ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದ್ದೇಳು ಅರ್ಜುನ, ಮುದ್ದೆ ಮಾಡಿ ಹಾಕುತ್ತೇನೆ: ಮಾವುತನ ಆರ್ತನಾದ

ಚಿರನಿದ್ರೆಗೆ ಜಾರಿಗೆ ಅರ್ಜುನನಿಗೆ ಕೇಳದ ಮಾವುತನ ಆರ್ತನಾದ
ಆರ್‌.ಜಗದೀಶ್‌ ಹೊರಟ್ಟಿ
Published 6 ಡಿಸೆಂಬರ್ 2023, 6:23 IST
Last Updated 6 ಡಿಸೆಂಬರ್ 2023, 6:23 IST
ಅಕ್ಷರ ಗಾತ್ರ

ಹೆತ್ತೂರು: ‘ನಾನು ಬಂದಿದ್ದೇನೆ. ಮನೆಗೆ ಹೋಗೋಣ ಎದ್ದೇಳು. ಮುದ್ದೆ ಮಾಡಿ ಹಾಕುತ್ತೇನೆ. ಮೇಲೆ ಏಳು. ಯಾರನ್ನೋ ಮೆಚ್ಚಿಸಲು ನಿನ್ನನ್ನು ಇಲ್ಲಿಗೆ ಕರೆತಂದು ಬಲಿ ಹಾಕಿದೆನಲ್ಲ.’

ಮಾವುತ ವಿನುವಿನ ಸಹೋದರ ರಾಜು ಒಂದೇ ಸಮನೆ ಅರ್ಜುನನನ್ನು ಎಬ್ಬಿಸಲು ಪ್ರಯತ್ನಿಸಿದರೂ, ಅರ್ಜುನ ಮಾತ್ರ ಚಿರನಿದ್ರೆಗೆ ಜಾರಿದ್ದ. ಸುತ್ತಲೂ ಜನರು ಅರ್ಜುನನ ಗುಣಗಾನ ಮಾಡುತ್ತಿದ್ದರೆ, ಅದನ್ನು ಕೇಳಿಸಿಕೊಳ್ಳದಂತೆ ಮಲಗಿದ್ದ.

ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಸೋಮವಾರ ಕಾದಾಟದಲ್ಲಿ ಮೃತಪಟ್ಟಿದ್ದ ಸಾಕಾನೆ ಅರ್ಜುನನ ಅಂತ್ಯಕ್ರಿಯೆಗೆ ಯಸಳೂರು ಬಳಿಯ ದಬ್ಬಳಿಕಟ್ಟೆಯ ನೆಡುತೋಪಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನರು ಬಂದು, ಅರ್ಜುನನಿಗೆ ಹಾರ ಹಾಕಿ, ಕೈಮುಗಿದರು.

ಇನ್ನೊಂದೆಡೆ ಮಾವುತ ವಿನುವಿನ ಪರಿಸ್ಥಿತಿಯಂತೂ ಹೇಳತೀರದಾಗಿತ್ತು. ಅರ್ಜುನನನ್ನು ತಬ್ಬಿಕೊಂಡು, ಒಂದೇ ಸಮನೆ ಕಣ್ಣೀರಿಡುತ್ತಿದ್ದ ವಿನುವನ್ನು ಸಂತೈಸುವ ಧೈರ್ಯ ಯಾರಲ್ಲೂ ಇರಲಿಲ್ಲ. ದುಃಖದಲ್ಲಿ ಮಾತುಗಳೂ ಬರದಂತಾಗಿದ್ದ ವಿನು, ಅರ್ಜುನ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದಕ್ಕೆ ಸಿದ್ಧರಿರಲಿಲ್ಲ.

ಅರ್ಜುನನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ನೂರಾರು ಜನರು ಬಿಕ್ಕಿಬಿಕ್ಕಿ ಅಳುವ ಮೂಲಕ ತಮ್ಮ ದುಖಃವನ್ನು ಹೊರಹಾಕಿದರೆ, ಇನ್ನೊಂದೆಡೆ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು.

ರೈತ ಸಂಘ ಪ್ರತಿಭಟನೆ:

ಸ್ಥಳೀಯರು ಪ್ರತಿಭಟನೆ ಆರಂಭಿಸಿ, ‘ದಬ್ಬಳ್ಳಿ ಗ್ರಾಮದ ವೃತ್ತದಲ್ಲಿ ಅರ್ಜುನ ಆನೆಯ ಸಂಸ್ಕಾರ ನಡೆಸಬೇಕು. ಅಂಬಾರಿ ಆನೆ ಹೊತ್ತ ಕುರುಹಾಗಿ ಇಲ್ಲಿ ಪ್ರವಾಸಿ ತಾಣ ಮಾಡಲು ಕನಿಷ್ಠ ಐದು ಎಕರೆ ಜಾಗ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

ಈ ವೇಳೆ ಮೈಸೂರಿನಿಂದ ಬಂದಿದ್ದ ರೈತ ಮುಖಂಡರು, ‘ಅರ್ಜುನ ಆನೆ ಅರಮನೆ ಆಸ್ತಿ. ಅರ್ಜುನನ ಕಳೇಬರದ ಅಂತಿಮ ಸಂಸ್ಕಾರ ಮೈಸೂರಿನಲ್ಲಿ ನಡೆಸಬೇಕು’ ಎಂದು ಆಗ್ರಹಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆ ಮಧ್ಯ ಪ್ರವೇಶಿಸಿದ ಆನೆ ಯೋಜನೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ, ‘ಅರ್ಜುನ ಆನೆ ಮೃತಪಟ್ಟು 24 ಗಂಟೆ ಕಳೆದಿದ್ದು, ಮೃತದೇಹ ಬೇರೆಡೆ ಸಾಗಿಸಲು ಅಸಾಧ್ಯ’ ಎಂಬುದನ್ನು ರೈತ ಮುಖಂಡರಿಗೆ ಮನದಟ್ಟು ಮಾಡಿದರು.

ಅಂತ್ಯಸಂಸ್ಕಾರಕ್ಕೆ ಗುಂಡಿ ತೊಡಲು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ಧತೆ ಆರಂಭಿಸಿದರು. ಇದರಿಂದ ಕೆರಳಿದ ಸ್ಥಳೀಯರು, ದಬ್ಬಳಿ ಗ್ರಾಮದ ವೃತ್ತದಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಆಗ್ರಹಿಸಿದರು.

ಅಧಿಕಾರಿಗಳು, ಪ್ರತಿಭಟನಕಾರರನ್ನು ಸಮಾಧಾನ ಪಡಿಸಲು ನಡೆಸಿದ ಯತ್ನ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಲಘು ಲಾಠಿ ಪ್ರಹಾರ ನಡೆಸಿ, ಸಾರ್ವಜನಿಕರು ಹಾಗೂ ಪ್ರತಿಭಟನಕಾರರನ್ನು ಚದುರಿಸಿದರು.

ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಡಿಎಫ್‌ಒ ಮೋಹನ್ ಕುಮಾರ್, ಉಪ ವಿಭಾಗಾಧಿಕಾರಿ ಶ್ರುತಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು, ಅರ್ಜುನ ಆನೆಗೆ ಅಂತಿಮ ನಮನ ಸಲ್ಲಿಸಿದರು.

ಪೊಲೀಸರು ಕುಶಾಲುತೋಪು ಹಾರಿಸಿ ಗೌರವ ಸಲ್ಲಿಸಿದರು
ಪೊಲೀಸರು ಕುಶಾಲುತೋಪು ಹಾರಿಸಿ ಗೌರವ ಸಲ್ಲಿಸಿದರು
ಹೆತ್ತೂರು ಸಮೀಪದ ದಬ್ಬಳಿಕಟ್ಟೆ ನೆಡತೋಪಿನಲ್ಲಿ ಅರ್ಜುನನ ಅಂತ್ಯಸಂಸ್ಕಾರ ನಡೆಸಲಾಯಿತು
ಹೆತ್ತೂರು ಸಮೀಪದ ದಬ್ಬಳಿಕಟ್ಟೆ ನೆಡತೋಪಿನಲ್ಲಿ ಅರ್ಜುನನ ಅಂತ್ಯಸಂಸ್ಕಾರ ನಡೆಸಲಾಯಿತು

ಅರ್ಜುನನನ್ನು ತಬ್ಬಿಕೊಂಡು, ಕಣ್ಣೀರಿಟ್ಟ ವಿನು ಅಂತಿಮ ಸಂಸ್ಕಾರ ಮೈಸೂರಿನಲ್ಲಿ ನಡೆಸುವಂತೆ ಆಗ್ರಹ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು

ಅಂತಿಮ ದರ್ಶನ ಪಡೆದ ಶ್ರುತಿ ಕೀರ್ತಿದೇವ್‌

ಮೈಸೂರಿನಿಂದ ಬಂದಿದ್ದ ಅರಮನೆ ಪ್ರಧಾನ ಆರ್ಚಕ ಪ್ರಹ್ಲಾದ್ ಅವರ ತಂಡ ಮೃತ ಆನೆಗೆ ವಿಧಿವಿಧಾನದ ಮೂಲಕ ಪೂಜೆ ಸಲ್ಲಿಸಿತು. ಈ ವೇಳೆ ಸ್ಥಳಕ್ಕೆ ಬಂದ ಚಾಮರಾಜೇಂದ್ರ ಒಡೆಯರ ಅವರ ಮೊಮ್ಮಗಳು ಶ್ರುತಿ ಕೀರ್ತಿದೇವ್ ಅಂತಿಮ ದರ್ಶನ ಪಡೆದರು. ಮಂಗಳವಾರ ಮುಂಜಾನೆಯಿಂದ ಸಿದ್ಧತೆ ನಡೆಸಿದ ಸಿಬ್ಬಂದಿ ದಬ್ಬಳ್ಳಿ ಗ್ರಾಮದ ಮುಖ್ಯ ರಸ್ತೆಯಿಂದ ಸರ್ಕಾರಿ ವಾಹನಗಳು ಸಂಚರಿಸಲು ಅನುಕೂಲವಾಗುವಂತೆ ಅರಣ್ಯದಲ್ಲಿ ಜೆಸಿಬಿ ಯಂತ್ರದ ಮೂಲಕ ರಸ್ತೆ ನಿರ್ಮಿಸಿದರು. ಎರಡು ಶಾಮಿಯಾನ ಹಾಕಿದ್ದರು. ಈ ವೇಳೆಗೆ ತಂಡೋಪತಂಡವಾಗಿ ಬಂದಿದ್ದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿಗಳು ಆನೆಯ ಅಂತಿಮ ದರ್ಶನ ಪಡೆದರು. ಕೊಡಗಿನ ಕಿರೆಕೊಡ್ಲಿಮಠದ ಸದಾಶಿವ ಸ್ವಾಮೀಜಿ ಹಾಗೂ ಕಲ್ಲಮಠದ ಮಹಾಂತ ಸ್ವಾಮೀಜಿ ಆನೆಗೆ ಪೂಜೆ ಸಲ್ಲಿಸಿ ಆರತಿ ಬೆಳಗುವ ಮೂಲಕ ಅಂತಿಮ ನಮನ ಸಲ್ಲಿಸಿದರು.

ಪ್ರತಿಭಟನೆಗೆ ತಿರುಗೇಟು

ಅರ್ಜುನ ಆನೆಯ ಅಂತಿಮ ಸಂಸ್ಕಾರಕ್ಕೆ ತಾಲ್ಲೂಕು ಆಡಳಿತ ಸಿದ್ಧತೆ ನಡೆಸುತ್ತಿದ್ದ ವೇಳೆ ಕರವೇ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿ ಅರಣ್ಯಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಲಾರಂಭಿಸಿದರು. ಇದರಿಂದ ಕೆರಳಿದ ಸ್ಥಳೀಯ ಯುವಕರ ತಂಡ ‘ನೋವಿನಿಂದ ಬಳಲಿ ನಾವೇ ಸುಮ್ಮನಿರುವಾಗ ನಮ್ಮನ್ನು ಹೊರಗಿಟ್ಟು ಪ್ರತಿಭಟನೆ ನಡೆಸಲು ನೀವ್ಯಾರು? ಪ್ರತಿಭಟನೆಯ ಲಾಭ ಪಡೆಯಲು ಬಂದಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಪರಸ್ಪರ ವಾಗ್ವಾದ ನಡೆಯಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT