ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಲೋಕಸಭೆ ಚುನಾವಣೆ | ಸಮಸ್ಯೆಗಳು ಗೌಣ; ಆರೋಪಗಳೇ ಪ್ರಧಾನ

ಲೋಕಸಭೆ ಚುನಾವಣೆಯಲ್ಲಿ ಮತದಾರರ ಓಲೈಕೆಗೆ ಅಭ್ಯರ್ಥಿಗಳ ಕಸರತ್ತು
Published 16 ಏಪ್ರಿಲ್ 2024, 5:13 IST
Last Updated 16 ಏಪ್ರಿಲ್ 2024, 5:13 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಕೇವಲ ರಾಜಕೀಯ ಕೆಸರೆರಚಾಟಗಳೇ ಹೆಚ್ಚಾಗುತ್ತಿದ್ದು, ಸ್ಥಳೀಯ ಸಮಸ್ಯೆಗಳ ಪ್ರಸ್ತಾಪವೇ ಆಗುತ್ತಿಲ್ಲ. ಮೂಲಸೌಕರ್ಯ, ಕಾಡಾನೆ ಸಮಸ್ಯೆ, ಹೇಮಾವತಿ ಜಲಾಶಯ ನಿರಾಶ್ರಿತರ ಹಕ್ಕುಪತ್ರದ ಸಮಸ್ಯೆ ಸೇರಿ ಜನರ ಬಹುದಿನಗಳ ಬೇಡಿಕೆಗಳ ಬಗ್ಗೆ ಯಾವ ಪಕ್ಷದಿಂದಲೂ ಚಕಾರ ಎತ್ತುತ್ತಿಲ್ಲ.

ಏ.26 ರಂದು ಹಾಸನ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಈ ಬಾರಿ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್‌, ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಸೇರಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ ಹಾಗೂ ಎನ್‌ಡಿಎ ಮಧ್ಯೆಯೇ ನೇರ ಪೈಪೋಟಿ ನಡೆಯುತ್ತಿದ್ದು, ಇಬ್ಬರೂ ಅಭ್ಯರ್ಥಿಗಳೂ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಯುತ್ತಿದೆ. ಪ್ರಚಾರ ಸಭೆಗಳಲ್ಲಿ ಕೇವಲ ವೈಯಕ್ತಿಕ ಹೇಳಿಕೆಗಳು, ಅದಕ್ಕೆ ಪ್ರತಿಕ್ರಿಯೆ, ಆರೋಪ–ಪ್ರತ್ಯಾರೋಪಗಳೇ ಪ್ರಧಾನವಾಗುತ್ತಿವೆ. ಗಂಡನ ಜೇಬಿನಿಂದ ತೆಗೆದು ಹೆಂಡತಿಗೆ ಹಣ ಹಾಕುವ ಮೂಲಕ ಗ್ಯಾರಂಟಿ ಕೊಡುವುದಾಗಿ ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ ಎನ್ನುವ ಆರೋಪ ಎನ್‌ಡಿಎ ಮುಖಂಡರದ್ದಾದರೆ, 10 ವರ್ಷದಲ್ಲಿ ಮೋದಿ ಕೇವಲ ಸುಳ್ಳುಗಳನ್ನೇ ಹೇಳಿದ್ದಾರೆ. ರಾಜ್ಯಕ್ಕೆ ತೆರಿಗೆ ಪಾಲು ನೀಡುವಲ್ಲಿ ದ್ರೋಹ ಎಸಗಿದ್ದಾರೆ. ಬರ ಪರಿಹಾರ ಹಣ ಕೊಡುತ್ತಿಲ್ಲ ಎನ್ನುವ ಆರೋಪವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ.

ಮಲೆನಾಡು ಭಾಗದ ರೈತರು ಕೆಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ಧಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದರೆ ರೈತರ ಸಮಸ್ಯೆಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ.
ಶ್ರೇಯಸ್‌ ಪಟೇಲ್‌, ಕಾಂಗ್ರೆಸ್ ಅಭ್ಯರ್ಥಿ

ರಾಜ್ಯ, ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಹೇಳಿಕೆಗಳೇ ಪ್ರಚಾರ ಸಭೆಗಳಲ್ಲಿ ಕೇಳಿ ಬರುತ್ತಿದ್ದು, ವಾಸ್ತವದಲ್ಲಿ ಜಿಲ್ಲೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಹೇಮಾವತಿ ಜಲಾಶಯ ಸಂತ್ರಸ್ತರು ಹಕ್ಕುಪತ್ರ ನೀಡುವಂತೆ ಹಲವು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಈವರೆಗೆ ಯಾವೊಬ್ಬ ಅಭ್ಯರ್ಥಿಗಳು ಈ ವಿಷಯದ ಬಗ್ಗೆ ಗಮನವನ್ನೇ ನೀಡುತ್ತಿಲ್ಲ ಎನ್ನುವ ಆರೋಪ ಸಂತ್ರಸ್ತರಿಂದ ಕೇಳಿ ಬರುತ್ತಿದೆ.

ಇನ್ನು ಮಲೆನಾಡು ಭಾಗದ ಜನರು ತತ್ತರಿಸಿರುವ ಕಾಡಾನೆ ಸಮಸ್ಯೆ ಬಗ್ಗೆಯೂ ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ. ಸಕಲೇಶಪುರ, ಆಲೂರು ಭಾಗಕ್ಕೆ ತೆರಳಿದಾಗ ಮಾತ್ರ ಮಲೆನಾಡಿನ ಸಮಸ್ಯೆಗಳನ್ನು ಪರಿಹರಿಸುವುದಾಗಿ ಅಭ್ಯರ್ಥಿಗಳು, ಮುಖಂಡರು ಹೇಳುತ್ತಾರೆ. ಆದರೆ, ಇದುವರೆಗೆ ಕಾಡಾನೆ ಸಮಸ್ಯೆ ನಿವಾರಿಸಲು ಯಾವ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಒಂದೇ ಒಂದು ಮಾತನ್ನು ಯಾವ ಪಕ್ಷದ ಮುಖಂಡರೂ ಆಡುತ್ತಿಲ್ಲ ಎನ್ನುವ ಬೇಸರ ಮಲೆನಾಡಿನ ಜನರದ್ದು.

‘ಮೋದಿ ಹಾಗೆ ಮಾಡಿದರು, ಹೀಗೆ ಮಾಡಿದರು ಎಂದು ಇವರು ಹೇಳುತ್ತಾರೆ. ಕಾಂಗ್ರೆಸ್‌ನವರು ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಮೋದಿಯವರ ಕಾರ್ಯ, ಕಾಂಗ್ರೆಸ್‌ನವರ ಗ್ಯಾರಂಟಿಗಳು ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ್ದು. ಹಾಸನ ಜಿಲ್ಲೆಯಲ್ಲಿ ಸ್ಥಳೀಯವಾಗಿ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಪ್ರಸ್ತಾಪಿಸುವುದನ್ನು ಬಿಟ್ಟು, ಕೇವಲ ಆರೋಪ–ಪ್ರತ್ಯಾರೋಪ ಮಾಡಲಾಗುತ್ತಿದೆ. ನಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಯಾವಾಗ’ ಎನ್ನುವ ಪ್ರಶ್ನೆ ಸಕಲೇಶಪುರ ತಾಲ್ಲೂಕಿನ ವನಗೂರಿನ ಭರತ್‌ ಅವರದ್ದು.

ಹಲವು ಯೋಜನೆಗಳ ಮೂಲಕ ₹12 ಸಾವಿರ ಕೋಟಿ ಅನುದಾನ ತಂದು ಜಿಲ್ಲೆಯ ಎಲ್ಲ ಭಾಗಗಳಲ್ಲೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಮಲೆನಾಡಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ‌
ಪ್ರಜ್ವಲ್‌ ರೇವಣ್ಣ, ಎನ್‌ಡಿಎ ಅಭ್ಯರ್ಥಿ

‘ಈ ಬಾರಿ ಕುಡಿಯುವ ನೀರಿಗೂ ತೊಂದರೆ ಅನುಭವಿಸುವಂತಾಗಿದೆ. ಗ್ರಾಮಗಳಲ್ಲಿ ಮೂಲಸೌಕರ್ಯಗಳು ಇಲ್ಲ. ಸಕಲೇಶಪುರ ತಾಲ್ಲೂಕಿನ ಕೆಲವೆಡೆ ಮತದಾನ ಬಹಿಷ್ಕರಿಸುವ ಎಚ್ಚರಿಕೆಗಳೂ ಬರುತ್ತಿವೆ. ಆದರೆ, ಅದಾವುದರ ಬಗ್ಗೆಯೂ ಅಭ್ಯರ್ಥಿಗಳಾಗಲಿ, ಪಕ್ಷದ ಮುಖಂಡರಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಮನೆ ಬಾಗಿಲಿಗೆ ಬರುವ ಅಭ್ಯರ್ಥಿಗಳು, ಮುಖಂಡರನ್ನು ಈ ಬಗ್ಗೆ ಪ್ರಶ್ನಿಸುವ ಮನೋಭಾವವನ್ನು ಮತದಾರರು ಬೆಳೆಸಿಕೊಳ್ಳಬೇಕು’ ಎನ್ನುವುದು ಆಲೂರಿನ ನಾಗರಾಜ್‌ ಅವರ ಮಾತು.

‘ಕಾಡಾನೆಗಳಿಂದ ಮುಕ್ತಿ ದೊರಕಿಸಿ’

ನಿತ್ಯ ಬೆಳಗಾದರೆ ಮನೆ ಬಾಗಿಲಿಗೆ ಬರುತ್ತಿರುವ ಕಾಡಾನೆಗಳು ಆತಂಕ ತಂದಿಟ್ಟಿವೆ. ಮನೆಯಿಂದ ಹೊರಗೆ ಬರುವುದಕ್ಕೂ ಹೆದರಿಕೆ ಆಗುತ್ತಿದೆ. ಇಂತಹ ಪರಿಸ್ಥಿತಿಯನ್ನು ನಿವಾರಿಸಲು ಹಲವು ಬಾರಿ ಒತ್ತಾಯಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಆಲೂರು ಸಕಲೇಶಪುರ ತಾಲ್ಲೂಕಿನ ಜನರು ಅಲವತ್ತಿಕೊಳ್ಳುತ್ತಿದ್ದಾರೆ.

‘ಸಕಲೇಶಪುರ ಆಲೂರು ಬೇಲೂರು ತಾಲ್ಲೂಕಿನಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ತೋಟದಲ್ಲಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಇದೆಲ್ಲದರ ಬಗ್ಗೆ ಅಭ್ಯರ್ಥಿಗಳು ಪ್ರಸ್ತಾಪಿಸುತ್ತಲೇ ಇಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಬಂದು ಸುಳ್ಳು ಭರವಸೆ ನೀಡಿ ಮತ ಪಡೆದು ಹೋಗುತ್ತಾರೆ. ಗೆದ್ದ ನಂತರ ನಮ್ಮೂರಿನ ಕಡೆ ತಿರುಗಿಯೂ ಸಹ ನೋಡುವುದಿಲ್ಲ’ ಎಂದು ಸಕಲೇಶಪುರ ತಾಲ್ಲೂಕಿನ ನೆಲಗಳ್ಳಿ ಗ್ರಾಮದ ಮಧು.

‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಚುನಾವಣೆ ಬಹಿಷ್ಕರಿಸಿದ್ದೆವು. ಮಾಜಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹಾಗೂ ಅಧಿಕಾರಿಗಳು ಬಂದು ಭರವಸೆ ನೀಡಿ ಹೋಗಿದ್ದರು. ಎತ್ತಿನಹೊಳೆ ಯೋಜನೆಯ ಮೂಲಕ ಮಲೆನಾಡಿನಿಂದ ನೂರಾರು ಕಿ.ಮೀ. ದೂರದ ಬಯಲುಸೀಮೆಗೆ ನೀರು ಹರಿಸಲಾಗುತ್ತಿದೆ. ನಮ್ಮ ಕಣ್ಣ ಮುಂದೆ ಹರಿಯುವ ಹಳ್ಳಗಳಿಂದ ನಮ್ಮ ಗ್ರಾಮಕ್ಕೆ ನೀರು ಸರಬರಾಜು ಮಾಡದೇ ಇರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿ’ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.

ಹೆತ್ತೂರು ಹೋಬಳಿಯ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರಮಣಿ ತೋಟದಲ್ಲಿ ಕಾಡಾನೆ ಹಾವಳಿಯಿಂದಾಗಿ ನಾಶವಾಗಿರುವ ಏಲಕ್ಕಿ ಗಿಡಗಳು.
ಹೆತ್ತೂರು ಹೋಬಳಿಯ ವನಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರಮಣಿ ತೋಟದಲ್ಲಿ ಕಾಡಾನೆ ಹಾವಳಿಯಿಂದಾಗಿ ನಾಶವಾಗಿರುವ ಏಲಕ್ಕಿ ಗಿಡಗಳು.
ಬೇಲೂರು ತಾಲ್ಲೂಕಿನ ವಾಟೇಹಳ್ಳಿ ಗ್ರಾಮದಲ್ಲಿ ಓಡಾಡಿದ ಕಾಡಾನೆ ‘ಕರಡಿ’
ಬೇಲೂರು ತಾಲ್ಲೂಕಿನ ವಾಟೇಹಳ್ಳಿ ಗ್ರಾಮದಲ್ಲಿ ಓಡಾಡಿದ ಕಾಡಾನೆ ‘ಕರಡಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT