ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕತೆಯಲ್ಲಿ ತಾರತಮ್ಯ: ಮಳಗಿ ಬೇಸರ: ಪ್ರಾಧ್ಯಾಪಕ ಹಾಗೂ ಚಿಂತಕ ಕೇಶವ ಮಳಗಿ

‘ಯಕ್ಷಿಣಿ ಕನ್ನಡಿ’ ಕವನ ಸಂಕಲನ ಬಿಡುಗಡೆ
Last Updated 15 ನವೆಂಬರ್ 2021, 3:57 IST
ಅಕ್ಷರ ಗಾತ್ರ

ಹಾಸನ: ‘ವೈಚಾರಿಕತೆಯಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯವನ್ನು ಇಂದು ಕಾಣುತ್ತಿದ್ದೇವೆ. ಈ ಎಲ್ಲವನ್ನು ನಿವಾರಿಸಿಕೊಂಡಾಗ ನಾವು ನೈತಿಕವಾಗಿ ಶುದ್ಧವಾಗಿರಲು ಸಾಧ್ಯ’ ಎಂದು ಪ್ರಾಧ್ಯಾಪಕ ಹಾಗೂ ಚಿಂತಕ ಕೇಶವ ಮಳಗಿ ಹೇಳಿದರು.

ನಗರದ ಸಂಸ್ಕೃತಂ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಹೊನಾ ನೆನಪಿನ ಮಾಲಿಕೆ -3 ಜ.ನಾ ತೇಜಶ್ರೀ ಅವರ ಕವನ ಸಂಕಲನ ‘ಯಕ್ಷಿಣಿ ಕನ್ನಡಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜ.ನಾ ತೇಜಶ್ರೀ ಅವರ ಸಾಹಿತ್ಯದಲ್ಲಿ ಕಾಣುವ ವೈಚಾರಿಕತೆ ಮತ್ತು ಭಾವುಕತೆ ಎರಡೂ ಅವರ ತಂದೆಯಿಂದ ಕಲಿತಿದ್ದಾರೆ’ ಎಂದರು.

‘ರಾಜಕೀಯ ಮತ್ತು ತತ್ವಶಾಸ್ತ್ರ ಎರಡರ ನಡುವೆಯೂ ಸಂಘರ್ಷವಿದೆ. ವೈಚಾರಿಕ ಸಂಘರ್ಷಮಯವಾದ ವಾತಾವರಣ ಇಂದು ದೇಶದಲ್ಲಿ ಕಾಣುತ್ತೇವೆ. ಯಾವುದೇ ವಿಷಯ ಮುನ್ನೆಲೆಗೆ ಬಂದರೂ ಅದರಲ್ಲಿ ಪರ ವಿರೋಧವನ್ನು ನಾವು ನೋಡಬಹುದು. ನಮ್ಮ ಸಾಹಿತ್ಯ ಯಾವಾಗಲೂ ಚಲನಶೀಲ ಸಮಾಜ ನಿರ್ಮಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಇರಬೇಕು’ ಎಂದು ಹೇಳಿದರು.

ಚಿತ್ರ ಕಲಾವಿದ ಪ.ಸ. ಕುಮಾರ್‌ ಮಾತನಾಡಿ, ‘ನಾನು ಪತ್ರಿಕೆಗಳಿಗೆ ಚಿತ್ರಗಳನ್ನು ನೀಡುವ ಕಾಲದಲ್ಲಿ ಅನಕೃ, ತರಾಸು ಅಂತಹ ದೊಡ್ಡವರು ಇದ್ದರು. ಅಂದು ಅವರು ಬರೆಯುತ್ತಿದ್ದ ಕಥೆಗಳಿಗೆರೇಖಾ ಚಿತ್ರಗಳನ್ನು ನೀಡುತ್ತಿದ್ದೆ. ಸಾಮಾಜಿಕವಾಗಿ ಬದಲಾವಣೆಗಳು ಆದಂತೆ ಕತಾ ವಸ್ತುವಿನಲ್ಲಿಯೂ ಬದಲಾವಣೆಗಳನ್ನುನಾವು ಕಾಣಬಹುದು’ ಎಂದರು.

‘ಒಬ್ಬ ಲೇಖಕ ಕತೆ ಇಲ್ಲವೇ ಕವಿತೆ ರಚನೆ ಮಾಡಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತಾನೆ. ಆ ಕತೆ, ಕವಿತೆಗಳಿಗೆ 2 ದಿನದಲ್ಲಿ ನಾವು ರೇಖಾಚಿತ್ರ ಬರೆದು ಕೊಡಬೇಕುಎಂಬ ಗಡುವು ಕೊಡುತ್ತಿದ್ದರು. ತಿಂಗಳಾನುಗಟ್ಟಲೆ ಬರೆದ ಕವಿತೆ, ಕತೆಗೆ ಎರಡು ದಿನದಲ್ಲಿ ನ್ಯಾಯ ನೀಡುವುದು ಕಷ್ಟದ ಕೆಲಸವಾಗಿತ್ತು. ಹಾಗಾಗಿ ರಾತ್ರಿಯೆಲ್ಲಾ ಅಭ್ಯಾಸ ಮಾಡಿ ನನ್ನ ಚಿತ್ರ ಬರೆಯುವ ವೇಗವನ್ನು ಹೆಚ್ಚಿಸಿಕೊಂಡೆ’ ಎಂದು ಹೇಳಿದರು.

ಕವಿತೆಗಳು ಯಾವಾಗಲೂ ಕಾಡುತ್ತವೆ, ಗದ್ಯದಂತೆ ಅವುಗಳಿಗೆ ಸೀಮಿತತೆ ಇಲ್ಲ. ಒಂದೊಂದು ಬಾರಿ ಓದಿದರೂ ಬೇರೆಯೇ ರೀತಿಯ ಹೊಸ ಅರ್ಥಗಳನ್ನು ಅವು ನೀಡಬಲ್ಲವು. ಕವಿತೆಗಳಿಗೆ ಚಿತ್ರ ಬರೆಯುವುದು ಸವಾಲಿನ ಕೆಲಸವಾಗುತ್ತಿತ್ತು ಎಂದು ಹೇಳಿದ ಅವರು, ತಾವು ಬೆಳೆದು ಬಂದ ದಾರಿಯನ್ನು ನೆನಪಿಸಿಕೊಂಡರು.

ಕವಯಿತ್ರಿ ಜ.ನಾ ತೇಜಶ್ರೀ ಮಾತನಾಡಿ, ‘ಕವನ ಸಂಕಲನ ಅಥವಾ ಪುಸ್ತಕಗಳನ್ನು ವಿಮರ್ಶೆ ಮಾಡುವ ಸಂಸ್ಕೃತಿ ಇಂದು ಪತ್ರಿಕೆಗಳಲ್ಲಿ ಕಾಣುತ್ತಿದ್ದೇವೆ. ಎಂತಹ ಸಾಹಿತ್ಯವನ್ನೂ ಅವರು ಕೆಲವೇ ಅಭಿಪ್ರಾಯಕ್ಕೆ ಸೀಮಿತ ಮಾಡಿ ಬಿಡುತ್ತಾರೆ. ಯಾವುದೇ ಕೃತಿಗೆ ವಿಶಾಲವಾದ ಹಾಗೂ ಬೇರೆ ಬೇರೆ ಆಯಾಮಗಳ ಅರ್ಥ ಇರುತ್ತದೆ. ಅದನ್ನು ಒಂದು ದೃಷ್ಟಿಕೋನದಿಂದನೋಡುವುದು ಎಷ್ಟು ಸಮಂಜಸ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT