ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು  ಇಳಿಕೆ: ಆಸ್ಪತ್ರೆ  ಮೇಲಿನ  ಒತ್ತಡ  ಕಡಿಮೆ

ಎರಡಂಕಿಗೆ ಇಳಿದ ಕೋವಿಡ್‌ ಪ್ರಕರಣ; ಗುಣಮುಖರ ಸಂಖ್ಯೆ ಹೆಚ್ಚಳ
Last Updated 14 ಫೆಬ್ರುವರಿ 2022, 7:42 IST
ಅಕ್ಷರ ಗಾತ್ರ

ಹಾಸನ: ಕೋವಿಡ್‌ ಮೂರನೇ ಅಲೆ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳಿದೆ.

ಮೂರನೇ ಅಲೆ ವೇಗವಾಗಿ ಹರಡಿದರೂ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡದ ಕಾರಣ ಶೇಕಡ 96ರಷ್ಟು ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಂಡರು. ಇದರಿಂದ ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಆಯಿತು.
ಅದರಲ್ಲೂ ಐಸಿಯು, ಆಕ್ಸಿಜನ್‌ ಕೊರತೆಯ ಸಂದರ್ಭವೇ ಎದುರಾಗಲಿಲ್ಲ.

ಮೈ, ಕೈ ನೋವು, ಜ್ವರ ಕಾಣಿಸಿಕೊಳ್ಳುತ್ತಿತ್ತು. ಸೋಂಕಿತರ ಮನೆಗೆ ಆರೋಗ್ಯ ಇಲಾಖೆ ವತಿಯಿಂದ ಕಿಟ್‌ಗಳನ್ನು ಪೂರೈಸಿ, ಆರೋಗ್ಯ ವಿಚಾರಿಸಲಾಯಿತು.

ಪಬ್‌, ಬಾರ್‌, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ತಡರಾತ್ರಿವರೆಗೂ ವ್ಯಾಪಾರ ವಹಿವಾಟು ನಡೆಯುತ್ತಿದೆ. ವಾರದ ಸಂತೆ, ಜಾತ್ರೆ, ಉತ್ಸವ ಎಂದಿನಂತೆ ನಡೆಯುತ್ತಿವೆ. ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಲು ಆರಂಭಿಸಿದ್ದಾರೆ.

ಕಳೆದೊಂದು ವಾರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಇಳಿಕೆಯಾಗಿದೆ. ಜನವರಿ ತಿಂಗಳಲ್ಲಿ ಎರಡು ಸಾವಿರದ ಗಡಿ ದಾಟಿದ್ದ ಕೋವಿಡ್ಪ್ರಕರಣಗಳ ಸಂಖ್ಯೆ ಈಗ ಎರಂಡಕಿಗೆ ಇಳಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1174ಕ್ಕೆ ಇಳಿದಿದೆ. ಐಸಿಯುನಲ್ಲಿ 13 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರನೇ ಅಲೆಯಲ್ಲಿ 35 ಜನರು ಮೃತಪಟ್ಟಿದ್ದಾರೆ.

ಮತ್ತೊಂದು ಸಮಾಧಾನದ ಸಂಗತಿ ಎಂದರೆ ಜಿಲ್ಲೆಯ ಸೋಂಕು ದೃಢ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಒಟ್ಟಾರೆ ಸೋಂಕು ದೃಢ ಶೇ 36 ರಿಂದ ಶೇ 3.45ಕ್ಕೆ ಇಳಿದಿದ್ದು, ರಾಜ್ಯದಲ್ಲಿ ಹಾಸನ ಜಿಲ್ಲೆ 23ನೇ ಸ್ಥಾನದಲ್ಲಿದೆ. 30,044 ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಕೋವಿಡ್‌ ಆರೈಕೆ ಕೇಂದ್ರಗಳು ಬಂದ್ ಆಗಿವೆ.

ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಗರಿಷ್ಠ ಮೂರು ತಿಂಗಳು ಜನತೆಯನ್ನೂ ಬಿಟ್ಟು ಬಿಡದೆ ಕಾಡಿತ್ತು. ಜನವರಿಯಿಂದ ಕಂಡು ಬಂದ ಮೂರನೇ ಅಲೆಯ ತೀವ್ರತೆ ಕಡಿಮೆ ಇದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿಲ್ಲ.

ಸೋಂಕು ಕಡಿಮೆಯಾಗುತ್ತಿದ್ದಂತೆ ಜನರು ಕೋವಿಡ್‌ ಮಾರ್ಗಸೂಚಿ ಪಾಲಿಸುತ್ತಿಲ್ಲ. ಸಾರ್ವಜನಿಕ ಪ್ರದೇಶಗಳಲ್ಲಿ ಜನರು ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಮಾರುಕಟ್ಟೆ ಪ್ರದೇಶಗಳು, ವಾಣಿಜ್ಯ ಮಳಿಗೆಗಳು, ಅಂಗಡಿಗಳು, ಸಂತೆಗಳು, ಉತ್ಸವಗಳು, ಮೊದ
ಲಾದ ಕಡೆ ಜನರು ಅಂತರ ಕಾಯ್ದುಕೊಳ್ಳುವುದನ್ನು ಮರೆಯುತ್ತಿದ್ದಾರೆ.

ಹೊಳೆನರಸೀಪುರದಲ್ಲೂ ಮೂರನೆ ಅಲೆ ಜನರಿಗೆ ಹೆಚ್ಚು ತೊಂದರೆ ಕೊಡಲಿಲ್ಲ, ಸಾಕಷ್ಟು ಜನರು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದರು. ಶೀತ, ನೆಗಡಿ, ಕೆಮ್ಮು, ಮೈ, ಕೈ ನೋವು ಕಾಣಿಸಿಕೊಂಡಿತ್ತು.

‘ಮೊದಲೆರೆಡು ಅಲೆಯಷ್ಟು ಮೂರನೇ ಅಲೆ ಬಾಧಿಸಲಿಲ್ಲ. 1258 ಜನರಿಗೆಕೋವಿಡ್ ಪಾಸಿಟಿವ್‌ ಬಂದಿದ್ದರೂ ಯಾರಿಗೂ ತೀವ್ರವಾದ ಸಮಸ್ಯೆ ಆಗಲಿಲ್ಲ. ಇಬ್ಬರು ವೃದ್ಧರು ಮೃತಪಟ್ಟಿದ್ದಾರೆ’ ಎಂದು ಶ್ವಾಸಕೋಶ ತಜ್ಞ ಡಾ. ನಟರಾಜ್ತಿಳಿಸಿದ್ದಾರೆ.

ಆಲೂರು ತಾಲ್ಲೂಕಿನಲ್ಲಿ ಮೂರನೇ ಅಲೆ ಆರ್ಭಟ ತಗ್ಗಿರುವುದರಿಂದ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗಿದೆ. ಸೋಂಕಿತರು ದಾಖಲಾಗುತ್ತಿಲ್ಲ. ಹೊರ ರೋಗಿಗಳ ವಿಭಾಗದಲ್ಲೂ ಶೇ 50ರಷ್ಟು ರೋಗಿಗಳು ಕಡಿಮೆಯಾಗಿದ್ದಾರೆ.

‘ಅರಕಲಗೂಡು ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪ್ರಾರಂಭದ ಹಂತದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ರೋಗಿಗಳು ಬರುತ್ತಿದ್ದರು. ಈಗ ಕೋವಿಡೇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ’ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ತಿಳಿಸಿದರು.

‘ನಿತ್ಯ ಸಾವಿರ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕು ಇಳಿಕೆಯಾಗಿದೆ ಎಂದು ಜನರು ಮೈಮರೆಯಬಾರದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿಗೌಡ ಹೇಳಿದರು.

ಹಿರೀಸಾವೆ ಹೋಬಳಿಯಲ್ಲಿ ಜ್ವರ, ಶೀತ, ನೆಗಡಿ, ಕೆಮ್ಮಿನ ಲಕ್ಷಣ ಇರುವ ಹೊರ ರೋಗಿಗಳ ಸಂಖ್ಯೆ ಹೆಚ್ಚು ಇತ್ತು. ಹತ್ತು ದಿನದಿಂದ ಹೊರ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ.

‘ಶೇ 80ರಷ್ಟು ಜನರಿಗೆ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಹಲವರಿಗೆ ಕೋವಿಡ್ ದೃಢಪಟ್ಟಿದರೂ ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ’ ಎಂದು ದಂತ ವೈದ್ಯ ಡಾ. ಗಿರೀಶ್ ಹೇಳಿದರು.

ಹಳೇಬೀಡಿನ ಸಮುದಾಯ ಆಸ್ಪತ್ರೆಯಲ್ಲಿ ನಿತ್ಯ 50 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ದಿನಕ್ಕೆ ಒಂದೆರೆಡು ರೋಗಿಗಳಿಗೆ ಮಾತ್ರ ಸೋಂಕು ಕಾಣಿಸುತ್ತಿದೆ.

‘ಮೊರಾರ್ಜಿ ವಸತಿ ಶಾಲೆ, ಕಲ್ಪತರು ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಈಗ ಎಲ್ಲರೂ ಆರೋಗ್ಯವಾಗಿದ್ದಾರೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ನಾರಾಯಣ್ ತಿಳಿಸಿದರು.

‘ಬೇಲೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವಾರದಿಂದ ಕೋವಿಡ್ ರೋಗಿಗಳು ಯಾರೂ ದಾಖಲಾಗಿಲ್ಲ. ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ತಿಳಿಸಿದರು.

‘ಅರಸೀಕೆರೆ ತಾಲ್ಲೂಕು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಕಡಿಮೆ ಇದೆ. ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಜೇನುಕಲ್ಲು ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲೂ ಪ್ರತ್ಯೇಕ ಕೋವಿಡ್ ಕೇಂದ್ರ ತೆರೆಯಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ ನಾಗಪ್ಪ ತಿಳಿಸಿದರು.

ನಿರ್ವಹಣೆ: ಕೆ.ಎಸ್.ಸುನಿಲ್‌,
ಪೂರಕ ಮಾಹಿತಿ: ಜೆ.ಎಸ್.ಮಹೇಶ್‌, ಎಂ.ಪಿ.ಹರೀಶ್, ಎಚ್‌.ವಿ. ಸುರೇಶ್ ಕುಮಾರ್,‌ ಜಿ.ಚಂದ್ರಶೇಖರ್‌, ಹಿ.ಕೃ.ಚಂದ್ರಶೇಖರ್‌, ಎಚ್.ಎಸ್‌.ಅನಿಲ್‌ ಕುಮಾರ್‌, ಮಲ್ಲೇಶ್‌, ಜೆ.ಎನ್‌.ರಂಗನಾಥ್‌ ‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT