ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್: ಎಚ್ಚರ ವಹಿಸಿ

ಹೊರ ರಾಜ್ಯಗಳಿಂದ ಬರುವವರಿಂದ ಸೋಂಕು ಹೆಚ್ಚಳ: ನವೀನ್ ರಾಜ್ ಸಿಂಗ್‌
Last Updated 6 ಜೂನ್ 2020, 8:59 IST
ಅಕ್ಷರ ಗಾತ್ರ

ಹಾಸನ: ಅನ್ಯ ರಾಜ್ಯಗಳಿಂದ ಬರುತ್ತಿರುವವರಿಂದಲೇ ಹೆಚ್ಚು ಕೋವಿಡ್-19 ಪ್ರಕರಣಗಳು ಪತ್ತೆ ಆಗುತ್ತಿರುವ ಕಾರಣ, ಕ್ವಾರಂಟೈನ್ ವಿಷಯವಾಗಿ ಸೂಕ್ತ ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್-19 ಕುರಿತು ಶುಕ್ರವಾರ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಗೆ ಈವರೆಗೆ ಹೊರರಾಜ್ಯಗಳಿಂದ ಬಂದವರಲ್ಲಿ ಯಾರಿಗೂ ಯಾವುದೇ ರೀತಿಯ ರೋಗಲಕ್ಷಣಗಳು ಇಲ್ಲವಾದರೂ ಪಾಸಿಟಿವ್‌ ಬಂದಿರುವುದರಿಂದ ಹೆಚ್ಚು ಜಾಗ್ರತೆ ವಹಿಸಬೇಕು. ಆಸ್ಪತ್ರೆಯಿಂದ ಗುಣಮುಖರಾಗಿ ಹೋದವರನ್ನ ಹೋಂ ಕ್ವಾರಂಟೈನ್ ಮಾಡುವುದರ ಜೊತೆಗೆ ಜಿಯೋ ಫೆನ್ಸಿಂಗ್ ಮೂಲಕ ಹೊರಗೆ ಬಂದಲ್ಲಿ ಕರೆ ಮಾಡಿ ಅಥವಾ ಮನೆಗಳಿಗೆಭೇಟಿ ನೀಡಿ ಸೂಚನೆ ನೀಡಬೇಕು. ಹೋಂ ಕ್ವಾರಂಟೈನ್ ಅವಧಿ ಮುಗಿಯುವವರೆಗೂ ಹೊರಬರದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಶೀತ, ಜ್ವರ, ಉಸಿರಾಟದ ತೊಂದರೆ ಇರುವ ವ್ಯಕ್ತಿಗಳನ್ನು ಗುರುತಿಸಿ ವರದಿ ಮಾಡಲಾಗಿದೆ. ಆದರೆ, ಅವರಲ್ಲಿ ಯಾರಿಗೂ ಕೊರೊನಾ ಸೋಂಕು ತಗುಲದೇ ಇರುವುದು ಪರಿಶೀಲಿಸಬೇಕಾದ ಸಂಗತಿ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೋವಿಡ್‌ ಪ್ರಕರಣಗಳು ಹೆಚ್ಚಾಗಿ ಹೊರರಾಜ್ಯಗಳಿಂದ ಬಂದು ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದವರಾಗಿದ್ದು, ಯಾರೂ ಸಮುದಾಯದ ಸಂಪರ್ಕಕ್ಕೆ ಬಂದಿಲ್ಲ. ಹಾಗಾಗಿ ಜಿಲ್ಲೆಯೊಳಗಿನ ಶೀತ, ಜ್ವರ, ಉಸಿರಾಟದ ತೊಂದರೆ ಇರುವ ಯಾವ ವ್ಯಕ್ತಿಗೂ ಸೋಂಕು ಬಂದಿಲ್ಲ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಆಸ್ಪತ್ರೆಗಳು ತೆರೆದಿದೆ. ಮುಚ್ಚಿರುವ ಆಸ್ಪತ್ರೆಗಳಿಗೆ ನೋಟಿಸ್ ಕಳುಹಿಸಲಾಗಿದೆ ಎಂದರು.

ಮೂರು ಬಾರಿ ನೋಟಿಸ್‌ ನೀಡಿದ ನಂತರವೂ ತೆರೆಯದಿದ್ದರೆ ಆಸ್ಪತ್ರೆಯ ಪರವಾನಗಿ ರದ್ದುಗೊಳಿಸಬೇಕು. ಶೀತ, ಜ್ವರ, ಉಸಿರಾಟದ ತೊಂದರೆ ಇರುವ ವ್ಯಕ್ತಿಗಳನ್ನು ಗುರುತಿಸಲು ಮೆಡಿಕಲ್ ಶಾಪ್‍ಗಳು ತಮ್ಮಿಂದ ಔಷಧಿಗಳನ್ನು ಖರೀದಿಸುವವರ ವರದಿಯನ್ನು ಕಡ್ಡಾಯವಾಗಿ ನೀಡುವಂತೆ ಸೂಚಿಸಬೇಕು ಎಂದು ಸಿಂಗ್‌ ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್, ಉಪವಿಭಾಗಾಧಿಕಾರಿ ನವೀನ್ ಭಟ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸವಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ, ಹಿಮ್ಸ್ ನಿರ್ದೇಶಕ ಡಾ. ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT