ಬುಧವಾರ, ಅಕ್ಟೋಬರ್ 21, 2020
21 °C
ನ.5 ರಿಂದ 17ರವರೆಗೆ ನಡೆಯುವ ಜಾತ್ರಾ ಮಹೋತ್ಸವ

ಹಾಸನಾಂಬೆ: ಆನ್‌ಲೈನ್ ದರ್ಶನಕ್ಕೆ ಚಿಂತನೆ

ಕೆ.ಎಸ್‌.ಸುನಿಲ್ Updated:

ಅಕ್ಷರ ಗಾತ್ರ : | |

Prajavani

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಶಕ್ತಿದೇವತೆ ಹಾಸನಾಂಬೆಯನ್ನು ಈ ಬಾರಿ ಹತ್ತಿರದಿಂದಕಣ್ತುಂಬಿಕೊಳ್ಳುವ ಅವಕಾಶದಿಂದ ಭಕ್ತರು ವಂಚಿತರಾಗಲಿದ್ದಾರೆ. ಕೋವಿಡ್‌ ಕಾರಣಕ್ಕೆ ಸಂಪ್ರದಾಯಕ್ಕೆ ಚ್ಯುತಿಬಾರದಂತೆ ಸರಳವಾಗಿ ಆಚರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಅಧಿದೇವತೆ ಜಾತ್ರಾ ಮಹೋತ್ಸವ ನ.5 ರಿಂದ 17ರವರೆಗೆ ನಡೆಯಲಿದ್ದು, ಸೋಂಕು ಹೆಚ್ಚುತ್ತಿರುವುದರಿಂದ ಮಹೋತ್ಸವ ವೇಳೆ ಭಕ್ತರಿಗೆ ನಿರ್ಬಂಧ ಹೇರಲು ಮುಂದಾಗಿದೆ.

ಸಂಪ್ರದಾಯದಂತೆ ಅಶ್ವಯುಜ ಮಾಸದ ಪೂರ್ಣಿಮೆಯ ನಂತರ ಮೊದಲ ಗುರುವಾರ ಬಾಗಿಲು ತೆರೆಯುವಮೂಲಕ ವರ್ಷಕ್ಕೆ ಒಂದು ಬಾರಿ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬ ಜಾತ್ರಾ ಮಹೋತ್ಸವ ಮೇಲೂ ಕೊರೊನಾ ಕರಿನೆರಳು ಬೀರಿದೆ. ಹಲವು ದಶಕಗಳ ಬಳಿಕ ಐತಿಹಾಸಿಕ ಹಾಸನಾಂಬ ಉತ್ಸವ ಪೂಜೆ, ನೈವೇದ್ಯ, ಮಹಾಮಂಗಳಾರತಿ ಒಳಗೊಂಡಂತೆ ಎಲ್ಲಾ ಆಚರಣೆ ದೇವಾಲಯದ ಒಳಕ್ಕೇ ಸೀಮಿತಗೊಳ್ಳಲಿದೆ.

ಇಷ್ಟಾರ್ಥ ಸಿದ್ಧಿ ಸಾಕಾರಗೊಳಿಸುವ ದೇವಿ ಎಂಬ ನಂಬಿಕೆಯಿಂದ ಪ್ರತಿ ವರ್ಷ ದರ್ಶನಕ್ಕಾಗಿ ಹಾಸನ ಸೇರಿದಂತೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದರು. ಜಿಲ್ಲಾಡಳಿತದ ಈ ನಿರ್ಧಾರದಿಂದ ಭಕ್ತ ಸಮೂಹಕ್ಕೆ ನಿರಾಸೆಯಾಗಿದೆ.

‘ಜಿಲ್ಲೆಯಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ವೆಬ್‌ಸೈಟ್ ಮೂಲಕ ಆನ್‌ಲೈನ್‌ ನಲ್ಲೇ ದೇವಿಯ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಶೀಘ್ರ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಪ್ರತಿ ವರ್ಷದಂತೆ ಈ ಬಾರಿ ಜನಜಂಗುಳಿಯೊಂದಿಗೆ ಉತ್ಸವ ಆಚರಣೆ ಕಷ್ಟ ಸಾಧ್ಯವಾಗಿದೆ. ಅಂತರ ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಪ್ರತಿವರ್ಷ ಲಕ್ಷಕ್ಕಿಂತ ಹೆಚ್ಚು ಜನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ವರ್ಷ ಜಾಗೃತೆಯಿಂದ ಇರಬೇಕಾಗುತ್ತದೆ’’ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

‘ಮೊದಲ ಹಾಗೂ ಕೊನೆ ದಿನ ಮಾತ್ರ ಪ್ರತಿ ವರ್ಷದಂತೆ ವಿಧಿ ವಿಧಾನಗಳ ಪ್ರಕಾರ ಸಣ್ಣ ಕಾರ್ಯಕ್ರಮ ಆಯೋಜಿಸಿ ಬಾಗಿಲು ತೆರೆಯುವಿಕೆ ಹಾಗೂ ಮುಚ್ಚುವುದಕ್ಕೆ ಚಿಂತಿಸಲಾಗಿದೆ. ಉಳಿದ ದಿನಗಳಲ್ಲಿ ದೇವಸ್ಥಾನದ ಸಿಬ್ಬಂದಿ ಮಾತ್ರ ಪೂಜೆ, ಪುನಸ್ಕಾರ ಮಾಡುತ್ತಾರೆ. ನಗರದಲ್ಲಿ ಅಂತರ ಕಾಯ್ದುಕೊಳ್ಳಲು ಅವಕಾಶವಿರುವ ಸ್ಥಳಗಳಲ್ಲಿ ಎಲ್‌ಇಡಿ ಪರದೆ ಮೂಲಕ ಲೈವ್‍ನಲ್ಲಿ ದರ್ಶನ ನೀಡಲು ನಿರ್ಧರಿಸಲಾಗಿದೆ’ಎಂದು ತಿಳಿಸಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.