ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಗಟ್ಟಿದರು: ಎ.ಟಿ. ರಾಮಸ್ವಾಮಿ ಅಸಮಾಧಾನ

ಎಚ್‌.ಡಿ. ರೇವಣ್ಣ ಕುಟುಂಬದ ವಿರುದ್ಧ ಶಾಸಕ ಎ.ಟಿ. ರಾಮಸ್ವಾಮಿ ಅಸಮಾಧಾನ
Last Updated 28 ಫೆಬ್ರುವರಿ 2023, 10:11 IST
ಅಕ್ಷರ ಗಾತ್ರ

ಹಾಸನ: ‘ನನ್ನ ರಾಜಕೀಯ ಜೀವನದಲ್ಲಿ ಪಕ್ಷಕ್ಕಾಗಲಿ, ನಾಯಕರಿಗಾಗಿ ಕೆಟ್ಟ ಹೆಸರು ಬರುವಂತೆ ನಡೆದುಕೊಂಡಿಲ್ಲ. ಆಡಳಿತ ಪಕ್ಷ ಇರಲಿ, ವಿರೋಧ ಪಕ್ಷ ಇರಲಿ, ತಪ್ಪನ್ನು ತಪ್ಪು ಎಂದು ಹೇಳಿಕೊಂಡು ಬಂದಿದ್ದೇನೆ. ಕೆಲವೊಮ್ಮೆ ಸತ್ಯ ಹೇಳಿದ್ದಕ್ಕೆ ದಂಡ ತೆರಬೇಕಾದ ಪರಿಸ್ಥಿತಿಯು ಎದುರಾಗಿದೆ’ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾರ್ಥಕ್ಕಾಗಿ ಕೆಲವರು ಸತ್ಯವನ್ನು ಸಾಯಿಸುತ್ತಾರೆ. ಯಾರನ್ನು ಬೇಕಾದರೂ ಬಲಿ ಕೊಡುತ್ತಾರೆ. ಅಂಥವರನ್ನು ನಂಬಬಾರದು ಎಂದು ಜನರಲ್ಲಿ ಮನವಿ ಮಾಡುತ್ತೇನೆ’ ಎಂದರು.

‘ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಒಂದೂವರೆ ವರ್ಷದಿಂದ ಒಬ್ಬರು, ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಓಡಾಡುತ್ತಿದ್ದಾರೆ. ಸಭೆ ಮಾಡುತ್ತಿದ್ದಾರೆ. ರೇವಣ್ಣ ಅವರ ಅನುಮತಿ ಇಲ್ಲದೇ ಇದೆಲ್ಲ ಮಾಡಲು ಹೇಗೆ ಸಾಧ್ಯ. ರೇವಣ್ಣ ಅವರೇ ಇದನ್ನು ಖಾಸಗಿಯಾಗಿ ಹೇಳುತ್ತಿದ್ದಾರೆ’ ಎಂದು ದೂರಿದರು.

‘ಲೋಕಸಭಾ ಚುನಾವಣೆ ವೇಳೆ ಹಾಸನದ ಚನ್ನಪಟ್ಟಣದಲ್ಲಿ ಪೂರ್ವಭಾವಿ ಸಭೆ ಕರೆದಿದ್ದರು. ಎಲ್ಲರೂ ಹಾಲಿ ಸಂಸದರ ಹೆಸರು ಹೇಳಲು ಮೊದಲೇ ಸಿದ್ಧವಾಗಿ ಬಂದಿದ್ದರು. ನಾನು ಈಗಿನ ಸಂಸದರ ಹೆಸರು ಹೇಳಲಿಲ್ಲ. ಅಲ್ಲಿಯೇ ಶುರುವಾಯಿತು ಎಂದ ಅವರು, ನನಗೂ ಆತ್ಮಸಾಕ್ಷಿ ಇಲ್ಲವಾ? ಸ್ವತಂತ್ರವಾಗಿ ಅಭಿಪ್ರಾಯ ತಿಳಿಸುವ ಹಕ್ಕು ಇಲ್ಲವೇ’ ಎಂದು ಕೇಳಿದರು.

‘ದೇವೇಗೌಡರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಗಟ್ಟಿದರು. ಆ ಮುತ್ಸದ್ದಿ ರಾಜಕಾರಣಿ ಈ ವಯಸ್ಸಿನಲ್ಲಿ ಸೋಲು ಕಾಣಬೇಕಾಯಿತು. ಅದು ಇಂದಿಗೂ ನಮಗೆ ತುಂಬಾ ನೋವಿನ ವಿಷಯ. ಅವರನ್ನೇ ಹೊರಗಟ್ಟಿದವರಿಗೆ ನಾನು ಯಾವ ಲೆಕ್ಕ’ ಎಂದರು.

‘ಗುಂಪುಗಾರಿಕೆ ನಿಮ್ಮ ಕುಟುಂಬದಿಂದಲೇ ಆಗುತ್ತಿದೆ. ನೀವೇ ಎತ್ತಿ ಕಟ್ಟುತ್ತಿದ್ದೀರಿ’ ಎಂದು ಆರೋಪಿಸಿದ ರಾಮಸ್ವಾಮಿ, ‘ಎಲ್ಲ ಪಕ್ಷದವರಿಂದ ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಬಂದಿದ್ದರೂ ಜೆಡಿಎಸ್‌ನಿಂದ ನನಗೆ ಅನ್ಯಾಯವಾಗಿದೆ’ ಎಂದರು.

‘ಹಾಲಿ ಸಂಸದರು ಕಳೆದ ವಿಧಾನಸಭಾ ಉಪ ಚುನಾವಣೆ ವೇಳೆ ಹುಣಸೂರು, ರಾಜರಾಜೇಶ್ವರಿ ನಗರದಲ್ಲಿ ಸೂಟ್‌ಕೇಸ್ ಕೊಟ್ಟವರಿಗೆ ಜೆಡಿಎಸ್ ಟಿಕೆಟ್ ಎಂದು ಹೇಳಿದ್ದರು. ಯಾರು ಟಿಕೆಟ್ ಕೊಡುತ್ತಿದ್ದರು? ಯಾವ ಹೈಕಮಾಂಡ್ ಕೊಡುತ್ತಿತ್ತು? ಹಾಗೆ ಹೇಳಲು ಲಂಗು ಲಗಾಮು ಇಲ್ಲವೇ? ದೇವೇಗೌಡರು ಈ ಮಾತನ್ನು ಹೇಗೆ ಅರಗಿಸಿಕೊಂಡರು? ಇದೇ ಮಾತನ್ನು ಬೇರೆ ಯಾರಾದರೂ ಆಡಿದ್ದರೆ ಸುಮ್ಮನೆ ಇರುತ್ತಿದ್ದರೆ’ ಎಂದು ಪ್ರಶ್ನಿಸಿದರು.

ಕಪಿಮುಷ್ಠಿಯಲ್ಲಿ ಕೆಎಂಎಫ್, ಡಿಸಿಸಿ ಬ್ಯಾಂಕ್: ‘ಹಾಸನ ಹಾಲು ಒಕ್ಕೂಟ, ಎಚ್‌ಡಿಸಿಸಿ ಬ್ಯಾಂಕ್ ಅವರ ಕಪಿಮುಷ್ಠಿಯಲ್ಲಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಮಸ್ವಾಮಿ, ಡಿಸಿಸಿ ಬ್ಯಾಂಕ್‌ನಲ್ಲಿ ಸಾಲವನ್ನೇ ಪಡೆಯದ ಹಳ್ಳಿ ಮೈಸೂರು ಭಾಗದ ಕೆಲ ರೈತರ ಪಹಣಿಯಲ್ಲಿ ಸಾಲ ಪಡೆಯಲಾಗಿದೆ ಎಂದು ನಮೂದಿಸಲಾಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಭಾರಿ ಅವ್ಯವಹಾರ ಆಗಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಭೆಯಲ್ಲಿಯೇ ವಿಷಯ ಪ್ರಸ್ತಾಪ ಮಾಡಲು ಮುಂದಾದಾಗ, ರೇವಣ್ಣ ನನ್ನನ್ನು ತಡೆಯಲು ಬಂದರು’ ಎಂದು ಹೇಳಿದರು.

‘ಆದರೆ ನಾನು ಅದನ್ನು ಬಿಡಲಿಲ್ಲ. ಉಸ್ತುವಾರಿ ಸಚಿವರಾಗಿದ್ದ ಮಾಧುಸ್ವಾಮಿ ಮುಂದೆ ಪ್ರಸ್ತಾಪ ಮಾಡಿದೆ. ನಂತರ ಅದರ ತನಿಖೆ ಮಾಡಿಸಿ ಅನ್ಯಾಯಕ್ಕೆ ಒಳಗಾಗಿದ್ದ ರೈತರಿಗೆ ನ್ಯಾಯ ಒದಗಿಸಲಾಯಿತು’ ಎಂದು ನೆನಪಿಸಿದರು.

‘ಬಗರ್‌ಹುಕುಂ ಅಡಿಯಲ್ಲಿ ಇವರು ಸಾಕಷ್ಟು ಅವ್ಯವಹಾರ ಮಾಡಿದ್ದಾರೆ. ಸಮಿತಿಯಲ್ಲಿ ಒಪ್ಪಿಗೆ ನೀಡಿದ್ದರೂ, ಹಕ್ಕುಪತ್ರ ನೀಡಲು ಬಿಡುತ್ತಿರಲಿಲ್ಲ. ಇವರು ರೈತರ ಮಕ್ಕಳಾ’ ಎಂದು ಪ್ರಶ್ನಿಸಿದರು.

ಮಂಜು ಜೊತೆ ರಾಜಿ

ಹೈಕೋರ್ಟ್‌ನಲ್ಲಿರುವ ಪ್ರಕರಣ ತೀವ್ರತರವಾಗಿತ್ತು. ಅದನ್ನು ರಾಜಿ ಮಾಡಿಕೊಳ್ಳಲು, ಸ್ವಾರ್ಥಕ್ಕಾಗಿ ಬೇರೆಯವರನ್ನು ಬಲಿ ಕೊಟ್ಟಿದ್ದಾರೆ. ಎ.ಮಂಜು ಜೊತೆ ರಾಜಿ ಮಾಡಿಕೊಂಡಿದ್ದಾರೆ. ನನಗೆ ರಾಜಕೀಯವಾಗಿ ಜೀವದಾನ ಮಾಡಿದ್ದಾರೆ ಎಂದು ರಾಮಸ್ವಾಮಿ ಹೇಳಿದರು.

ತಾವು ಕರೆದಿದ್ದ ಸಭೆಯನ್ನು ಮುಂದೂಡಲಾಗಿದೆ ಎನ್ನುವ ಸುಳ್ಳು ಪತ್ರ ಸೃಷ್ಟಿ ಮಾಡಿದ್ದು ಯಾರು ಎನ್ನುವುದು ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಇದೇ ಕೆಲಸವನ್ನು ಬೇರೆ ಯಾರಾದರೂ ಮಾಡಿದ್ದರೆ ಸುಮ್ಮನೆ ಬಿಡುತ್ತಿದ್ದರಾ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ, ಸಾತ್ವಿಕ ಗುಣದ ನನ್ನನ್ನು ಕೆಣಕಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT