ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ- ಹಿರಿಯೂರು ಹೆದ್ದಾರಿಗೆ ಭೂಸ್ವಾಧೀನ: ಸೂಕ್ತ ಪರಿಹಾರಕ್ಕೆ ಸಂತ್ರಸ್ತರ ಒತ್ತಾಯ

ರೈತರ ಪ್ರತಿಭಟನೆ
Published 27 ಫೆಬ್ರುವರಿ 2024, 12:44 IST
Last Updated 27 ಫೆಬ್ರುವರಿ 2024, 12:44 IST
ಅಕ್ಷರ ಗಾತ್ರ

ಹಾಸನ: ಪರ್ಯಾಯ ಭೂಮಿ ಮತ್ತು ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಹಾಸನ -ಹಿರಿಯೂರು ಹೆದ್ದಾರಿ ಯೋಜನೆಗೆ ಭೂಮಿ ಕಳೆದುಕೊಳ್ಳುತ್ತಿರುವ ದುದ್ದ, ಶಾಂತಿಗ್ರಾಮ, ಗಂಡಸಿ ಹೋಬಳಿಗಳ ಸಂತ್ರಸ್ತ ರೈತರು ಮಂಗಳವಾರ ರ‍್ಯಾಲಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತು ಪ್ರತಿಭಟಿಸಿದರು.

ಸಂತ್ರಸ್ತ ರೈತರು ಮಾತನಾಡಿ, ಹೆದ್ದಾರಿ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭ ಮಾಡಲಾಗಿದೆ. ಹಾಸನ, ಅರಸೀಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಹಿರಿಯೂರು ತಾಲ್ಲೂಕಿನ ನೂರಾರು ಹಳ್ಳಿಗಳ ಸಾವಿರಾರು ಎಕರೆ ಭೂಮಿ ಯೋಜನೆಗೆ ಸ್ವಾಧೀನಗೊಳ್ಳಲಿದೆ ಎಂದರು.

ಯೋಜನೆ ಸರ್ಕಾರಿ ಮತ್ತು ಖಾಸಗಿಯವರ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು,  2013ರ ಭೂಸ್ವಾಧೀನ ಕಾಯ್ದೆಯಂತೆ ಶೇ 70 ರಷ್ಟು ಸಂತ್ರಸ್ತ ರೈತರು ಮತ್ತು ನಾಗರಿಕರ ಒಪ್ಪಿಗೆಯನ್ನು ಪಡೆಯಬೇಕು. ಇಲ್ಲವಾದರೆ ಯೋಜನೆ ಹಿಂಪಡೆಯಬೇಕು ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಜೀವನಾಧಾರವಾಗಿ ಇರುವ ಕೃಷಿ ಭೂಮಿ, ಮನೆಗಳನ್ನು ರೈತರು ಮತ್ತು ನಾಗರಿಕರು ಹೆದ್ದಾರಿ ನಿರ್ಮಾಣಕ್ಕೆ ಬಿಟ್ಟು ಕೊಡಬೇಕಾಗಿದೆ. ಈ ರಸ್ತೆಗೆ ಸ್ವಾಧೀನವಾಗುತ್ತಿರುವ ಬಹುತೇಕ ಭೂಮಿಯು ನೀರಾವರಿ ಪ್ರದೇಶವಾಗಿದ್ದು, ತೋಟಗಾರಿಕೆ ಹಾಗೂ ಉತ್ತಮ ಕೃಷಿ ಭೂಮಿ ಒಳಗೊಂಡಿದೆ.  ಸಮರ್ಪಕವಾಗಿ ಸರ್ವೆ ನಡೆಸಿ, ಸಾರ್ವಜನಿಕರ, ರೈತರ ಕುಂದುಕೊರತೆಗಳನ್ನು ಆಲಿಸಿ, ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಕುಂದುಕೊರತೆಯನ್ನು ಪರಿಹರಿಸಲು ಕೂಡಲೇ ಅಧಿಕಾರಿಗಳನ್ನು ನೇಮಿಸಬೇಕು, ಸರ್ವೆ ಕಾರ್ಯಕ್ಕೂ ಮುನ್ನ ಪ್ರತಿ ಗ್ರಾಮದಲ್ಲೂ ರೈತರ ಸಭೆ ಕರೆದು ಗೊಂದಲ ನಿವಾರಿಸಬೇಕು, ಪರಿಹಾರದ ಮೊತ್ತದ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕು. ಅಲ್ಲಿಯವರೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಬರದಿಂದಾಗಿ ತತ್ತರಿಸಿರುವ ರೈತರಿಗೆ ಈ ಹೆದ್ದಾರಿ ಯೋಜನೆ ಮತ್ತಷ್ಟು ಸಂಕಷ್ಟ ಉಂಟುಮಾಡಿದೆ. ರೈತರ ಸಮಸ್ಯೆಗಳನ್ನು ಪರಿಹರಿಸದೇ ಹೆದ್ದಾರಿ ಕಾಮಗಾರಿ ಕೈಗೊಳ್ಳುತ್ತಿರುವುದು ಸರಿಯಲ್. ಸಮಸ್ಯೆ ಆಲಿಸಿ, ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರಾದ ಹೇಮಂತ್ ಕುಮಾರ್, ಲಕ್ಷ್ಮೀಗೌಡ, ರಾಧಮ್ಮ, ರಂಗಯ್ಯ, ಸಾವಿತ್ರಮ್ಮ, ಕೃಷ್ಣೆಗೌಡ, ಪ್ರಕಾಶ್, ವೆಂಕಟೇಶ್, ರಂಗಸ್ವಾಮಿ, ನೂರಾರು ಮಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT