ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ತಡೆಯಲು ಹಳ್ಳಿಗಳಲ್ಲಿ ಜಾಗೃತಿ ಅಗತ್ಯ: ಸಲಹೆ

Last Updated 17 ಮೇ 2021, 3:33 IST
ಅಕ್ಷರ ಗಾತ್ರ

ಹೊಳೆನರಸೀಪುರ: ಗ್ರಾಮೀಣ ಭಾಗದ ಸೋಂಕಿತರನ್ನು ಐಸೊಲೇಷನ್ ಕೇಂದ್ರಕ್ಕೇ ಸೇರಿಸಿ ಸೋಂಕು ಹರಡುವುದನ್ನು ತಪ್ಪಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೂಚನೆ ನೀಡಿದರು.

ಪುರಸಭೆ ಸಭಾಂಗಣದಲ್ಲಿ ಕೊರೊನಾ ತಡೆ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸಂಬಂಧಿಸಿದ ಅಧಿಕಾರಿಗಳು ಸೋಂಕಿತರನ್ನು ಹಳ್ಳಿಗಳಲ್ಲಿ ಬಿಡಬಾರದು. ಐಸೊಲೇಷನ್ ಕೇಂದ್ರದಲ್ಲಿ ಉತ್ತಮ ಊಟ ನೀಡಿ ಔಷಧೋಪಚಾರ ಮಾಡಬೇಕು. ಈ ಬಗ್ಗೆ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು. ಪರಿಸ್ಥಿತಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸದೆ ಇದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿ ರೋಗದ ಲಕ್ಷಣ ಕಂಡು ಬಂದ ತಕ್ಷಣ ಚಿಕಿತ್ಸೆ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಸರ್ಕಾರವೂ ಅಗತ್ಯಕ್ಕೆ ತಕ್ಕಷ್ಟು ಔಷಧಿ, ಆಮ್ಲಜನಕ ಸಿಲೆಂಡರ್‌ ಕಳುಹಿಸಬೇಕು. ಜಿಲ್ಲೆಗೆ 400 ಸಿಲಿಂಡರ್‌ ಬಂದಿದೆ. ಸೋಂಕು ಹರಡುವಿಕೆ ಇದೇ ರೀತಿ ಮುಂದುವರಿದರೆ ಇನ್ನೂ 800 ಆಮ್ಲಜನಕ ಸಿಲೆಂಡರ್ ಬೇಕಾಗುತ್ತದೆ ಎಂದರು.

ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೆ 150 ಬೆಡ್‍ ಸಿದ್ಧಪಡಿಸಲಾಗಿದೆ. ಅದರಲ್ಲಿ 51 ಆಮ್ಲಜನಕ ಬೆಡ್‍ಗಳಿದೆ. ಇನ್ನೂ 50 ಆಮ್ಲಜನಕ ಬೆಡ್‍ಗಳ ಅವಶ್ಯಕತೆ ಇದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ನಾಳೆಯೇ ಟೆಂಡರ್ ಕರೆದು ಕೆಲಸ ಪ್ರಾರಂಭಿಸಿ ಎಂದರು.

ತಾಲ್ಲೂಕಿನಲ್ಲಿ ತರಕಾರಿ, ಹೂವು ಮಾರಾಟಕ್ಕೆ ಪ್ರತಿದಿನ ಬೆಳಿಗ್ಗೆ 6 ರಿಂದ 8 ಗಂಟೆ ವರೆಗೆ ಅವಕಾಶ ನೀಡಬೇಕು. ಇಲ್ಲದೆ ಇದ್ದರೆ ರೈತರು, ಮಾರಾಟಗಾರರು ಸಂಕಷ್ಟ ಅನುಭವಿಸುತ್ತಾರೆ ಎಂದರು. ‌ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಮಾತನಾಡಿ, ತಾಲ್ಲೂಕಿನಲ್ಲಿ ಮೇ 11 ರಿಂದ ಇದುವರೆಗೆ 4,930 ಸೊಂಕಿತರನ್ನು ಪತ್ತೆ ಮಾಡಲಾಗಿದೆ. ಈ ಪೈಕಿ 2,798 ಮಂದಿ ಗುಣಮುಖರಾಗಿದ್ದು, 1203 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 1495 ಮಂದಿ ಹೋಂ ಐಸೊಲೇಷನ್‍ನಲ್ಲಿದ್ದಾರೆ. ತಾಲ್ಲೂಕಿನಲ್ಲಿ ಇದುವರೆವಿಗೆ ಕೋವಿಡ್‌ ನಿಂದಾಗಿ 67 ಜನ ಮೃತಪಟ್ಟಿದ್ದಾರೆ. 39,200 ಜನರಿಗೆ ಲಸಿಕೆ ನೀಡಲಾಗಿದೆ ಎಂದು ವಿವರಿಸಿದರು.

ತಾ.ಪಂ ಇಒ ಕೆ.ಯೋಗೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್, ಡಾ.ಲಕ್ಷ್ಮೀಕಾಂತ್, ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಸಿ.ಪಿ.ಐ ಆರ್.ಪಿ. ಅಶೋಕ್, ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್ ದಿವ್ಯಾ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮಂಜುನಾಥ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT