ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಷಡ್ಯಂತ್ರಗಳಿಗೆ ಸಿದ್ದರಾಮಯ್ಯ ಜಗ್ಗಲ್ಲ: ಸಚಿನ್‌ ಮಿಗ

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ: ಸಚಿನ್‌ ಮಿಗ
Published : 24 ಸೆಪ್ಟೆಂಬರ್ 2024, 16:10 IST
Last Updated : 24 ಸೆಪ್ಟೆಂಬರ್ 2024, 16:10 IST
ಫಾಲೋ ಮಾಡಿ
Comments

ಬೇಲೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ಹತ್ತು ವರ್ಷ ಕಳೆದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ ಎಂದು ಕಿಸಾನ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸಚಿನ್ ಮಿಗ ಹೇಳಿದರು.

ಇಲ್ಲಿನ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಿಸಾನ್ ಘಟಕದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಕಟಕಟೆಗೆ ನಿಲ್ಲಿಸಲು ಪ್ರಯತ್ನಿಸಿರಬಹುದು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸುಪ್ರೀಂ ಕೋರ್ಟ್ ಮೂಲಕ ಸಿಕ್ಕಿ ಹಾಕಿಸಲು ಪ್ರಯತ್ನಿಸಿದರು. ನೀವು ಇಂಥ ನೂರು ಷಡ್ಯಂತ್ರ ಮಾಡಿದರೂ ಅವರು ಜಗ್ಗಲ್ಲ. ದೆಹಲಿಯಲ್ಲಿ ಕೇಜ್ರಿವಾಲ್ ಅವರಿಗೆ ನೀವು ತೊಂದರೆ ಕೊಟ್ಟರೂ, ಅವರು ಜೈಲಿನಿಂದಲೇ ಅಧಿಕಾರ ನಡೆಸಿದರು. ಬಿಜೆಪಿಯವರು ಸ್ವತಂತ್ರ ಸಂಸ್ಥೆಗಳನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದ್ಧಾರೆ ಎಂದು ದೂರಿದರು.

ಬಿ.ಶಿವರಾಂ ಸೋತರೂ ಸುಮ್ಮನೆ ಕೂರದೇ ಉತ್ತಮ ಸಂಘಟನೆ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಮಾತನಾಡಿ, ಕಾರ್ಯಕರ್ತರು ಕೊನೆ ಕ್ಷಣದಲ್ಲಿ ಬೇಜವಾಬ್ದಾರಿ ತೋರಿದ್ದರಿಂದ ನಾನು ಸೋಲು ಅನುಭವಿಸಬೇಕಾಯಿತು. ನಾನು ಜನಸೇವೆಗಾಗಿ ರಾಜಕಾರಣಕ್ಕೆ ಬಂದವನು. ಅಧಿಕಾರದ ದಾಹಕ್ಕಾಗಿ ಅಲ್ಲ. ಬೇಲೂರು ಕ್ಷೇತ್ರದಲ್ಲಿ ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು ಬಗ್ಗೆಹರಿಸಲು ಯಾರೂ ಮುಂದಾಗುತ್ತಿಲ್ಲ ಎಂದರು.

ನೀರಾವರಿ ಯೋಜನೆಗಳನ್ನು ಬೇಲೂರಿಗೆ ತಂದಿದ್ದು ನಾನು, ನಾನು ಎಂದು ಹೇಳುತ್ತಾರೆ, ಮಾದಿಹಳ್ಳಿ ಏತ ನೀರಾವರಿ ಯೋಜನೆಯನ್ನು ತಂದಿದ್ದು ನಾನು. ಯಗಚಿ ಡ್ಯಾಂನಿಂದ ಈ ಭಾಗದ ರೈತರು ಭೂಮಿ ಕಳೆದುಕೊಂಡರು. ಆದರೆ ನೀರು ಹೊಳೆನರಸೀಪುರಕ್ಕೆ ಹೋಯಿತು. ಆದರೂ ಜೆಡಿಎಸ್ ಅನ್ನೇ ಗೆಲ್ಲಿಸಿದರು. ಎತ್ತಿನಹೊಳೆ ನೀರು ಬೇಲೂರಿಗೆ ಬರುವ ಯೋಜನೆ ಇರಲಿಲ್ಲ. ನಾನು ಈ ಭಾಗಕ್ಕೆ ಸಿದ್ದರಾಮಯ್ಯ ಅವರನ್ನು ಕರೆಸಿ, ತಾಂತ್ರಿಕ ಆಡಳಿತ ಮಂಜೂರಾತಿ ಮಾಡಿಸಿದ್ದೆ. ಆದರೂ ಮತ್ತೆ ಎರಡು ಬಾರಿ ಕಾಂಗ್ರೆಸ್ ಸೋಲಿಸಿದರು. ಈಗ ಮೊಟ್ಟ ಮೊದಲ ನೀರು ಹರಿದಿರುವುದು ಹಳೇಬೀಡು ಕೆರೆಗೆ. ಇದಕ್ಕೆ ಕಾರಣ ಸಿದ್ದರಾಮಯ್ಯ, ಶಿವಕುಮಾರ್ ಎಂದು ಹೇಳಿದರು.

ಸಂಸದ ಶ್ರೇಯಸ್ ಪಾಟೇಲ್ ಮಾತನಾಡಿ, ನಾವು ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಬಿಗದೇ, 2028ರ ವಿಧಾನಸಭೆ ಚುನಾವಣೆ, 2029 ರ ಲೋಕಸಭೆ ಚುನಾವಣೆ ಸೇರಿದಂತೆ, ಮುಂಬರುವ ಎಲ್ಲ ಚುನಾವಣೆಗಳನ್ನು ಗೆಲ್ಲಲು ತಯಾರಿರಬೇಕು. ಚುನಾವಣೆ ಸಂದರ್ಭದಲ್ಲಿ ನಾನು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ. ಜನಸ್ನೇಹಿಯಾಗಿ ಕೆಲಸ ಮಾಡುತ್ತೇನೆ ಎಂದರು.

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜೆ. ನಿಶಾಂತ್, ಬೇಲೂರು–ಹಳೇಬೀಡು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ತೌಫಿಕ್, ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ಉಪಾಧ್ಯಕ್ಷೆ ಉಷಾ, ಸದಸ್ಯರಾದ ಬಿ.ಎ. ಜಮಾಲೂದ್ದೀನ್, ಜಿ.ಶಾಂತಕುಮಾರ್, ಕಿಸಾನ್ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ದಿವಾಕರ್, ತಾಲ್ಲೂಕು ಘಟಕದ ಅಧ್ಯಕ್ಷ ಹನಿಕೆ ಕುಮಾರ್, ಮುಖಂಡರಾದ ಎಂ.ಆರ್.ವೆಂಕಟೇಶ್, ಬಿಕ್ಕೋಡು ಚೇತನ್, ಇಕ್ಬಾಲ್, ಬಿ.ಎಂ.ಸಂತೋಷ್, ಇತರರು ಇದ್ದರು.

‘ಸಕಾಲಕ್ಕೆ ಬರುವುದನ್ನು ರೂಢಿಸಿಕೊಳ್ಳಿ’

ನಮ್ಮ ಲೋಕಸಭಾ ಸದಸ್ಯರು ಸಕಾಲಕ್ಕೆ ಬರುವ ಅಭ್ಯಾಸ ರೂಢಿಸಿಕೊಳ್ಳಬೇಕು. ಚುನಾಯಿತ ಪ್ರತಿನಿಧಿಗಳ ಜನಗಳ ಗಹನವನ್ನು‌ ಅರ್ಥ ಮಾಡಿಕೊಳ್ಳಬೇಕು ಮನೆ ಹತ್ತಿರ ನೂರು ಜನರ ಸಮಸ್ಯೆ ಆಲಿಸುತ್ತಿರಬಹುದು ಆದರೆ ಇಲ್ಲಿರುವ ಸಾವಿರ ಜನರ ಬೆಲೆ ಏನು? ಕಾಲಕ್ಕೆ ಬೆಲೆ ಇದೆ. ನಾನು ಒಬ್ಬ ಹಿರಿಯನಾಗಿ ಲೋಕಸಭಾ ಸದಸ್ಯರಿಗೆ ಕಿವಿಮಾತು ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್‌ ಮುಖಂಡ ಬಿ. ಶಿವರಾಂ ಸಲಹೆ ನೀಡಿದರು. ಶಾಸಕರಿಂದ ಒಂದು ಗುಂಡಿ ಮುಚ್ಚುವ ಕೆಲಸವಾಗಿಲ್ಲ. ಒಂದೂ ಯೋಜನೆ ತಂದಿಲ್ಲ. 20ಸಾವಿರ ಬಗರ್ ಹುಕುಂ ಅರ್ಜಿಗಳಿದ್ದರೂ ವಿಲೇವಾರಿ ಮಾಡುತ್ತಿಲ್ಲ. ವಜಾಗೊಳಿಸಿರುವ 1460ಅರ್ಜಿಗಳ ವಿಚಾರವಾಗಿ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT