ಗುರುವಾರ , ಸೆಪ್ಟೆಂಬರ್ 23, 2021
22 °C
ದಸಂಸ ರಾಜ್ಯ ಸಂಚಾಲಕ ಎಂ.ಸೋಮಶೇಖರ್‌ ಕರೆ

ಸ್ವತಂತ್ರ ರಾಜಕೀಯ ಪಕ್ಷ ಕಟ್ಟಲು ಬಣಗಳು ಒಂದಾಗಲಿ: ಎಂ.ಸೋಮಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಡಾ.ಬಿ.ಆರ್‌. ಅಂಬೇಡ್ಕರ್‌ ಸಿದ್ಧಾಂತ ಮತ್ತು ಸಂವಿಧಾನ ವಿರೋಧಿ ಸರ್ಕಾರ ಅಧಿಕಾರದಲ್ಲಿದೆ. ಅದನ್ನು ಕೆಳಗಿಳಿಸಲು ಪರ್ಯಾಯವಾಗಿ ಸ್ವತಂತ್ರ ರಾಜಕೀಯ ಪಕ್ಷ ಕಟ್ಟಲು ದಲಿತ ಸಂಘರ್ಷ ಸಮಿತಿ ಬಣಗಳು ಒಂದಾಗಬೇಕಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್‌ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣಗಳ ವಿಲೀನ ಕುರಿತು ನಡೆದ ಚರ್ಚೆ ಮತ್ತು ಸಭೆ ಉದ್ಘಾಟಿಸಿ ಮಾತನಾಡಿದರು.

ವಿಭಜನೆಯಾಗಿರುವ ಬಣಗಳು ಒಂದಾಗದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳು ಶಕ್ತಿ ಕಳೆದುಕೊಳ್ಳಬೇಕಾಗುತ್ತದೆ. ಇಂದಿನ ಆಡಳಿತ ಸರ್ಕಾರಗಳು, ಪರಿಶಿಷ್ಟ ವಿರೋಧಿ, ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಹೊಸ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸಂಘಟನೆಗಳ ಶಕ್ತಿ ಕುಂದಿಸುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೋವಿಡ್‌ ಲಾಕ್‌ಡೌನ್‌ ನಿಂದ ಜನ ಕೆಲಸ ಕಳೆದುಕೊಂಡು ಕಂಗಾಲಾಗಿದ್ದರೆ, ಮತ್ತೊಂದೆಡೆ ಬೆಲೆ ಏರಿಕೆ ಹೊಡೆತ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜನಸಾಮಾನ್ಯರ ಬಗ್ಗೆ ಚಿಂತನೆಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೊರೊನಾ ನೆಪವೊಡ್ಡಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಎಸ್‌ಇಪಿ ಹಾಗೂ ಟಿಎಸ್‌ಪಿ ಯೋಜನೆ ಅನುದಾನ ಕಡಿತ ಮಾಡಲಾಗುತ್ತಿದೆ. ಪರಿಶಿಷ್ಟರಿಗೆ ಸಾಲ ಸೌಲಭ್ಯ ದೊರೆಯುತ್ತಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟರಿಗೆ ಮನೆಗಳನ್ನು ನೀಡುತ್ತಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶಿಷ್ಟ ಜಾತಿ, ವರ್ಗದ ಸಣ್ಣ ಗುತ್ತಿಗೆದಾರರಿದ್ದಾರೆ. ಗುತ್ತಿಗೆ ನೀಡುವಾಗ ಮೀಸಲಾತಿ ಅನ್ವಯಿಸುತ್ತಿಲ್ಲ. ರಾಜ್ಯಮಟ್ಟದಲ್ಲಿಯೇ ಪ್ಯಾಕೇಜ್‌ ರೀತಿಯಲ್ಲಿ ಗುತ್ತಿಗೆ ನೀಡುತ್ತಿದ್ದು, ಇದರಿಂದ ಸಣ್ಣ ಗುತ್ತಿಗೆದಾರರಿಗೆ ವಂಚನೆ ಆಗುತ್ತಿದೆ ಎಂದರು.

ದೇಶದಲ್ಲಿ ಪರಿಶಿಷ್ಟರ ಮೇಲೆ ದಬ್ಬಾಳಿಕೆ, ಅತ್ಯಾಚಾರ, ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ಹೆಚ್ಚುತ್ತಿವೆ. ಸಂಘಟನೆಗಳು ಬಲಿಷ್ಟವಾದರೆ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ಆದರೆ, ಇಂದು ಮನುವಾದಿ ಬಿಜೆಪಿ ಪಕ್ಷ ಎಂದು ನಿಂದಿಸಿದವರು, ಅಂಬೇಡ್ಕರ್‌ ನನ್ನ ತಂದೆ ಸಮಾನ ಎಂದವರೇ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಎನ್‌.ಮಹೇಶ್‌ ಅವರನ್ನು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಪರ್ಯಾಯವಾಗಿ ಒಂದು ಪ್ರಬಲ ರಾಜಕೀಯ ಪಕ್ಷ ಕಟ್ಟಬೇಕಿದೆ. ದೇಶದ ಜನಸಂಖ್ಯೆಯಲ್ಲಿ ಶೇಕಡಾ 3ರಷ್ಟು ಇರುವವರು ದೇಶ ಆಳುತ್ತಿದ್ದಾರೆ. ಶೇಕಡಾ 80 ರಷ್ಟಿರುವ ಪರಿಶಿಷ್ಟರು ಇನ್ನೂ ದೌರ್ಜನ್ಯ, ವಂಚನೆಗಳಿಗೆ ಒಳಗಾಗುತ್ತಲೇ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ದೇವದಾಸಯ್ಯ, ಎಂ.ನಾರಾಯಣಸ್ವಾಮಿ, ಸೋಮನಹಳ್ಳಿ ಅಂದಾನಿ, ಮಹಿಳಾ ಘಟಕದ ಸಂಚಾಲಕಿ ಭಾಗ್ಯಮ್ಮ, ಮುಖಂಡರಾದ ವಸಂತ್‌ ಕುಮಾರ್‌, ಕವಾಲಿ ವೆಂಕಟರಮಣಪ್ಪ, ಅನೇಕಲ್‌ ಕೃಷ್ಣಪ್ಪ, ಲಕ್ಷ್ಮೀನಾರಾಯಣ, ದೇವಮ್ಮ, ಚಿಂತಾಮಣಿ, ಶಿವಮೂರ್ತಿ ಭೀಮನಕೆರೆ ಹಾಗೂ ವಿವಿಧ ಜಿಲ್ಲೆಗಳ ಸಂಚಾಲಕರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.