ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ತಿದ್ದುಪಡಿ: ಎಚ್ಚರ ವಹಿಸಿ

ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ಕುಮಾರ್ ಮೀನಾ ಸೂಚನೆ
Last Updated 18 ಜನವರಿ 2023, 16:55 IST
ಅಕ್ಷರ ಗಾತ್ರ

ಹಾಸನ: ವಿಧಾನಸಭಾ ಚುನಾವಣಾ ಸಂಬಂಧ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡುವ ಸಂದರ್ಭದಲ್ಲಿ ಮೃತಪಟ್ಟಿರುವ, ಸ್ಥಳಾಂತರ ಆಗಿರುವವರ ತಿದ್ದುಪಡಿ ಮಾಡುವಲ್ಲಿ ಎಚ್ಚರ ವಹಿಸಲು ಅಧಿಕಾರಿಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸೂಚಿಸಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಬುಧವಾರ ವಿಡಿಯೊ ಸಂವಾದ ನಡೆಸಿದ ಅವರು, ಮತಗಟ್ಟೆಗಳ ಬಾಗಿಲು, ಕಿಟಕಿ, ರ‍್ಯಾಂಪ್‌, ವಿದ್ಯುದ್ದೀಪ ಮತ್ತಿತರ ಮೂಲ ಸೌಕರ್ಯಗಳ ಬಗ್ಗೆ ಗಮನಹರಿಸಬೇಕು. ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಎನ್‌ಸಿಸಿ, ಎನ್ಎಸ್ಎಸ್, ಬ್ಯಾಂಕ್, ಅಂಚೆ ಕಚೇರಿ ಹಾಗೂ ಎಲ್ಲ ಇಲಾಖೆಗಳನ್ನು ಒಳಗೊಂಡಂತೆ ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಆಯೋಜಿಸಿ, ಮತದಾನದ ಬಗ್ಗೆ ಅರಿವು ಮೂಡಿಸಬೇಕು. ಶಾಲಾ-ಕಾಲೇಜುಗಳಲ್ಲಿ ಚಿತ್ರಕಲೆ, ಪ್ರಬಂಧ, ಪೇಂಟಿಂಗ್‌ ಮತ್ತಿತರರ ಸ್ಪರ್ಧೆಗಳನ್ನು ಏರ್ಪಡಿಸುವಂತೆ ತಿಳಿಸಿದರು.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಮಾತನಾಡಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ ಕಳೆದ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳನ್ನು ಗುರುತಿಸಿ, ಹೆಚ್ಚಿನ ಜಾಗೃತಿ ಮೂಡಿಸಬೇಕು. ಯುವ ಮತದಾರರ ನೋಂದಣಿಗೆ ಹೆಚ್ಚಿನ ಗಮನಹರಿಸುವಂತೆ ನಿರ್ದೇಶನ ನೀಡಿದರು.

ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮಾತನಾಡಿ, ಜಿಲ್ಲೆಯಲ್ಲಿ 2014 ರಲ್ಲಿ ಜನಿಸಿರುವ ಮಕ್ಕಳ ಸಂಖ್ಯೆಯನ್ನು ಆಧರಿಸಿ ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳ ಯುವ ಮತದಾರರು ಗರುಡ ಆ್ಯಪ್‍ನಲ್ಲಿ ನೋಂದಣಿ ಮಾಡಿಕೊಳ್ಳಲು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಮತದಾನ ಹಾಗೂ ಯುವ ಮತದಾರರ ನೋಂದಣಿ ಕುರಿತು ಜಿಲ್ಲಾ ಮಟ್ಟದಲ್ಲಿ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸುವಂತೆ ಸೂಚಿಸಿದ ಅವರು, ಸ್ವೀಪ್ ಚಟುವಟಿಕೆಗಳ ಮೂಲಕ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಪ್ರತಿದಿನ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುವಂತೆ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಕಾಂತರಾಜು ಮಾತನಾಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವೀಪ್ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಚಿತ್ರಕಲೆ, ಪ್ರಬಂಧ ಹಾಗೂ ವಿವಿಧ ಸ್ವರ್ಧೆಗಳನ್ನು ಏರ್ಪಡಿಸಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಹಾಲಿಂಗಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್. ಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT