ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಿಂಪಡೆಯಲು ದೇವೇಗೌಡ ಆಗ್ರಹ

ಡಿಸಿ ಕಚೇರಿ ಎದುರು ಜೆಡಿಎಸ್‌ ನಾಯಕರ ಧರಣಿ
Last Updated 14 ಆಗಸ್ಟ್ 2020, 15:45 IST
ಅಕ್ಷರ ಗಾತ್ರ

ಹಾಸನ: ‘ರೈತ ಮತ್ತು ಕಾರ್ಮಿಕ ವಿರೋಧಿಯಾಗಿರುವ ಭೂ ಸುಧಾರಣಾ ಕಾಯ್ದೆ, ಎ‍ಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಹಿಂತೆಗೆದುಕೊಳ್ಳಬೇಕು’ಎಂದು ಆಗ್ರಹಿಸಿ ಜೆಡಿಎಸ್‌ ಪಕ್ಷದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪಕ್ಷದ ಬಾವುಟ ಹಿಡಿದು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಡಿಸಿ ಕಚೇರಿ ಆವರಣದಲ್ಲಿ ಹಾಕಿದ್ದ ಶಾಮಿಯಾನದ ಕೆಳಗೆ ಕುಳಿತು ಕಾರ್ಯಕರ್ತರು ಭಾಷಣ ಕೇಳುತ್ತಿದ್ದ ವೇಳೆ ಮಳೆ ಆರಂಭವಾಯಿತು. ಮಳೆಯ ನಡುವೆಯೇ ನಾಯಕರು ಭಾಷಣ ಮುಂದುವರೆಸಿದರು. ಅಂಗರಕ್ಷಕರು ಅವರಿಗೆ ಕೊಡೆ ಹಿಡಿದರು.

ನೇತೃತ್ವ ವಹಿಸಿದ್ದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮಾತನಾಡಿ, ಕೊರೊನಾ ಸಂಕಷ್ಟ
ಕಾಲದಲ್ಲಿ ಈ ಮೂರು ಕಾಯಿದೆಗಳಿಗೆ ತಿದ್ದುಪಡಿ ತಂದಿರುವುದನ್ನು ಮರು ಪರಿಶೀಲನೆ ನಡೆಸಿ, ಹಿಂಪಡೆಯಬೇಕು. ತಿಂಗಳ ಅಂತ್ಯದೊಳಗೆ ಎಲ್ಲಾ ಜಿಲ್ಲೆಗಳಲ್ಲೂಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು. ಕಾಯ್ದೆಗಳ ತಿದ್ದುಪಡಿಯಿಂದ ಏನು ಪರಿಣಾಮ ಎಂಬುವುದರ ಬಗ್ಗೆ ಗ್ರಾಮೀಣ ಭಾಗದ ಅನೇಕರಿಗೆ ಗೊತ್ತಿಲ್ಲ. ಆದ್ದರಿಂದ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ಹಂಚುವ ಮೂಲಕ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ರೈತ ಸಂಘಟನೆಗಳು, ಸಿಪಿಎಂ, ಸಿಪಿಐ ಸಹ ಇದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಸಿದ್ಧರಾಮಯ್ಯ ಅವರ ಕಾಲದ ಅನೇಕ ಯೋಜನೆಗಳನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಂದುವರೆಸಲಾಯಿತು. ಬಿಜೆಪಿ ಸರ್ಕಾರ ಇದೇ ರೀತಿ ಸುಗ್ರೀವಾಜ್ಞೆಗಳ ಮೂಲಕ ತಿದ್ದುಪಡಿ ಮಾಡುತ್ತಾ ಆಡಳಿತ ನಡೆಸುತ್ತಿದ್ದರೆ ಜನರೇ ಮುಂದಿನ ದಿನಗಳಲ್ಲಿ ಬುದ್ದಿ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಶಾಸಕ ಎ.ಟಿ ರಾಮಸ್ವಾಮಿ ಮಾತನಾಡಿ, ಕಪ್ಪು ಹಣದಿಂದ ರೈತರ ಭೂಮಿ ಖರೀದಿಸಿ ಹೆಚ್ಚು ವರಮಾನ ತೋರಿಸಿ ಕಪ್ಪು ಹಣವನ್ನು ಬಿಳಿ ಹಣ ಮಾಡುತ್ತಾರೆ.ಅಲ್ಲದೇ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಾರೆ. ಹಣವಂತರು ಈಗಾಗಲೇ ಕೃಷಿ ಭೂಮಿ ಖರೀದಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಟೀಕಿಸಿದರು.

ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳಿಗೆ ರೈತರ ಹಿತ ಮುಖ್ಯವಲ್ಲ.
ರೈತರಿಂದ ಭೂಮಿ ಕಸಿದುಕೊಂಡು ಕೈಗಾರಿಕೆ, ಗಾರ್ಮೆಂಟ್ಸ್‌ ಇತ್ಯಾದಿ ಸ್ಥಾಪನೆ ಮಾಡುವುದಾಗಿ ಹೇಳಿ ಜಮೀನ್ದಾರನಾಗಿದ್ದವನಿಗೆ ಕಾವಲುಗಾರನ ಕೆಲಸ ನೀಡಿ ದುಡಿಸಿಕೊಳ್ಳಲಾಗುತ್ತದೆ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ವರ್ತಕರಿಗೆ, ರೈತರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಶಾಸಕರಾದ ಸಿ.ಎನ್‌. ಬಾಲಕೃಷ್ಣ, ಕೆ.ಎಸ್‌.ಲಿಂಗೇಶ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್‌, ಕರೀಗೌಡ ಹಾಗೂ ನೂರಾರು ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT