ಶನಿವಾರ, ಏಪ್ರಿಲ್ 1, 2023
23 °C

ಕಾಲೇಜು ವಿದ್ಯಾರ್ಥಿಗಳಿಗೆ ಶೀಘ್ರ ಲಸಿಕೆ ನೀಡಿ: ನವೀನ್ ರಾಜ್‌ ಸಿಂಗ್‌ ಸೂಚನೆ

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿ 45 ದಾಟಿದ ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಶೀಘ್ರ ಲಸಿಕೆ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್‍ಸಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್-19 ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎಲ್ಲಾ ತಾಲ್ಲೂಕುಗಳ ಕೋವಿಡ್ ಅಂಕಿ ಅಂಶಗಳನ್ನು ನಿಖರವಾಗಿ ದಾಖಲಿಸುವಂತೆ ನಿರ್ದೇಶನ ನೀಡಿದರು.

ಅರಸೀಕೆರೆ ಹಾಗೂ ಅರಕಲಗೂಡು ತಾಲ್ಲೂಕುಗಳಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಹೆಚ್ಚಿದ್ದು, ಇನ್ನಷ್ಟು ನಿಗಾವಹಿಸುವಂತೆ ಸೂಚಿಸಿ, ಆರ್‌ಟಿ–ಪಿಸಿಆರ್‌ ಪರೀಕ್ಷೆಗಳನ್ನು ಅಧಿಕಗೊಳಿಸಬೇಕು ಎಂದು ಹೇಳಿದರು.

ಸೋಂಕಿತರ ಮನೆಗಳ ಬಳಿ ಪೋಸ್ಟರ್ ಅಂಟಿಸುವ ಮೂಲಕ ಕಂಟೈನ್‍ಮೆಂಟ್ ವಲಯ ಎಂದು ಗುರುತಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸೋಂಕಿತರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ಹರಡುವಿಕೆಯ ಪ್ರಮಾಣವನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದರು.

ಲಾಕ್‍ಡೌನ್ ಸಡಿಲಿಕೆ ನಂತರ ಸಾರ್ವಜನಿಕರು ಮಾಸ್ಕ್ ಧರಿಸದೆ, ಅಂತರ ಕಾಯ್ದುಕೊಳ್ಳದೆ ರಸ್ತೆ ಹಾಗೂ ಅಂಗಡಿಗಳ ಬಳಿ ಓಡಾಡುತ್ತಿರುವುದು ಕಂಡು ಬಂದಿದೆ. ಅಂತವರ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ಇಲಾಖೆಯ ನೆರವು ಪಡೆಯುವಂತೆ ಹೇಳಿದರು.

₹5,000 ಮುಂಗಡ ಹಣ ಇರಿಸಿಕೊಂಡು ಅವಶ್ಯವಿರುವ ಸಾರ್ವಜನಿಕರಿಗೆ ಆಮ್ಲಜನಕ ಸಾಂದ್ರಕಗಳನ್ನು ನೀಡುವ ಕುರಿತು ಪರಿಶೀಲನೆ ನಡೆಸಬೇಕು. ಆಸ್ಪತ್ರೆಗಳಲ್ಲಿ ಯಾವುದೇ ರಿತಿಯ ಔಷಧಿಗಳ ಕೊರತೆ ಆಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ಆರ್‌ಟಿ–ಪಿಸಿಆರ್‌ ಪರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿ ಪಾಸಿಟಿವ್ ಬಂದವರನ್ನು ಆರೈಕೆ ಕೇಂದ್ರಗಳಿಗೆ ಕರೆ ತಂದು ಸೂಕ್ತ ಚಿಕಿತ್ಸೆ ನೀಡಬೇಕು. ಅಗತ್ಯವಿದ್ದರೆ ಪೊಲೀಸ್ ಇಲಾಖೆ ನೆರವು ನೀಡಲಾಗುವುದು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಶೀಘ್ರ ಲಸಿಕೆ
ನೀಡುವಂತೆ ಅವರು ಸೂಚನೆ ನಿಡಿದರು.

ವಿಡಿಯೋ ಸಂವಾದದಲ್ಲಿ ಮಾತನಾಡಿದ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ, ತಾಲ್ಲೂಕಿನಲ್ಲಿರುವ ಮಕ್ಕಳ ಹಾಗೂ ಹೆರಿಗೆ ಆಸ್ಪತ್ರೆಗೆ ಮಕ್ಕಳ ತಜ್ಞರನ್ನು ನೇಮಕ ಮಾಡಬೇಕು. ಹೇಮಾವತಿ ಜಲಾಶಯದಿಂದ ಜುಲೈ ಅಂತ್ಯದೊಳಗೆ ರೈತರಿಗೆ ಅನೂಕುಲವಾಗುವಂತೆ ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನ ಕೈಗೊಳ್ಳಲು ಸಭೆ ಆಯೋಜಿಸುವಂತೆ ಮನವಿ ಮಾಡಿದರು.

ಈ ಬಗ್ಗೆ ಶೀಘ್ರ ಕ್ರಮವಹಿಸುವುದಾಗಿ ನವೀನ್ ರಾಜ್ ಸಿಂಗ್ ಹೇಳಿದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ. ಪರಮೇಶ್, ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಹಿಮ್ಸ್ ನಿರ್ದೇಶಕ ಡಾ.ಬಿ.ಸಿ. ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್, ಜಂಟಿ ಕೃಷಿ ನಿರ್ದೇಶಕ ಕೆ.ಎಚ್‌. ರವಿ, ತೋಟಗಾರಿಕ ಇಲಾಖೆ ಉಪನಿರ್ದೇಶಕ ಎಚ್‌.ಆರ್‌. ಯೋಗೇಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು