ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‌ಹಿರೀಸಾವೆ | ಎತ್ತುಗಳ ಆಯ್ಕೆ ಪ್ರಕ್ರಿಯೆಗೆ ಬಹಿಷ್ಕಾರ

ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆ: ಹಳ್ಳಿಕಾರ ತಳಿ ಸಾಕಿದವರಿಗೆ ಸನ್ಮಾನ
Published 14 ಜನವರಿ 2024, 14:20 IST
Last Updated 14 ಜನವರಿ 2024, 14:20 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿ ಜಾತ್ರೆಯಲ್ಲಿ ಶನಿವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಉತ್ತಮ ರಾಸುಗಳ ಆಯ್ಕೆ ಸ್ಪರ್ಧೆಯನ್ನು ರೈತರು ಬಹಿಷ್ಕರಿಸಿ, ಹಳ್ಳಿಕಾರ ತಳಿ ಸಂಘದ ವತಿಯಿಂದ ಉತ್ತಮ ಎತ್ತುಗಳನ್ನು ಸಾಕಿದ ರೈತರನ್ನು ಅಭಿನಂದಿಸಿದರು.

ರೈತರು ಹಳ್ಳಿಕಾರ ತಳಿಯ ಎತ್ತಗಳನ್ನು ಸಾಕಿ, ಜಾತ್ರೆಯಲ್ಲಿ ಪ್ರದರ್ಶನ ಮಾಡುತ್ತಾರೆ. ತಾಲ್ಲೂಕು ಆಡಳಿತದಿಂದ ಉತ್ತಮ ರಾಸುಗಳನ್ನು ಆಯ್ಕೆ ಮಾಡಿ, ಬಹುಮಾನ ನೀಡುವ ಪದ್ಧತಿ ಇದುವರೆಗೆ ಇತ್ತು. ಆದರೆ ₹1 ಲಕ್ಷದಿಂದ ₹10 ಲಕ್ಷ ಬೆಲೆಯ ರಾಸುಗಳನ್ನು ಸಾಕಿ, ಜಾತ್ರೆಯಲ್ಲಿ ಪ್ರದರ್ಶನ ಮಾಡುತ್ತೇವೆ, ಆದರೆ ₹1 ಸಾವಿರ, ₹2 ಸಾವಿರ ಬೆಲೆ ವಸ್ತುಗಳನ್ನು ಬಹುಮಾನವಾಗಿ ನೀಡುತ್ತಾರೆ ಎಂದು ರೈತರು ಅಸಮಾಧನಗೊಂಡು, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ.

ರೈತ ಹೊಸೂರು ಕುಮಾರ್ ಮಾತನಾಡಿ, ತಾಲ್ಲೂಕು ಆಡಳಿತಕ್ಕೆ ಜಾತ್ರೆಯಿಂದ ₹10 ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತದೆ. ಆದರೆ ಹಳ್ಳಿಕಾರ ತಳಿ ಉತ್ತಮ ರಾಸುಗಳನ್ನು ಸಾಕಿರುವ ರೈತರನ್ನು ಗೌರವಿಸುವ ಆಸಕ್ತಿ ಇಲ್ಲ. ಇತರೆ ಜಾತ್ರೆಗಳಲ್ಲಿ ಉತ್ತಮ ರಾಸು ಸಾಕಿರುವ ರೈತರಿಗೆ ಚಿನ್ನ, ಬೆಳ್ಳಿಯ ಬಹುಮಾನ ನೀಡುತ್ತಾರೆ. ಆದರೆ ಈ ಜಾತ್ರೆಯಲ್ಲಿ ಜೂಜು ಆಡಲು ಅವಕಾಶ ಮಾಡಿಕೊಡುತ್ತದೆ. ದನದ ಸುಂಕವನ್ನು ತಹಶೀಲ್ದಾರ್ ಹೆಚ್ಚು ಮಾಡುತ್ತಾರೆ, ಆದರೆ ಜಾತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಿಲ್ಲ. ದೇವಸ್ಥಾನದ ಬಳಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇಂದು ಸ್ಪರ್ಧೆ ಇದ್ದರೂ, ಪಶುಪಾಲನಾ ಇಲಾಖೆ ಹೊರತು ಪಡಿಸಿ, ಜಾತ್ರೆಯ ಆಯೋಜಕರಾದ ತಾಲ್ಲೂಕು ಆಡಳಿತ, ಕಂದಾಯ ಇಲಾಖೆ ಮತ್ತು ಪೊಲೀಸರು ಸೇರಿದಂತೆ ಯಾವುದೇ ಅಧಿಕಾರಿಗಳು ಇಲ್ಲ. ಇವರಿಗೆ ರೈತರ ಬಗ್ಗೆ ಯಾವುದೇ ಗೌರವ ಇಲ್ಲ ಎಂದು ಆರೋಪಿಸಿದರು.

ಹಳ್ಳಿಕಾರು ತಳಿ ಸಾಕುವ ರೈತರು ಸೇರಿ ಸಂಘ ರಚನೆ ಮಾಡಿ, ಮುಂದಿನ ವರ್ಷದ ಜಾತ್ರೆಯಲ್ಲಿ ಸಂಘದ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಮತಿಘಟ್ಟ ನಾಗೇಶ್ ಹೇಳಿದರು. ಬೊಮ್ಮೇನಹಳ್ಳಿ ನಾಗರಾಜು, ಅಂತನಹಳ್ಳಿ ರವಿ, ಜನಿವಾರ ಸಂತೋಷ್, ಹೊನ್ನಶೇಟ್ಟಿಹಳ್ಳಿ ಸಂದೀಪ್ ಮಾತನಾಡಿದರು. ಉತ್ತಮ ಎತ್ತುಗಳನ್ನು ಸಾಕಿ, ಪ್ರದರ್ಶನ ಮಾಡಿದ ರೈತರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಆಡಳಿತದ ಆದೇಶದಂತೆ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಶೇಖರ್ ನೇತೃತ್ವದಲ್ಲಿ ಪಶು ವೈದ್ಯರ ತಂಡ ಉತ್ತಮ ರಾಸುಗಳ ಆಯ್ಕೆಗೆ ಜಾತ್ರಾ ಆವರಣಕ್ಕೆ ಆಗಮಿಸಿತ್ತು, ಆದರೆ ಯಾವುದೇ ರೈತರು ಸ್ಪರ್ಧೆಯಲ್ಲಿ ಭಾಗವಹಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT