ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ನೆಲಕಚ್ಚಿದ ಹೋಟೆಲ್ ಉದ್ಯಮ

ಪಾರ್ಸೆಲ್‌ಗೆ ಅವಕಾಶವಿದ್ದರೂ ಬಾಗಿಲು ತೆರೆಯದ ಹೋಟೆಲ್‌, ರೆಸ್ಟೋರೆಂಟ್‌ಗಳು
Last Updated 28 ಜೂನ್ 2021, 4:41 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಎರಡನೇ ಅಲೆಯ ಹೊಡೆತಕ್ಕೆ ಜಿಲ್ಲೆಯ ಹೋಟೆಲ್‌ ಉದ್ಯಮ ತತ್ತರಿಸಿ ಹೋಗಿದೆ. ಕೆಲ ಹೋಟೆಲ್‌ಗಳು ಶಾಶ್ವತವಾಗಿ ಬಂದ್‌ ಆಗಿವೆ. ಸಾವಿರಾರುಕಾರ್ಮಿಕರು ಕೆಲಸ ಇಲ್ಲದೇ ಜೀವನ ನಡೆಸಲು ಪರದಾಡುತ್ತಿದ್ದಾರೆ.

ಕೋವಿಡ್‌ ಮೊದಲ ಅಲೆ ನಿಯಂತ್ರಣಕ್ಕೆ ಜಾರಿ ಮಾಡಿದ್ದ ಲಾಕ್‌ಡೌನ್‌ನಿಂದ ಚೇತರಿಕೆ ಕಾಣುತ್ತಿದ್ದ ಬೆನ್ನಲ್ಲೇ ಎರಡನೇ ಅಲೆಯ ಲಾಕ್‌ಡೌನ್‌ನಿಂದಾಗಿ ಹೋಟೆಲ್‌ ಉದ್ಯಮ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆ ಬಳಿಕ ಜಿಲ್ಲೆಯಲ್ಲಿ ಸೋಂಕು ಕಡಿಮೆ ಆಗದ ಕಾರಣ ವಾರದಲ್ಲಿ ಮೂರು ದಿನ ಮಾತ್ರವೇ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ರಿಂದ 1ಗಂಟೆವರೆಗೆ ಮಾತ್ರಅವಕಾಶ ನೀಡಿ, ಉಳಿದ ನಾಲ್ಕು ದಿನ ಜಿಲ್ಲಾಡಳಿತ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿದ್ದು, ಕುಳಿತು ಊಟ, ತಿಂಡಿ ತಿನ್ನುವಂತಿಲ್ಲ. ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿರ್ಬಂಧಹೇರಿದ್ದರಿಂದ ಬೆಳಿಗ್ಗೆಯಿಂದ ಬಾಗಿಲು ತೆರೆದಿದ್ದರೂ ಹೋಟೆಲ್‌ಗಳತ್ತ ಸುಳಿಯುವ ಗ್ರಾಹಕರ ಸಂಖ್ಯೆ ತೀರಾ ವಿರಳ. ಹೋಟೆಲ್‌ಗಳಲ್ಲಿ ವ್ಯಾಪಾರ ಶೇಕಡಾ 15 ರಿಂದ 20 ರಷ್ಟಿದೆ.

ನಗರದ ಬಹುತೇಕ ಹೋಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲೇ ನಡೆಯುತ್ತಿವೆ. ಕಟ್ಟಡ ಬಾಡಿಗೆ, ತೆರಿಗೆ, ನೀರು, ವಿದ್ಯುತ್‌ ಶುಲ್ಕ, ಕಾರ್ಮಿಕರ ವೇತನ, ಪರವಾನಗಿನವೀಕರಣ ಶುಲ್ಕ
ಸೇರಿದಂತೆ ವಿವಿಧ ಖರ್ಚು ಭರಿಸಲು ಸಾಧ್ಯವಾಗದೆ ಮಾಲೀಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ.

ವಾಹನಗಳ ಓಡಾಟಕ್ಕೆ ನಿರ್ಬಂಧ ಇರುವುದರಿಂದ ಪಾರ್ಸೆಲ್‌ ಕೊಂಡೊಯ್ಯುವವರ ಸಂಖ್ಯೆಯೂ ಕಡಿಮೆ. ಹೋಟೆಲ್ ತೆರೆದರೂ ಗ್ರಾಹಕರ ಕೊರತೆಯಿಂದ ವ್ಯಾಪಾರವಾಗುತ್ತಿಲ್ಲ. ಅಲ್ಲದೇ ಕಳೆದ ಒಂದು ವಾರ ಸುರಿದ ಜೋರು ಮಳೆಯಿಂದ ಜನರು ಹೊರಗೆ ಬರಲಿಲ್ಲ.

ಪಾರ್ಸೆಲ್‌ ಸೇವೆ ನಂಬಿಕೊಂಡು ನಡೆಸಲು ಸಾಧ್ಯವಾಗದ ಕಾರಣ ಅನೇಕ ಹೋಟೆಲ್‌ಗಳು ಬಾಗಿಲು ತೆರೆದಿಲ್ಲ. ಕೆಲ ಹೋಟೆಲ್‌ಗಳು ಕಾಯಂ ಗ್ರಾಹಕರನ್ನು ಕಳೆದುಕೊಳ್ಳಲು ಇಚ್ಛಿಸದೆ ಅನಿವಾರ್ಯವಾಗಿ ಪಾರ್ಸೆಲ್‌ ಸೇವೆ ಒದಗಿಸುತ್ತಿವೆ.

ಕೋವಿಡ್‌ ಕಾರಣದಿಂದ ನಷ್ಟ ಹೊಂದಿ ಕಳೆದ ವರ್ಷ ಬಾಗಿಲು ಮುಚ್ಚಿದ್ದ ಹತ್ತಕ್ಕೂ ಹೆಚ್ಚು ಹೋಟೆಲ್‌ಗಳು ಈ ವರ್ಷವೂ ತೆರೆದಿಲ್ಲ. ಕುಳಿತು ತಿನ್ನಲು ಅವಕಾಶ ಇಲ್ಲದ ಕಾರಣ ಹೊಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಹೊರ ಜಿಲ್ಲೆ ಹಾಗೂ ರಾಜ್ಯಗಳ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ.

ಹಾಸನದಲ್ಲಿ 50 ಲಾಡ್ಜ್‌ಗಳಿವೆ. ನಗರದಲ್ಲಿ ಸ್ಟಾರ್‌ ಹೋಟೆಲ್‌, ಮಧ್ಯಮ ದರ್ಜೆ, ಕ್ಯಾಂಟೀನ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ ಸೇರಿದಂತೆ ಒಟ್ಟು 300ಕ್ಕೂ ಅಧಿಕ ಹೋಟೆಲ್‌ಗಳಿವೆ. ಬಹುತೇಕ ಹೋಟೆಲ್‌ಗಳು ಪ್ರವಾಸಿಗರನ್ನು ನಂಬಿಕೊಂಡು ಕಾರ್ಯ ನಿರ್ವಹಿಸುತ್ತಿವೆ. ಕೆಲವು ಸ್ಥಳೀಯರನ್ನು ಅವಲಂಬಿಸಿವೆ.

‘ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ತತ್ತರಿಸಿದ್ದ ಹೋಟೆಲ್ ಉದ್ಯಮ ಡಿಸೆಂಬರ್‌ನಲ್ಲಿ ಚೇತರಿಕೆ ಕಂಡಿತ್ತು. ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಹೋಟೆಲ್ ಉದ್ಯಮ ನೆಲ ಕಚ್ಚಲಾರಂಭಿಸಿತು. ಹೋಟೆಲ್ ಮುಚ್ಚಿದರೆ ಕಾಯಂ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಿಂದಾಗಿ ಕೆಲವರು ಹೋಟೆಲ್ ತೆರೆದು ಪಾರ್ಸೆಲ್ ಸೇವೆ ನೀಡುತ್ತಿದ್ದಾರೆ. ಕೆಲ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ’ ಎಂದು ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ ಪ್ರವೀಣ್ ತಿಳಿಸಿದರು.

‘ವಿದ್ಯುತ್‌‌, ನೀರಿನ ಶುಲ್ಕ, ಕಾರ್ಮಿಕರ ಸಂಬಳಕ್ಕೆ ಸಾಕಷ್ಟು ಸಮಸ್ಯೆ ಆಗಿದೆ. ಬಹುತೇಕ ಹೋಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಪಾರ್ಸೆಲ್‌ಗೆ ಅವಕಾಶ ನೀಡಿದ್ದರೂ ವ್ಯಾಪಾರ ಶೇ 20 ರಷ್ಟು ಮಾತ್ರ ನಡೆಯುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT