ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಣನೂರು: ಖಾಸಗಿ ಶಾಲೆ ಮೀರಿಸಿದ ಸರ್ಕಾರಿ ಮಕ್ಕಳ ಮನೆ

Published : 21 ಆಗಸ್ಟ್ 2024, 6:56 IST
Last Updated : 21 ಆಗಸ್ಟ್ 2024, 6:56 IST
ಫಾಲೋ ಮಾಡಿ
Comments

ಕೊಣನೂರು: ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ. ಮಂಜು, ತಾಲ್ಲೂಕಿನ 12 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನೆ, ಪ್ರಿ ಸ್ಕೂಲ್ (ನರ್ಸರಿ, ಎಲ್‍ಕೆಜಿ, ಯುಕೆಜಿ) ಶಾಲೆಗಳನ್ನು ಆರಂಭಿಸುವ ಮೂಲಕ ರಾಜ್ಯದ ಗಮನ ಸೆಳೆಯುವಂತೆ ಮಾಡಿದ್ದಾರೆ.

ರಾಮನಾಥಪುರ ಹೋಬಳಿಯ ಶಾಸಕರ ಸ್ವಗ್ರಾಮ ಹನ್ಯಾಳುವಿನಲ್ಲಿ 2023 ರ ನವೆಂಬರ್ 1 ರಂದು ಹಿರಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಮಕ್ಕಳ ಮನೆ ಪ್ರಾರಂಭಿಸಲಾಗಿತ್ತು. ಕೇವಲ 5 ತಿಂಗಳ ಅವಧಿಯಲ್ಲಿ ಗ್ರಾಮಸ್ಥರ, ಪೋಷಕರು ಹಾಗೂ ಇತರರ ಪ್ರೋತ್ಸಾಹದಿಂದ ಉತ್ತೇಜನಗೊಂಡು, ಹನ್ಯಾಳು ಶಾಲೆಯ ಮಾದರಿಯಲ್ಲೆ ತಾಲ್ಲೂಕಿನಾದ್ಯಂತ 12 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಶಾಸಕ ಎ.ಮಂಜು ತಮ್ಮ ವೇತನದಿಂದ ಈ ಶಾಲೆಗಳಿಗೆ ಬೇಕಾದ ಮೂಲಸೌಲಭ್ಯಗಳು ಹಾಗೂ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಕೊಟ್ಟಿದ್ದಾರೆ. ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ಮೂಲಸೌಕರ್ಯ ಒದಗಿಸಿದ್ದಾರೆ.

ರೈತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ₹30ಸಾವಿರದಿಂದ ₹35 ಸಾವಿರ ಖರ್ಚಾಗಲಿದ್ದು, ಮಕ್ಕಳ ಮನೆಗೆ ಸೇರಿಸಲು ಕೇವಲ ₹1ಸಾವಿರ ಖರ್ಚಾಗುತ್ತದೆ. ಪ್ರತಿ ಶಾಲೆಯಲ್ಲಿ ಒಟ್ಟು 30 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಗ್ರಾಮದ ಜನರಿಗೆ ₹10 ಲಕ್ಷದಿಂದ ₹12 ಲಕ್ಷ ಉಳಿತಾಯವಾಗಲಿದೆ.

ವಿಶೇಷ ಮಾನದಂಡ ಆಧರಿಸಿ ಆಯ್ಕೆಯಾಗಿರುವ ನುರಿತ ಖಾಸಗಿ ಶಿಕ್ಷಕರು, ಈಗಾಗಲೇ ಸಿದ್ದಪಡಿಸಿರುವ ವಿಶೇಷ ಪಠ್ಯಕ್ರಮ ಹಾಗೂ ವಾರದ ಪ್ರತಿ ದಿನ ಪ್ರತಿ ಗಂಟೆಯು ಮಕ್ಕಳಿಗೆ ಯಾವ ವಿಷಯವನ್ನು ಬೋಧಿಸಬೇಕೆಂಬ ಚಾರ್ಟ್ ಅನ್ನು ಸಿದ್ದಪಡಿಸಲಾಗಿದೆ. ಮಕ್ಕಳ ಮನೆಯ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ನೀಡುವ ಪುಸ್ತಕಗಳಿಗಿಂತ ಉತ್ತಮವಾದ ಪುಸ್ತಕಗಳನ್ನು ನೀಡುವುದರ ಜೊತೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲಭಾಷೆ ಕಲಿಸಲು ನುರಿತ ಆಂಗ್ಲಭಾಷಾ ಶಿಕ್ಷಕರನ್ನು ನಿಯೋಜಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯ ನಿರ್ವಹಿಸಲಿದ್ದು, 10 ಗಂಟೆಯಿಂದ 1 ಗಂಟೆಯವರೆಗೆ ತರಗತಿಗಳು ನಡೆಯುತ್ತವೆ.

ರಾಮನಾಥಪುರ, ಕೇರಳಾಪುರ, ಲಕ್ಕೂರು, ಮಧುರನಹಳ್ಳಿ, ಹಂಡ್ರಂಗಿ, ಹುಲಿಕಲ್, ಮಲ್ಲಿಪಟ್ಟಣ, ಕೋಟೆ ಅರಕಲಗೂಡು, ಬೈಚನಹಳ್ಳಿ, ಸಂತೆಮರೂರು, ಬಿದರಕ್ಕ, ಓಡನಹಳ್ಳಿ ಸರ್ಕಾರಿ ಮಕ್ಕಳಮನೆಗಳು ಶಾಸಕರ ಪತ್ನಿ ತಾರಾ ಎ.ಮಂಜು ಅವರ ವಿಶೇಷ ಕಾಳಜಿಯಿಂದ ಲೋಕಾರ್ಪಣೆ ಆಗಿವೆ. ಪ್ರತಿವರ್ಷವೂ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಬ್ಯಾಗ್, ವಾಟರ್ ಬಾಟಲ್ ಇತ್ಯಾದಿ ಪರಿಕರಗಳನ್ನು ನೀಡುತ್ತ ಬರಲಾಗಿದೆ.

ಮಕ್ಕಳ ಮನೆಯ ಪುಟಾಣಿಗಳಿಗೆ ತಾರಾ ಎ.ಮಂಜು ಲೇಖನ ಸಾಮಗ್ರಿ ವಿತರಿಸಿದರು.
ಮಕ್ಕಳ ಮನೆಯ ಪುಟಾಣಿಗಳಿಗೆ ತಾರಾ ಎ.ಮಂಜು ಲೇಖನ ಸಾಮಗ್ರಿ ವಿತರಿಸಿದರು.
ಮಕ್ಕಳ ಮನೆ ಆರಂಭಿಸಿರುವುದು ಗ್ರಾಮೀಣ ಮಕ್ಕಳಿಗೆ ಹೊಸ ಜೀವನ ನೀಡಿದಂತಾಗಿದೆ. ಕಡಿಮೆ ಹಣದಲ್ಲಿಯೇ ಖಾಸಗಿ ಶಾಲೆಗಿಂತಲೂ ಹೆಚ್ಚಿನ ಸೌಕರ್ಯ ಇಲ್ಲಿ ಸಿಗುತ್ತಿದ್ದು ಬಡ ಜನರಿಗೆ ವರದಾನವಾಗಿವೆ.
ವೆಂಕಟೇಶ್‌ ಕೇರಳಾಪುರ ಶಾಲೆ ಮಗುವಿನ ಪೋಷಕ

ಸರ್ಕಾರಿ ಶಾಲೆ ಉಳಿಸುವ ಪ್ರಯತ್ನ

ತಾಲ್ಲೂಕಿನಲ್ಲಿ ಮೊದಲ ಬಾರಿಗೆ ನನ್ನ ಕಲ್ಪನೆಯ ಶಾಲೆ ಪ್ರಾರಂಭವಾಗುತ್ತಿದ್ದು ರಾಜ್ಯದ ಶಾಸಕ ಮಿತ್ರರು ತಮ್ಮ ಕ್ಷೇತ್ರಗಳಲ್ಲಿ ಇದನ್ನು ಪ್ರಾರಂಭಿಸಿದಲ್ಲಿ ಸರ್ಕಾರಿ ಶಾಲೆಗಳು ಉಳಿದು ಬೆಳೆಯುತ್ತವೆ ಎಂದು ಎ.ಮಂಜು ಹೇಳಿದ್ದಾರೆ. ಶೈಕ್ಷಣಿಕ ಬಲವರ್ಧನೆ ಮಾಡಲು ಮಕ್ಕಳ ಮನೆ ಆರಂಭಿಸಲಾಗಿದೆ. ಮಕ್ಕಳ ದಾಖಲಾತಿ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಸ್ತಾಪವನ್ನು ಪದೇ ಪದೇ ಮುಂದಿಡುತ್ತಿರುವ ರಾಜ್ಯ ಸರ್ಕಾರಕ್ಕೆ ತಾಲ್ಲೂಕಿನ ಮಕ್ಕಳ ಮನೆ ಯೋಜನೆ ಸಮರ್ಪಕ ಉತ್ತರವಾಗಬಹುದು ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT