ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ನಿರಂತರವಾಗಿ ಸುರಿಯುತ್ತಿರುವ ಮಳೆ: ಜಲಾಶಯಗಳಿಗೆ ಹೆಚ್ಚಿದ ಒಳಹರಿವು

Published 8 ಜುಲೈ 2024, 15:28 IST
Last Updated 8 ಜುಲೈ 2024, 15:28 IST
ಅಕ್ಷರ ಗಾತ್ರ

ಹಾಸನ: ಬೆಳಿಗ್ಗೆಯಿಂದಲೇ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಮುಂಗಾರಿನ ಸಂಭ್ರಮ ಮನೆ ಮಾಡಿದೆ. ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆಯಾಗುತ್ತಿದ್ದು,

ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಡವರ ಊಟಿ ಎಂದೇ ಖ್ಯಾತವಾಗಿರುವ ಹಾಸನದಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ. ಭಾನುವಾರದ ರಜೆ ಮುಗಿಸಿಕೊಂಡು ಸೋಮವಾರ ಕಚೇರಿ, ಶಾಲೆ–ಕಾಲೇಜುಗಳಿಗೆ ಹೊರಟಿದ್ದ ಮಕ್ಕಳು, ನೌಕರರು, ಕೊಡೆ, ರೇನ್‌ಕೋಟ್‌ಗಳನ್ನು ಧರಿಸಿಕೊಂಡು ಮನೆಯಿಂದ ಹೊರಬರುವಂತಾಯಿತು.

ದಟ್ಟ ಮೋಡ ಕವಿದಿದ್ದು, ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಇದರಿಂದಾಗಿ ಶಿರಾಡಿ ಘಾಟ್‌ ಪ್ರದೇಶದಲ್ಲಿ ಮಂಜು ಆವರಿಸಿದೆ. ಇನ್ನೊಂದೆಡೆ ಸಕಲೇಶಪುರದಿಂದ ಮಾರನಹಳ್ಳಿವರೆಗಿನ ರಸ್ತೆಯಲ್ಲಿ ಮತ್ತೆ ಗುಂಡಿಗಳು ರಾರಾಜಿಸುತ್ತಿವೆ. ಜೊತೆಗೆ ರಸ್ತೆಯ ಮೇಲೆ ಮಣ್ಣು ಕುಸಿತದ ಅಪಾಯವೂ ಹೆಚ್ಚಾಗಿದ್ದು, ವಾಹನಗಳು ನಿಧಾನವಾಗಿ ಚಲಿಸುವಂತಾಗಿದೆ.

ಕಾರಿನ ಮೇಲೆ ಬಿದ್ದ ಮರ: ಮಳೆಯಿಂದಾಗಿ ಇಲ್ಲಿನ ಕುವೆಂಪು ನಗರದಲ್ಲಿ ಹಳೆಯ ಮರವೊಂದು ಕಾರಿನ ಮೇಲೆ ಉರುಳಿ ಬಿದ್ದಿದೆ. ಮನೆಯ ಮುಂದೆ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ.

ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದ್ದರಿಂದ ಅನಾಹುತ ತಪ್ಪಿದಂತಾಗಿದೆ. ಕಾರು ರಾಕೇಶ್ ಎಂಬುವವರಿಗೆ ಸೇರಿದ್ದಾಗಿದ್ದು, ಮರದ ಕೆಳಗೆ ನಿಲ್ಲಿಸಿದ್ದ ಕಾರಿನ ಮೇಲೆಯೇ ಮರ ಉರುಳಿ ಬಿದ್ದಿದೆ.

ನಗರದ ಹಲವು ರಸ್ತೆಗಳಲ್ಲಿ ಹಳೆಯ ಕಾಲದ ಮರಗಳಿದ್ದು, ಮಳೆಗಾಲ ಅಥವಾ ಬಿರುಗಾಳಿ ಸಂದರ್ಭದಲ್ಲಿ ಮುರಿದು ಬೀಳುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ತೆರವುಗೊಳಿಸಿ ಎಂದು ಮನವಿ ಮಾಡಿದರೂ, ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೆಚ್ಚಿದ ಒಳಹರಿವು: ಚಿಕ್ಕಮಗಳೂರು ಹಾಗೂ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಹಾಸನ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆ ಆಗಿದೆ.

ಹೇಮಾವತಿ ಜಲಾಶಯದ ಗರಿಷ್ಟ ಮಟ್ಟ 2922 ಅಡಿಗಳಾಗಿದ್ದು, ಸೋಮವಾರದ ಮಟ್ಟ 2897 ಅಡಿ ಇದೆ. ಗರಿಷ್ಠ 37.103 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದ್ದು, ಶನಿವಾರ 18.303 ಟಿಎಂಸಿ ನೀರು ಸಂಗ್ರಹವಾಗಿದೆ. 8448 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, 250 ಕ್ಯೂಸೆಕ್‌ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಹಾಸನದಲ್ಲಿ ಮಳೆಯ ನಡುವೆ ಮಹಿಳೆಯರಿಬ್ಬರು ಮಗುವಿನೊಂದಿಗೆ ಕೊಡೆಯ ಆಸರೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು. ಪ್ರಜಾವಾಣಿ ಚಿತ್ರ/ಅತೀಖುರ್‌ ರಹಮಾನ್‌
ಹಾಸನದಲ್ಲಿ ಮಳೆಯ ನಡುವೆ ಮಹಿಳೆಯರಿಬ್ಬರು ಮಗುವಿನೊಂದಿಗೆ ಕೊಡೆಯ ಆಸರೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು. ಪ್ರಜಾವಾಣಿ ಚಿತ್ರ/ಅತೀಖುರ್‌ ರಹಮಾನ್‌
ಮಳೆಯ ಸಿಂಚನದೊಂದಿಗೆ ಹಾಸನದ ಹೊರವಲಯದಲ್ಲಿ ನವಿಲೊಂದು ವಿಹರಿಸುತ್ತಿರುವುದು ಕಂಡು ಬಂತು. ಪ್ರಜಾವಾಣಿ ಚಿತ್ರ/ಅತೀಖುರ್‌ ರಹಮಾನ್‌
ಮಳೆಯ ಸಿಂಚನದೊಂದಿಗೆ ಹಾಸನದ ಹೊರವಲಯದಲ್ಲಿ ನವಿಲೊಂದು ವಿಹರಿಸುತ್ತಿರುವುದು ಕಂಡು ಬಂತು. ಪ್ರಜಾವಾಣಿ ಚಿತ್ರ/ಅತೀಖುರ್‌ ರಹಮಾನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT