ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ ಸ್ಥಗಿತಕ್ಕೆ ಒತ್ತಾಯ

Published 23 ಮೇ 2024, 13:40 IST
Last Updated 23 ಮೇ 2024, 13:40 IST
ಅಕ್ಷರ ಗಾತ್ರ

ಹಾಸನ: ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಸಾಲಿನಲ್ಲಿ ಗಣಿಗಾರಿಕೆ ನಡೆಸುತ್ತಿರುವುದನ್ನು ನಿಷೇಧಿಸಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಪಶ್ಚಿಮಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿ ಒತ್ತಾಯಿಸುತ್ತದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ಕಾಡುಗಳ ಸಾಲಿನಲ್ಲಿ ಬರುವ ಕೆಲ ಗ್ರಾಮದಲ್ಲಿ ಗಣಿಗಾರಿಕೆ ಆರಂಭಿಸಿರುವುದರಿಂದ, ಆನೆಗಳ ಉಪಟಳ ಹೆಚ್ಚಾಗಲಿದ್ದು, ಪರಿಸರಕ್ಕೆ ಹಾನಿಯಾಗಲಿದೆ ಎಂದರು.

2007ರಲ್ಲಿ ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ಬಗ್ಗೆ ವಿವಿಧ ಇಲಾಖೆಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ, ಇಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಆದೇಶ ಹೊರಡಿಸಲಾಗಿತ್ತು ಎಂದರು.

ಆದರೆ ಇತ್ತೀಚಿಗೆ ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿ ಹೊಸಕೋಟೆ ಗ್ರಾಮಕ್ಕೆ ಸೇರಿದ ರೋಡಿಕ್ ಎಸ್ಟೇಟ್‌ನಲ್ಲಿ ಗಣಿಗಾರಿಕೆ ಪ್ರಾರಂಭಿಸಿದ್ದು, ಈ ಪ್ರದೇಶವು ಸಮುದ್ರಮಟ್ಟದಿಂದ 4ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಕೊಡಗಿನ ಭತ್ತದ ರಾಶಿ ಬೆಟ್ಟಗಳ ಮಧ್ಯದಲ್ಲಿದ್ದು, ನೂರಾರು ವಿವಿಧ ಜಾತಿಯ ಮರಗಳು, ಪ್ರಾಣಿ-ಪಕ್ಷಿಗಳು ನಶಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಇದೀಗ ಇಲ್ಲಿ ಗಣಿಗಾರಿಕೆ ಆರಂಭಿಸಿರುವುದರಿಂದ ಪರಿಸರಕ್ಕೆ ಮತ್ತಷ್ಟು ಮಾರಕವಾಗಿದ್ದು. ಚಿಕ್ಕ ಚಿಕ್ಕ ಹೊಳೆಗಳಾಗಿ ಹರಿದು ಕಾವೇರಿ ಹಾಗೂ ಹೇಮಾವತಿ ನದಿಗಳಿಗೆ ಸೇರುವ ಜಲ ಮೂಲಗಳು ಹಾನಿಯಾಗಲಿದೆ. ಇದರಿಂದ ಜಿಲ್ಲೆಯ ಕುಡಿಯುವ ನೀರು, ಎತ್ತಿನಹೊಳೆ ಯೋಜನೆಗೂ ತೊಡಕಾಗಲಿದೆ. ಹೊಸೂರು, ಚಂಗಡಿಹಳ್ಳಿ, ಉಚ್ಚಂಗಿ ಗ್ರಾಮಗಳ ಪಂಚಾಯಿತಿ ವ್ಯಾಪ್ತಿಗಳಲ್ಲಿ ಗಣಿಗಾರಿಕೆ ಸ್ಥಗಿತಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಡಿಎಫ್ಒ ಅವರಿಗೆ ಒಕ್ಕೂಟ ಹಾಗೂ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು.

ಮತ್ತೊಂದೆಡೆ ಮಲೆನಾಡು ಪ್ರದೇಶದಲ್ಲಿ ಕಾಡಾನೆಗಳ ಹಾವಳಿಯಿಂದ ಕಾಫಿ ಬೆಳೆಗಾರರು ಹಾಗೂ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಹೆಚ್ಚು ಬೀಡು ಬಿಟ್ಟಿರುವ ಕಾಡಾನೆ ಹಿಂಡಿನ ಉಪಟಳದಿಂದ ತೊಂದರೆ ಉಂಟಾಗಿದೆ. ಕಾಡಾನೆ ಸೇರಿದಂತೆ ಕಾಡುಪ್ರಾಣಿಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಮನವಿಗೆ ಸ್ಪಂದನೆ ಸಿಗದಿದ್ದರೆ, ಮಲೆನಾಡು ಭಾಗದ ರೈತರು ಕಾಫಿ ಬೆಳೆಗಾರರು ಸೇರಿ ಹೋರಾಟವನ್ನು ಹಮ್ಮಿಕೊಳ್ಳುವ ಕುರಿತು ಚಿಂತನೆ ಇದೆ ಎಂದರು.

ಬಿ.ಎಂ. ನಾಗರಾಜ್, ರಾಮಚಂದ್ರ, ಬಿ.ಜಿ. ಯತೀಶ್, ಪುಟ್ಟೇಗೌಡ, ಬಸಪ್ಪ, ಪುಟ್ಟಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT