ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸೀಕೆರೆ: 82ನೇ ವರ್ಷದ ಗಣಪತಿ ಉತ್ಸವಕ್ಕೆ ಅದ್ದೂರಿ ತೆರೆ

ಕಲಾತಂಡಗಳೊಂದಿಗೆ ಆಕರ್ಷಕ ಮೆರವಣಿಗೆ: ನವವಧುವಿನಂತೆ ಅಲಂಕೃತಗೊಂಡ ಅರಸೀಕೆರೆ
Published 18 ನವೆಂಬರ್ 2023, 13:46 IST
Last Updated 18 ನವೆಂಬರ್ 2023, 13:46 IST
ಅಕ್ಷರ ಗಾತ್ರ

ಅರಸೀಕೆರೆ: ಇತಿಹಾಸ ಪ್ರಸಿದ್ಧಿ ಪಡೆದಿರುವ ಅರಸೀಕೆರೆ ನಗರದ ದೊಡ್ಡ ಗಣಪತಿಯವರ ವಿಸರ್ಜನಾ ಮಹೋತ್ಸವವು ಶುಕ್ರವಾರ ಹಾಗೂ ಶನಿವಾರ ವೈಭವದಿಂದ ಜರುಗಿದ್ದು, ತಾಲ್ಲೂಕಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ವಾಚನಾಲಯ ರಸ್ತೆಯಲ್ಲಿ ಶುಕ್ರವಾರ ಸಂಜೆ 7.15ಕ್ಕೆ ಹೂವಿನ ಮಂಟಪದಲ್ಲಿ ಕೂರಿಸಿದ್ದ ಗಣೇಶ ವಿಗ್ರಹಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಹಾಮಂಗಳಾರತಿ ಬೆಳಗಿ ಹಾಗೂ ಈಡುಗಾಯಿ ಒಡೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ನಗರದ ಗಾಂಧಿ ಮೈದಾನದಲ್ಲಿ ಚೌತಿಯಂದು ಪ್ರತಿಷ್ಠಾಪಿಸಿದ್ದ 82ನೇ ವರ್ಷದ ಗಣಪತಿಯನ್ನು 62 ದಿನಗಳ ಕಾಲ ಪೂಜೆ, ಮಹಾಮಂಗಳಾರತಿ, ನೈವೇದ್ಯ ನೆರವೇರಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಭಕ್ತಾದಿಗಳಿಂದ ಪುಷ್ಪನಮನ, ಸ್ವಾಮಿಗೆ ಹೂವಿನಹಾರ, ಪ್ರಸಾದ ವಿತರಣೆ, ಭಕ್ತಿಗೀತೆ ಹೀಗೆ ಕರವೇ ಬಳಗ,  ಕರಿಯಮ್ಮ ದೇವಿ ಪ್ಲವರ್ ಡೇಕೋರೇಷನ್, ನಗರದ ಆಟೊ ಚಾಲಕರು, ಮುಸ್ಲಿಂ ಸಂಘ, ಹೂವಿನ ವ್ಯಾಪಾರಿಗಳು, ಹಣ್ಣಿನ ವ್ಯಾಪಾರಿಗಳು ಗಣೇಶನಿಗೆ ಸೇವೆ ಸಲ್ಲಿಸಿದರು.

ಶುಕ್ರವಾರ ರಾತ್ರಿ 12ಕ್ಕೆ ನಗರದ ಅಯ್ಯಪ್ಪ ದೇವಸ್ಥಾನ ಬಳಿ ಹಾಗೂ ಶನಿವಾರ ಅರಸೀಕೆರೆಯ ಕಂತೇನಹಳ್ಳಿ ಕೆರೆಯ ಬಳಿ ಕಾಳಿಕಾಂಬ ಫೈರ್ ವರ್ಕ್ಸ್‌ ವತಿಯಿಂದ ಮದ್ದು ಗುಂಡುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. 

ವಿದ್ಯುತ್ ದೀಪಾಲಂಕಾರದಿಂದ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹಸಿರು ತಳಿರು ತೋರಣ ಹಾಗೂ ಬಾಳೆ ಕಂದುಗಳನ್ನು ಕಟ್ಟಿ ನವ ವಧುವಿನಂತೆ ಶೃಂಗರಿಸಿದ್ದರು. ಮನೆಯ ಬಾಗಿಲಲ್ಲಿ ನೀರು ಹಾಕಿ ಬಣ್ಣ ಬಣ್ಣದ ರಂಗೋಲಿ ಹಾಕಿ, ಸ್ವಾಮಿಯವರ ದರ್ಶನ ಮಾಡಿ, ಪೂಜೆ ಮಾಡಿಸಿ, ಭಕ್ತಿಯ ಪರಾಕಾಷ್ಠೆ ಮೆರೆದರು.

ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೊಹಮ್ಮದ್‌ ಸುಜೀತಾ ಭೇಟಿ ನೀಡಿ ಪರಿಶೀಲಿಸಿದರು.

ಅದ್ದೂರಿ ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯ, ಜಿಲ್ಲೆ, ತಾಲ್ಲೂಕುಗಳಿಂದ ಸಾವಿರಾರು ಭಕ್ತರು ಬಂದಿದ್ದರು. ಶನಿವಾರ ತಾಲ್ಲೂಕು ಕಚೇರಿಯಿಂದ ಆರಂಭವಾದ ಮೆರವಣಿಗೆಯು, ವಿಶೇಷವಾದ ಹುಬ್ಬಳ್ಳಿಯ ಡಿಜೆ ಹಾಗೂ ವಿವಿಧ ಕಲಾತಂಡಗಳ ಕಾರ್ಯಕ್ರಮ ಗಮನ ಸೆಳೆಯಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಸುಗಮ ಸಂಚಾರಕ್ಕೆ ಒಂದು ದಿನದ ಮಟ್ಟಿಗೆ ಬಿ.ಎಚ್. ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲ ಬಗೆಯ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು.

ಉದ್ಯಮಿ ಅರುಣ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ಸಮೀವುಲ್ಲಾ, ಡಿವೈಸ್ಪಿ ಲೋಕೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಗಂಗಾಧರ್, ಗಣಪತಿ ಮಂಡಳಿಯ ರವೀಂದ್ರನಾಥ್, ಎಸ್‌.ವಿ.ಟಿ. ಬಾಬು, ನಾಗಭೂಷಣ್‌, ಪದ್ಮನಾಭ, ವಿಭವ್ ಇಟಗಿ, ಕರವೇ ಹೇಮಂತ್‍ಕುಮಾರ್, ಕಿರಣ್‍ಕುಮಾರ್ ಭಾಗವಹಿಸಿದ್ದರು.

ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ

ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳಾದ ವಾಚನಾಲಯ ರಸ್ತೆ ಶಿವಾಲಯ ಪೇಟೆಬೀದಿ ಹಾಸನ ಸರ್ಕಲ್ ಹಾಸನ ರಸ್ತೆ ಜೇನುಕಲ್ ದ್ವಾರಮಂಟಪ ರೈಲು ನಿಲ್ದಾಣ ರಸ್ತೆ ಶ್ಯಾನುಭೋಗರ ಬೀದಿ ಗರುಡನಗಿರಿ ರಸ್ತೆ ಸಾಯಿನಾಥ ರಸ್ತೆ ಸುಭಾಷ್ ನಗರ ಲಕ್ಷ್ಮೀಪುರ ತಾಲ್ಲೂಕು ಕಚೇರಿ ಎಪಿಎಂಸಿ ಬಿ.ಎಚ್. ರಸ್ತೆಯ ಮೂಲಕ ಸಾಗಿ ಅರಸೀಕೆರೆಯ ಕಂತೇನಹಳ್ಳಿ ಕೆರೆ ತಲುಪಿತು. ಅಲ್ಲಿ ಶನಿವಾರ ಬೆಳಿಗ್ಗೆ ಗಣೇಶ ವಿಗ್ರಹವನ್ನು ವಿಸರ್ಜಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದ ರಂಗು

ಉತ್ಸವದಲ್ಲಿ ಸಾಂಸ್ಕೃತಿಕ ತಂಡಗಳ ಪ್ರದರ್ಶನ ನೋಡುಗರ ಮನಸೂರೆಗೊಂಡಿತು. ಡಿ.ಜೆ. ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಕೀಲುಕುದುರೆ ರೋಡ್ ಆರ್ಕೆಸ್ಟ್ರಾ ಕರಡೆ ವಾದ್ಯ ಕಹಳೆ ವಾದ್ಯ ವೀರಭದ್ರ ಕುಣಿತ ಭದ್ರಕಾಳಿ ಅಣ್ಣಮ್ಮನ ತಮಟೆ ಕೇರಳದ ಪಂಚಕಾಳಿ ನರ್ತನ ಚೆಂಡೆ ವಾದ್ಯ ವೀರಗಾಸೆ ಸೇರಿದಂತೆ ಹಲವು ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT