ಸೋಮವಾರ, ಮಾರ್ಚ್ 1, 2021
23 °C
ಕಾಂಗ್ರೆಸ್‌ ಮುಖಂಡರ ಆರೋಪಕ್ಕೆ ಉತ್ತರಿಸಲು ಸಿದ್ದ

ನಾನು ಸಿ.ಎಂ ಆಕಾಂಕ್ಷಿಯಲ್ಲ: ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾಸನ: ‘ಕಾಂಗ್ರೆಸ್‌ ಮುಖಂಡರು ಮಾಡಿರುವ ಆರೋಪಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಯಾವುದೇ ನಾಯಕರು ಕೇಳಿದರೆ ಉತ್ತರ ಕೊಡಲು ಸಿದ್ದ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

‘ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ಮೈತ್ರಿ ಧರ್ಮಕ್ಕೆ ಬದ್ಧರಾಗಿ ನಡೆದುಕೊಂಡಿದ್ದೇವೆ. ವರ್ಗಾವಣೆ ಸೇರಿ ಅನ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಗತ್ಯವೆನಿಸಿದರೆ ಸಮನ್ವಯ ಸಮಿತಿಯಲ್ಲಿಯೇ ವಿವರ ನೀಡುತ್ತೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಮ್ಮಿಶ್ರ ಸರ್ಕಾರ ಪತನವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿ ಯಾರೇ ಮಾಟ ಮಂತ್ರ ಮಾಡಿಸಿದರೂ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು. ಐದು ವರ್ಷ ಪೂರೈಸಲಿದೆ. ಸರ್ಕಾರಕ್ಕೆ ಅಥವಾ ನಮ್ಮ ಕುಟುಂಬಕ್ಕೆ ಮಾಟ-ಮಂತ್ರ ಮಾಡಿಸಿದರೆ ಅದು ಅವರಿಗೇ ರಿವರ್ಸ್ ಆಗಲಿದೆ. ಹಾಗೆ ಮಾಡಲು ಹೋದವರು ಅನುಭವಿಸಿದ್ದಾರೆ. ನಮಗೆ ರಾಹುಕಾಲ-ಗುಳಿಕಾಲ ತಟ್ಟುವುದಿಲ್ಲ. ನಮ್ಮ ಕುಟುಂಬ ಈಶ್ವರನ ಮೇಲೆ ಅಪಾರ ಭಕ್ತಿ ನಂಬಿಕೆ ಇಟ್ಟಿದೆ. ಶಿವ, ಶೃಂಗೇರಿ ಶಾರದೆ ಹಾಗೂ ಗುರುಗಳ ಅನುಗ್ರಹ ಇರುವರೆಗೂ ನನಗಾಗಲೀ, ಕುಮಾರಸ್ವಾಮಿಗಾಗಲೀ, ದೇವೇಗೌಡರಿಗಾಗಲೀ ಏನೂ ಆಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಮತ್ತು ಕುಮಾರಸ್ವಾಮಿ ಬದುಕಿರುವವರೆಗೆ ಜಗಳ ಮಾಡುವುದಿಲ್ಲ. ಯಾರಾದರೂ ಹೊಡೆದಾಡುತ್ತಾರೆ ಎಂದುಕೊಂಡಿದರೆ ಅದು ಅವರ ಭ್ರಮೆ. ಕುಮಾರಸ್ವಾಮಿ ಏನು ಕೆಲಸ ಹೇಳುತ್ತಾರೋ ಅದನ್ನು ಮಾಡುವೆ. ದೇವೇಗೌಡರು ನಮ್ಮ ನಾಯಕರು. ಕೊನೆವರೆಗೂ ಕುಮಾರಸ್ವಾಮಿ ಅವರಿಗೆ ಬಲಭುಜವಾಗಿ ನಿಲ್ಲುವೆ’ ಎಂದು ಅಭಯ ನೀಡಿದರು.

‘ನನ್ನ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ಮೀರಿದ ಸಂಬಂಧ ಇದೆ. ಕೆಲವರು ನನ್ನನ್ನು ಸೂಪರ್ ಸಿ.ಎಂ ಅಂತಾರೆ. ಅವರ ಮಾತಿನಂತೆ ಆದರೆ ಸಂತೋಷ. ನಾನು ಸಿ.ಎಂ ಆಕಾಂಕ್ಷಿಯಲ್ಲ’ ಎಂದು ಸ್ಪಷ್ಟಪಡಿಸಿದರು.

‘ರಾಜ್ಯದಲ್ಲಿ ಅನೇಕರಿಗೆ ನನ್ನ ಹೆಸರು ಹೇಳದೇ ಹೋದರೆ ಹೊಟ್ಟೆ ತುಂಬುವುದಿಲ್ಲ. ಕೆಲವು ನಾಯಕರು ನಿಮ್ಮನ್ನು ಜೈಲಿಗೆ ಕಳಿಸುತ್ತೇವೆ ಎಂದು ಕುಮಾರಸ್ವಾಮಿಗೆ ಧಮ್ಕಿ ಹಾಕಿದರು. ಏನಾಯ್ತು’ ಎಂದು ಹೆಸರು ಹೇಳದೆಯೇ ವಿರೋಧಿಗಳ ಕಾಲೆಳೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು