ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಚ್‌ಎಐ ಪಿಡಿ ವಿರುದ್ಧ ಪ್ರಕರಣ ದಾಖಲಿಸಿ

15 ದಿನದೊಳಗೆ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಗುಂಡಿ ಮುಚ್ಚಲು ಡಿ.ಸಿ ಸೂಚನೆ
Last Updated 18 ನವೆಂಬರ್ 2020, 13:06 IST
ಅಕ್ಷರ ಗಾತ್ರ

ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಚತುಷ್ಪಥ ರಸ್ತೆಯಲ್ಲಿ ಅಪಘಾತ ಸಂಭವಿಸಿ
ಪ್ರಾಣಾಪಾಯವಾದರೆ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್‌ಎಐ) ಯೋಜನಾ ನಿರ್ದೇಶಕರನ್ನೇ
ಹೊಣೆಗಾರರಾಗಿ ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ಡಿವೈಎಸ್‌ಪಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಸಂಸದ ಪ್ರಜ್ವಲ್‌ ರೇವಣ್ಣ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿದ ಅವರು, ಹಾಸನ ಬೈಪಾಸ್‌ ರಸ್ತೆಯಿಂದ ಸಕಲೇಶಪುರ ತಾಲ್ಲೂಕಿನ ಹೆಗ್ಗದ್ದೆ ವರೆಗಿನ ರಸ್ತೆಯಲ್ಲಿ ಡಾಂಬಾರು ಸಂಪೂರ್ಣ ಕಿತ್ತು ಹೋಗಿದ್ದು, ವಾಹನ ಸಂಚರ ದುಸ್ತರವಾಗಿದೆ. ನ. 1 ರಿಂದ ಗುಂಡಿ ಮುಚ್ಚುವ ಕೆಲಸ ಆರಂಭವಾಗಿದ್ದರೂ ಪೂರ್ಣಗೊಂಡಿಲ್ಲ ಏಕೆ? ಮಳೆ, ಕೋವಿಡ್‌ ನೆಪ ಹೇಳಿಕೊಂಡು ತಡ ಮಾಡುತ್ತಿರುವುದು ಸರಿಯಲ್ಲ. ಜನರ ಜೀವದ ಆಟವಾಡಲು ಅವಕಾಶ ನೀಡುವುದಿಲ್ಲ. 15 ದಿನದೊಳಗೆ ಗುಂಡಿ ಮುಚ್ಚಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎ.ಕೆ.ಜಾನ್‌ ಬಾಜ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ರೇವಣ್ಣ, ಹಾಸನ–ಮಂಗಳೂರು ಪ್ರಯಾಣಕ್ಕೆ ನಾಲ್ಕು ತಾಸು, ಹಾಸನ–ಬೆಂಗಳೂರು ಪ್ರಯಾಣಕ್ಕೆ ಎರಡು ತಾಸು ಸಾಕು. ಸಕಲೇಶಪುರ ರಸ್ತೆಯಲ್ಲಿ ಸಂಚರಿಸಿದರೆ ಸೊಂಟ ರೀಪೆರಿ ಗ್ಯಾರಂಟಿ. ಇದುವರೆಗೂ ರಸ್ತೆ ದುರಸ್ತಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಸಂಸದ ಪ್ರಜ್ವಲ್‌ ರೇವಣ್ಣ, ರಸ್ತೆ ವಿಸ್ತರಣೆಗಾಗಿ ಮಣ್ಣು ತೆಗೆಯಲಾಗಿದೆ. ದೊಡ್ಡತಪ್ಪಲು ಬಳಿ 90
ಮನೆಗಳಿವೆ. ಜೋರು ಮಳೆಯಾಗಿ ಭೂ ಕುಸಿತ ಉಂಟಾಗಿ ಪ್ರಾಣ ಹಾನಿ ಸಂಭವಿಸಿದರೆ ಯಾರು ಹೊಣೆ? ಕೂಡಲೇ ಭೂ ಕುಸಿತ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆದ್ದಾರಿ ದುರಸ್ತಿ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಆಲೂರು ಬಳಿ ಬೆರಳಣಿಕೆ ಕಾರ್ಮಿಕರು ಕೆಲಸ ಮಾಡುತ್ತಿರುವುದು ಬಿಟ್ಟರೆ ಬೇರೆ ಕಡೆ ಕಾಣಿಸುವುದೇ ಇಲ್ಲ. ಸ್ಥಳಕ್ಕೆ ಭೇಟಿ ಮಾಡಿ ವರದಿ ಸಲ್ಲಿಸುವಂತೆ’ಸಕಲೇಶಪುರ ಉಪವಿಭಾಗಾಧಿಕಾರಿ ಗಿರೀಶ್‌ ನಂದನ್‌ ಅವರಿಗೆ ಪ್ರಜ್ವಲ್‌ ಸೂಚಿಸಿದರು.

‘ಮಳೆ ಹಾಗೂ ಗುತ್ತಿಗೆದಾರನ ಸಮಸ್ಯೆಯಿಂದ ವಿಳಂಬವಾಗಿದೆ. ರಾಜಕಮಲ್‌ ಕಂಪೆನಿಗೆ ಕಾಮಗಾರಿ ವಹಿಸಲಾಗಿದ್ದು,
ಶೇಕಡಾ 20ರಷ್ಟು ಕೆಲಸ ಪೂರ್ಣವಾಗಿದೆ. 2022ರ ಮಾರ್ಚ್ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬಾಳ್ಳುಪೇಟೆಯಿಂದ ಸಕಲಾಶಪುರದ ವರೆಗೆ ಸುಮಾರು 20 ಕಿ.ಮೀ ರಸ್ತೆ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾನ್‌ ಬಾಜ್ ಸಭೆಗೆ ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿತ್ಯ ಅಪಘಾತ ಸಂಭವಿಸುತ್ತಿವೆ. ಆರೋಗ್ಯ ಇಲಾಖೆ ಸಹಯೋಗದಲ್ಲಿ ಹೆದ್ದಾರಿಯಲ್ಲಿ
ಆಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು. ಸಕಲೇಶಪುರದಿಂದ ಹಿರೀಸಾವೆ ವರೆಗೆ ಕನಿಷ್ಟ ನಾಲ್ಕು ಆಂಬುಲೆನ್ಸ್‌ ನಿಯೋಜಿಸಬೇಕು. ಹೆಚ್ಚು ಅಪಘಾತ ಸಂಭವಿಸುವ ಕಡೆ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಪ್ರಜ್ವಲ್‌ ಹೇಳಿದರು.

ಮಳೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿ ಹಲವು ಕಡೆ ರೈತರು ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಆನೆ
ಕಾರಿಡಾರ್‌ಗಾಗಿ 13 ಸಾವಿರ ಹೆಕ್ಟೇರ್ ಸರ್ಕಾರಿ ಭೂಮಿ, 3 ಸಾವಿರ ಹೆಕ್ಟೇರ್‌ ಖಾಸಗಿ ಭೂಮಿ ಲಭ್ಯವಿದೆ. ಅರಣ್ಯ ಇಲಾಖೆ ಭೂಮಿ ವಶಪಡಿಸಿಕೊಳ್ಳಲಿದೆ ಎಂಬ ಕಾರಣಕ್ಕೆ ಹಲವರು ಬೆಳೆ ಬೆಳೆಯುತ್ತಿಲ್ಲ. ಕೇಂದ್ರ ಸರ್ಕಾರ ₹50 ಕೋಟಿ ಅನುದಾನ ಸಹ ನೀಡಿತ್ತು. ಈಗ ಯೋಜನೆ ಕಾರ್ಯಸಾಧುವಲ್ಲ ಎಂದು ಹೇಳಲಾಗುತ್ತಿದೆ. ಹಾಗಾದರೆ ಇದಕ್ಕೆ ಪರಿಹಾರವೇನು ಎಂದು ಪ್ರಜ್ವಲ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಡಿ.ಸಿ, ಸ್ವಾಧೀನಪಡಿಸಿಕೊಂಡ ಜಮೀನಿಗೆ ಎಕರೆಗೆ ₹ 15 ಲಕ್ಷ ಪರಿಹಾರ ನೀಡಿದರೆ ₹500 ಕೋಟಿ ಅನುದಾನ ಬೇಕಾಗುತ್ತದೆ. ಹಾಗಾಗಿ ಟಾಸ್ಕ್‌ ಫೋರ್ಸ್‌ ಸಮಿತಿ ಸಭೆಯಲ್ಲಿ ಚರ್ಚೆ ನಡೆದು, ಈ ಯೋಜನೆ ಕಾರ್ಯಸಾಧುವಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT