರ್ದೇಶಕ ರಾಜೇಶ್, ನಿರ್ದೇಶಕ ಅಶ್ವಥ್, ಜಿಲ್ಲಾಧ್ಯಕ್ಷೆ ವರ್ಷಾ, ವಕೀಲರಾದ ಬಿ.ಟಿ ವೆಂಕಟೇಶ್, ಅರವಿಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT