ಸೋಮವಾರ, ಆಗಸ್ಟ್ 8, 2022
24 °C
ಇಂಧನ ದರ ಇಳಿಸಲು ರಾಜ್ಯ, ಕೇಂದ್ರ ಸರ್ಕಾರಕ್ಕೆ ಡಿ.ಕೆ.ಸುರೇಶ್‌ ಒತ್ತಾಯ

ಕೋವಿಡ್‌ ಹೊಡೆತ: ದೇಶಕ್ಕೆ ಆರ್ಥಿಕ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ದೇಶದ ಜನ ಸಂಕಷ್ಟದಲ್ಲಿರುವುದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಇಂಧನ ದರ ಇಳಿಸಬೇಕು ಎಂದು ಸಂಸದ ಡಿ.ಕೆ. ಸುರೇಶ್ ಒತ್ತಾಯಿಸಿದರು. 

ಪೆಟ್ರೋಲ್, ಡೀಸೆಲ್‌ ಲೀಟರ್‌ ದರ ₹100 ತಲುಪಿದೆ. ಪ್ರತಿ ಲೀಟರ್‌ಗೆ ₹65 ತೆರಿಗೆ ವಸೂಲಿ ಮಾಡಲಾಗುತ್ತಿದೆ. ರಾಜ್ಯದ ಐದು ಸಾವಿರ ಪೆಟ್ರೋಲ್ ಬಂಕ್‌ ಮುಂದೆ ಪ್ರತಿಭಟನೆ ನಡೆಸಲಾಗುವುದು. ಕೋವಿಡ್‌ ಹೊಡೆತದಿಂದ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಬಡತನದಲ್ಲಿ ಭಾರತ 97ನೇ ಸ್ಥಾನದಲ್ಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್‍ ಸರ್ಕಾರದ ಅವಧಿಯಲ್ಲಿ ಇಂಧನ ದರ ಏರಿಕೆ ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡಿದ್ದವರು ಇಂದು ಬಾಯಿ ಬಿಡುತ್ತಿಲ್ಲ. ಜನರ ಭಾವನೆಗಳೊಂದಿಗೆ ಆಟವಾಡಿ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಬಿಜೆಪಿಗೆ ಜನರು ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ. ಹಸ್ತ ನೋಡಿ ಜನ ಮತ ನೀಡುತ್ತಾರೆ, ಮೋದಿ ಮೋಡಿಗೆ ಮರಳಾಗುತ್ತಾರೆ ಎಂಬುದು ಸುಳ್ಳು. ಮತದಾರರು ಪ್ರಬುದ್ಧರಾಗಿದ್ದು, ಅಭಿವೃದ್ಧಿಗೆ ಆದ್ಯತೆ ನೀಡುತ್ತಾರೆ ಎಂದು ವಿಶ್ವಾಸ
ವ್ಯಕ್ತಪಡಿಸಿದರು.

ಕಾಂಗ್ರೆಸ್‍ನಲ್ಲಿ ಹಲವು ಗುಂಪುಗಳು ಇರುವುದು ನಿಜ. ಅಂದ ಮಾತ್ರಕ್ಕೆ ಯಾವುದೇ ಕೆಲಸಗಳು ಆಗುತ್ತಿಲ್ಲವೆಂದು ತಿಳಿಯಬಾರದು. ಕಾಂಗ್ರೆಸ್ ಮನೆಯಲ್ಲಿ ಗೊಂದಲ ಇದೆ. ಆದರೆ, ಒಡೆದ ಮನೆಯಲ್ಲ. ಒಳ್ಳೆಯ ಕೆಲಸಗಳು ಅದರ ಪಾಡಿಗೆ ನಡೆಯುತ್ತಿದೆ ಎಂದರು.

ಸಾಮಾಜಿಕ ಜಾಲತಾಣಗಳನ್ನು ಸುಳ್ಳು ಹೇಳುವುದಕ್ಕೆ ಬಳಸುತ್ತಿರುವ ಏಕೈಕ ಪಕ್ಷ ಬಿಜೆಪಿ. ಆದ್ದರಿಂದಲೇ ಫೇಸ್‍ಬುಕ್, ಟ್ವೀಟರ್‌, ವಾಟ್ಸ್‌ಆ್ಯಪ್ ಮೇಲೆ ಸವಾರಿ ಮಾಡುತ್ತಿದ್ದಾರೆ. ಜನರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಕೆಪಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಮಾತನಾಡಿ, ಕೊರೊನಾ 2ನೇ ಅಲೆ ಬಗ್ಗೆ ಅಪಾಯ  ಕಟ್ಟಿಟ್ಟ ಬುತ್ತಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರೂ ಬಿಜೆಪಿ ನಾಯಕರು ಗೇಲಿ ಮಾಡಿದರು. ಅದರ ಪರಿಸ್ಥಿತಿಯನ್ನು ಈಗ ಎದುರಿಸುವಂತಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‍ ಮಂಜುನಾಥ್, ಮುಖಂಡರಾದ ಸಿ.ಎಸ್. ಪುಟ್ಟೇಗೌಡ, ಬನವಾಸೆ ರಂಗಸ್ವಾಮಿ, ಬಿ.ಪಿ. ಮಂಜೇಗೌಡ, ವೈ.ಎನ್. ಕೃಷ್ಣೇಗೌಡ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.