ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸೌಲಭ್ಯ ವಂಚಿತ ವಸತಿ ನಿಲಯ

ಶಿಥಿಲಗೊಂಡಿರುವ ಕೊಠಡಿಗಳು; ಮಳೆ ಬಂದರೆ ಸೋರುವ ಚಾವಣಿ, ಸಿಬ್ಬಂದಿ ಕೊರತೆಯೇ ಬಗೆಹರಿದಿಲ್ಲ
Last Updated 23 ಮೇ 2022, 3:03 IST
ಅಕ್ಷರ ಗಾತ್ರ

ಹಾಸನ: ಶಿಥಿಲಗೊಂಡಿರುವ ಕಟ್ಟಡಗಳು, ಉದುರುತ್ತಿರುವ ಚಾವಣಿಯ ಸಿಮೆಂಟ್‌, ಸಿಬ್ಬಂದಿ ಕೊರತೆ, ಶೌಚಾಲಯ, ಬಿಸಿ ನೀರಿನ ವ್ಯವಸ್ಥೆ ಇಲ್ಲ. ಮತ್ತೆ ಕೆಲವು ಕಡೆ ಹಾಸ್ಟೆಲ್ ಇದ್ದರೂ ಸಮರ್ಪಕ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ.

ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗ ವಸತಿ ನಿಲಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಒಂದೊಂದು ಕಡೆ ಒಂದೊಂದು ಸಮಸ್ಯೆ. ನೀರಿನ ಸೌಲಭ್ಯ, ಬೆಡ್‌, ಕೋಣೆಗಳ ಕೊರತೆ, ಶೌಚಾಲಯ ಸಮಸ್ಯೆಗಳ ಇದೆ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿ ಯಲ್ಲಿ 96 ವಿದ್ಯಾರ್ಥಿ ನಿಲಯಗಳಿದ್ದು, 13 ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅಲ್ಪ ಸಂಖ್ಯಾತರ ಇಲಾಖೆಯ 11 ವಿದ್ಯಾರ್ಥಿ ನಿಲಯಗಳ ಪೈಕಿ 2 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹಿಂದುಳಿದ ವರ್ಗಗಳ ಇಲಾಖೆಯ 116 ವಿದ್ಯಾರ್ಥಿ ನಿಲಯಗಳ ಪೈಕಿ 28 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಹೊಸ ಕಟ್ಟಡ ಮಂಜೂರು ಮಾಡುವಂತೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಅನೇಕ ವಿದ್ಯಾರ್ಥಿ ನಿಲಯಗಳು ಈಗಾಗಲೇ ಮಂಜೂರಾಗಿವೆ. ಕೆಲವು ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಹಾಸ್ಟೆಲ್‌ ಕಟ್ಟಡಗಳಿವೆ. ಒಂದೆರೆಡು ಹಾಸ್ಟೆಲ್ ಕಟ್ಟಡ ಶಿಥಿಲಗೊಂಡಿವೆ.

ಮಕ್ಕಳ ಸೆಳೆಯಲು ಕರಪತ್ರ ಹಂಚಿಕೆ, ಸ್ಥಳೀಯವಾಗಿ ಪ್ರಚಾರ, ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯ ಕುರಿತು ಬ್ಯಾನರ್‌ಗಳನ್ನು ಹಾಸ್ಟೆಲ್ ಮುಂದೆ ಹಾಕಲಾಗಿದೆ.

‘ಶಿಥಿಲಗೊಂಡಿರುವ ಹಾಸನದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ನೆಲಸಮ ಮಾಡಲು ಅನುಮತಿ ದೊರೆತಿದೆ. ಮಕ್ಕಳ ದಾಖಲಾತಿ ನಡೆಯುತ್ತಿದೆ. ಅರ್ಜಿ ಹಾಕಿದವರಿಗೆಲ್ಲ ಸೀಟು ದೊರೆಯಲಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ತಿಳಿಸಿದರು.

ಅರಸೀಕೆರೆ ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಅಡಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳು 8, ಬಾಲಕಿಯರ ವಿದ್ಯಾರ್ಥಿ ನಿಲಯಗಳು 3, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ 1, ಬಾಲಕಿಯರ ವಿದ್ಯಾರ್ಥಿ ನಿಲಯ 2, ಪರಿಶಿಷ್ಟ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ 1, ವಸತಿ ಶಾಲೆ 1 ಸೇರಿ ಒಟ್ಟು 17 ವಿದ್ಯಾರ್ಥಿ ನಿಲಯಗಳಿವೆ. ಕೆಲ ಹಾಸ್ಟೆಲ್‌ಗಳ ಕಿಟಕಿ ಬಾಗಿಲು ಮುರಿದಿವೆ.ಸ್ನಾನದ ಕೊಠಡಿಗಳಿಗೆ ಬಾಗಿಲು ಇಲ್ಲ.

ಹಿರೀಸಾವೆ ಮತ್ತು ದಿಡಗ ಗ್ರಾಮದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳು ಇವೆ. ಬಾಲಕಿಯರ ವಿದ್ಯಾರ್ಥಿ ನಿಲಯ ಇಲ್ಲ. ಕಟ್ಟಡ ಶಿಥಿಲಗೊಂಡಿದ್ದು, ನೀರು ಸೋರುತ್ತದೆ. ಕಿಟಕಿ, ಕೊಠಡಿ ಬಾಗಿಲು ಮುರಿದು ಹೋಗಿವೆ. ಜತೆಗೆ ಸಿಬ್ಬಂದಿ ಕೊರತೆ ಇದೆ.

ಸಮಾಜ ಕಲ್ಯಾಣ ಇಲಾಖೆಯ ಹಳೇಬೀಡಿನ ಬೆಣ್ಣೆಗುಡ್ಡದ ಬಳಿ ಮೆಟ್ರಿಕ್ ಪೂರ್ವ ಬಾಲಕಿಯ ವಿದ್ಯಾರ್ಥಿ ನಿಲಯಕ್ಕಾಗಿ 15 ವರ್ಷದ ಹಿಂದೆ ನಿರ್ಮಿ
ಸಿದ ಕಟ್ಟಡ ಪಾಳು ಬಿದ್ದಿದ್ದು, ಅಕ್ರಮ ಚಟುವಟಿಕೆ ತಾಣವಾಗಿದೆ. ಕಟ್ಟಡ ಗಿಡ, ಗಂಟಿಗಳಿಂದ ಮುಚ್ಚಿ ಹೋಗಿದೆ.

ಖಾಸಗಿ ಕಟ್ಟಡದಲ್ಲಿ ಹಾಸ್ಟೆಲ್ ನಡೆಯುತ್ತಿದೆ. ಪೊಲೀಸ್ ಠಾಣೆ ಪಕ್ಕದ ಬಾಲಕರ ವಿದ್ಯಾರ್ಥಿ ನಿಲಯ ಮಳೆಗಾಲದಲ್ಲಿ ಸೋರುತ್ತಿದೆ. ಎರಡೂ ಡಾರ್ಮೆಂಟರಿಗಳಲ್ಲಿಯೂ ಸೋರುತ್ತಿದ್ದು, ವಿದ್ಯಾರ್ಥಿಗಳ ಅಧ್ಯಯನಕ್ಕೆ ತೊಂದರೆಯಾಗಿದೆ. ಬೇಲೂರು ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯ ಹಳೆಯದಾಗಿದ್ದು, ಕಟ್ಟಡ ದುರಸ್ತಿಯಾಗಬೇಕಾಗಿದೆ.

ಅರಕಲಗೂಡು ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 6 ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ 6 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿವೆ. ಬೈಚನಹಳ್ಳಿ, ದೊಡ್ಡಮಗ್ಗೆ, ಗಂಗೂರು, ರುದ್ರಪಟ್ಟಣ, ಬಸವಾಪಟ್ಟಣ, ಕೊಣನೂರು ಹಾಗೂ ಅರಕಲಗೂಡು ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯಗಳು ಇದ್ದು, ಇದರಲ್ಲಿ ಬಸವಾಪಟ್ಟಣ, ರುದ್ರಪಟ್ಟಣದ ಕಟ್ಟಡಗಳು ಹಳೆಯದಾಗಿವೆ.

ಪಟ್ಟಣದ ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಸ್ವಂತ ಕಟ್ಟಡ ನಿರ್ಮಿಸಲು 25 ಗುಂಟೆ ಜಾಗ ನೀಡಲಾಗಿದ್ದು, ಕಟ್ಟಡ ನಿರ್ಮಾಣ ವಾಗಬೇಕಿದೆ. ತಾಲ್ಲೂಕಿನಲ್ಲಿ ಮೊರಾರ್ಜಿ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ಚನ್ನಮ್ಮ ವಸತಿ ಶಾಲೆ, ಹಿಂದುಳಿದ ವರ್ಗಗಳ ವಸತಿ ಶಾಲೆ, ಅಲ್ಪಸಂಖ್ಯಾತ ವಸತಿ ಶಾಲೆ ತೆರೆಯಲಾಗಿದೆ.

‘ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಸುತ್ತಮುತ್ತಲ ಶಾಲೆಗೆ ಭೇಟಿ ನೀಡಿ ಹಾಸ್ಟೆಲ್ ಸವಲತ್ತುಗಳ ಕುರಿತು ಪೋಷಕರಲ್ಲಿ ಅರಿವು ಮೂಡಿಸಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಕರಪತ್ರ ಹಂಚಿಕೆ ಮಾಡಲಾಗುತ್ತಿದೆ’ ಎಂದು ಕಲ್ಯಾಣ ಇಲಾಖೆ ಅಧಿಕಾರಿ ನಿಂಗರಾಜ್ ತಿಳಿಸಿದರು.

ಆಲೂರು ತಾಲ್ಲೂಕು ಕೇಂದ್ರದಲ್ಲಿ ಏಳು ವಸತಿ ನಿಲಯಗಳಿವೆ. ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆ ಇತ್ತು. ಹಿಂದುಳಿದ ವರ್ಗಕ್ಕೆ ಸೇರಿದ ಎರಡು ನಿಲಯಗಳು ಖಾಸಗಿ ಕಟ್ಟಡದಲ್ಲಿವೆ. ಒಂದು ಸರ್ಕಾರಿ ಕಟ್ಟಡದಲ್ಲಿದೆ. ಕೆಲ ಹಾಸ್ಟೆಲ್‌ಗಳು ಸೌಲಭ್ಯ ವಂಚಿತವಾಗಿವೆ.

‘ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಎಲ್ಲ ನಿಲಯಗಳೂ ಸರ್ಕಾರಿ ಕಟ್ಟಡದಲ್ಲಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ ದಾಖಲಾತಿ ಆರಂಭವಾಗ
ಲಿದೆ. ವಸತಿ ನಿಲಯಗಳಲ್ಲಿ ಸುಸಜ್ಜಿತ ಕೊಠಡಿ, ಪರಿಕರಗಳು, ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪುಂಡರೀಕ ತಿಳಿಸಿದ್ದಾರೆ.

ಹೊಳೆನರಸೀಪುರ ತಾಲ್ಲೂಕಿನಲ್ಲಿ 25 ಬಿಎಸಿಎಂ ಹಾಗೂ 9 ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿವೆ. ಬಿಸಿಎಂ ಹಾಸ್ಟೆಲ್‍ಗಳಲ್ಲಿ 5ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗಿನ ವಿದ್ಯಾರ್ಥಿಗಳಿದ್ದು, ಸಮಾಜ ಕಲ್ಯಾಣ ಇಲಾಖೆಯ 9 ಹಾಸ್ಟೆಲ್‍ಗಳಲ್ಲಿ 620 ವಿದ್ಯಾರ್ಥಿಗಳಿದ್ದಾರೆ.

ಬೇಲೂರು ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ 9 ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳು, 4 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳು, ಒಂದು ಆಶ್ರಮ ಶಾಲೆ, ಒಂದು ವಸತಿ ಶಾಲೆ ಇದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯ ಎರಡು ಮೆಟ್ರಿಕ್ ಪೂರ್ವ,
3 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿವೆ.

‘ಚಾವಣಿ ಹಂಚುಗಳು ಒಡೆದು ಮಳೆಯ ನೀರು ಸೋರುತ್ತಿದೆ. ಚಳಿಗಾಲದಲ್ಲಿ ಸೋಲಾರ್ ನೀರು ಬಿಸಿಯಾಗದ ಕಾರಣ ಸ್ನಾನ ಮಾಡಲು ಗ್ಯಾಸ್ ಗೀಸರ್ ಅವಶ್ಯಕತೆ’ ಎಂದು ಬಂಟೇನಹಳ್ಳಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿ ಕಲ್ಲೇಶ್ ಹೇಳಿದರು.

₹3 ಕೋಟಿಯಲ್ಲಿ ಕಟ್ಟಡ ನಿರ್ಮಾಣ

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 15 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಿವೆ. ಒಟ್ಟು 750 ವಿದ್ಯಾರ್ಥಿಗಳು ಇದ್ದಾರೆ. ಈ ಪೈಕಿ ಅಣತಿಯಲ್ಲಿ ವಿದ್ಯಾರ್ಥಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 6 ವಿದ್ಯಾರ್ಥಿ ನಿಲಯಗಳಿವೆ. ಮಂಜೂರಾತಿ ಸಂಖ್ಯೆ 406 ಇದೆ.
ಬಾಗೂರು ಹೋಬಳಿ ಕೇಂದ್ರದಲ್ಲಿ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯ ನಡೆಯುತ್ತಿದೆ. ಅಂದಾಜು ₹ 3 ಕೋಟಿ ವೆಚ್ಚದಲ್ಲಿ ಬಾಗೂರು ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಸಲ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಿ

ಹಾಸ್ಟೆಲ್‌ಗಳಲ್ಲಿ ಸಮಯಕ್ಕೆ ಸರಿಯಾಗಿ ಊಟ, ಉಪಾಹಾರ ನೀಡಿದರೆ ಸಾಲದು. ಉತ್ತಮ ಕೊಠಡಿ, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಕಲಿಕೆ ಜತೆಗೆ ಪಠ್ಯೇತರ ಚಟುವಟಿಕೆಗೆ ಅವಕಾಶ ನೀಡಬೇಕು.

ಗಜೇಂದ್ರ, ಚಿತ್ರ ಕಲಾವಿದ, ಹಳೇಬೀಡು

ದಾಖಲಾತಿ ಪ್ರಕ್ರಿಯೆ ಆರಂಭ

ವಿದ್ಯಾರ್ಥಿ ನಿಲಯಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಅನುದಾನ ಬಿಡುಗಡೆಯಾದಂತೆ ಸೌಲಭ್ಯ ಕಲ್ಪಿಸಲಾಗುವುದು. ಈ ವರ್ಷದ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ.

ಗೋಪಾಲಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ

ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ

ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತಿದ್ದೇನೆ. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುವಂತೆ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಲಾಗಿದೆ.

ಕಾಂತರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಮಕ್ಕಳ ಸೇರ್ಪಡೆಗೆ ಜಾಗೃತಿ

ಹಿರೀಸಾವೆ ವಿದ್ಯಾರ್ಥಿ ನಿಲಯದಲ್ಲಿ 70 ವಿದ್ಯಾರ್ಥಿ
ಗಳಿಗೆ ಅವಕಾಶ ಇದೆ. ದಿಡಗದ 50 ವಿದ್ಯಾರ್ಥಿಗಳ ನಿಲಯ
ದಲ್ಲಿ ಈ ವರ್ಷ 15 ವಿದ್ಯಾರ್ಥಿಗಳನ್ನು ಸೇರಿಸಬಹುದು. ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ನೀಡಲಾಗುತ್ತಿದೆ. ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರಿಗೆ ಮಾಹಿತಿ ನೀಡಲಾಗಿದೆ.

ಆನಂತ್, ಹಿರೀಸಾವೆ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ

ಹಾಸ್ಟೆಲ್‌ಗಳಿಗೆ ಉತ್ತಮ ಸೌಕರ್ಯ

ಮೆಟ್ರಿಕ್ ಪೂರ್ವ ಹಾಸ್ಟೆಲ್‍ಗಳಲ್ಲಿ ನಿಗದಿತ ಸಂಖ್ಯೆಗಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಮೆಟ್ರಿಕ್ ನಂತರದ ಹಾಸ್ಟೆಲ್‍ಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಈ ಬಾರಿ ಮಹಿಳಾ ಪಾಲಿಟೆಕ್ನಿಕ್‍ಗೆ ಹೆಚ್ಚಿನ ವಿದ್ಯಾರ್ಥಿನಿಯರು ಸೇರುವ ನಿರೀಕ್ಷೆ ಇದ್ದು ಹಾಸ್ಟೆಲ್‍ಗಳ ಕೊರತೆ ಉಂಟಾಗಲಿದೆ. ಹಾಸ್ಟೆಲ್‍ಗಳಲ್ಲಿ ಉತ್ತಮ ಸೌಕರ್ಯ ಒದಗಿಸಲಾಗಿದೆ.

ತ್ರಿವೇಣಿ, ವಾರ್ಡನ್, ಹೊಳೆನರಸೀಪುರ

ಕರಪತ್ರ ಹಂಚಿಕೆ

ವಿದ್ಯಾರ್ಥಿಗಳ ದಾಖಲಾತಿ ಪ್ರಾರಂಭವಾಗಿದ್ದು, ಹಾಸ್ಟೆಲ್‌ನಲ್ಲಿರುವ ಸವಲತ್ತುಗಳ ಬಗ್ಗೆ ಕರಪತ್ರ ಹಂಚಲಾಗುತ್ತಿದೆ. ಹಾಸ್ಟೆಲ್‌ಗಳಲ್ಲಿ ಓದಲು ಎಸಿ ರೂಂ, ಕಂಪ್ಯೂಟರ್ ಸೇರಿದಂತೆ ಉನ್ನತ ಮಟ್ಟದ ಸವಲತ್ತುಗಳಿವೆ.

ಮೋಹನ್ ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ

----------

ನಿರ್ವಹಣೆ: ಕೆ.ಎಸ್.ಸುನಿಲ್, ಪೂರಕ ಮಾಹಿತಿ: ಎಚ್.ಎಸ್‌.ಅನಿಲ್ ಕುಮಾರ್,ಹಿ.ಕೃ.ಚಂದ್ರು, ರಂಗನಾಥ್, ಚಂದ್ರಶೇಖರ್, ಎಂ.ಪಿ.ಹರೀಶ್, ಸಿದ್ದರಾಜು, ಸುರೇಶ್ ಕುಮಾರ್, ಮಲ್ಲೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT