ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಫೋನ್ ಡೆಲಿವರಿ ಬಾಯ್‌ನನ್ನು ಹತ್ಯೆ ಮಾಡಿ ಮೂರು ದಿನ ಗೋಣಿಚೀಲದಲ್ಲಿಟ್ಟಿದವನ ಬಂಧನ

ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವ: ಪ್ರಕರಣ ಭೇದಿಸಿದ ಪೊಲೀಸರು
Last Updated 21 ಫೆಬ್ರುವರಿ 2023, 14:46 IST
ಅಕ್ಷರ ಗಾತ್ರ

ಹಾಸನ: ಅರಸೀಕೆರೆ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ರೈಲ್ವೆ ಹಳಿಯ ಬಳಿ ಅರೆಬರೆ ಸುಟ್ಟ ಯುವಕನ ಶವ ದೊರೆತ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಅರಸೀಕೆರೆ ತಾಲ್ಲೂಕಿನ ಹಳೆಕಲ್ಲನಾಯಕನಹಳ್ಳಿಯ ಹೇಮಂತ್ ನಾಯ್ಕ (23) ಮೃತಪಟ್ಟ ಯುವಕ. ಹೇಮಂತ್‌ ದತ್ತ ಬಂಧಿತ ಆರೋಪಿ ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದರು.

ಹೇಮಂತ್ ನಾಯ್ಕ ಅರಸೀಕೆರೆ ನಗರದ ಇ ಕಾರ್ಟ್ ಎಕ್ಸ್‌ಪ್ರೆಸ್‌ನಲ್ಲಿ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಫೆ.7 ರಂದು ಬೆಳಿಗ್ಗೆ 9.45ಕ್ಕೆ ಗ್ರಾಹಕ ಹೇಮಂತ್ ದತ್ತ ಅವರಿಗೆ ಬಂದಿದ್ದ ಸೆಕೆಂಡ್ ಹ್ಯಾಂಡ್ ಐ ಫೋನ್‌ನನ್ನು ಕೊಡಲು ಹೇಮಂತ್‌ ನಾಯ್ಕ್‌ ಅವರ ಮನೆಗೆ ತೆರಳಿದ್ದರು.

ಈ ವೇಳೆ ಐಫೋನ್ ಬಾಕ್ಸ್ ತೆಗೆದು ತೋರಿಸಿದ ನಂತರ ಹೇಮಂತ್‌ ದತ್ತ ಹಣ ಪಾವತಿಸಲು ನಿರಾಕರಿಸಿದ್ದು, ಐಫೋನ್‌ ಅನ್ನು ವಾಪಸ್‌ ಕಳುಹಿಸುವಂತೆ ಹೇಳಿದ್ದ. ಇದೇ ವಿಷಯಕ್ಕೆ ಶುರುವಾದ ಗಲಾಟೆ ವೇಳೆ ಹೇಮಂತ್ ನಾಯ್ಕ್‌ನಿಗೆ, ಹೇಮಂತ್‌ ದತ್ತ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ನಂತರ ಶವವನ್ನು ಗೋಣಿಚೀಲದಲ್ಲಿ ಹಾಕಿ, ತಮ್ಮ ಮನೆಯ ಶೌಚಾಲಯದಲ್ಲಿ ಮೂರು ದಿನ
ಇಟ್ಟಿದ್ದಾನೆ.

ಫೆ. 11ರಂದು ಬೆಳಗಿನ ಜಾವ ಅರಸೀಕೆರೆ ತಾಲ್ಲೂಕಿನ ಅಂಚೆಕೊಪ್ಪಲು ಬ್ರಿಡ್ಜ್ ಪಕ್ಕದ ರೈಲ್ವೆ ಹಳಿಯ ಬಳಿ ಹೇಮಂತ್ ನಾಯ್ಕನ ಶವವನ್ನು ಸೀಮೆಎಣ್ಣೆ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ತನಿಖೆ ವೇಳೆ ಆರೋಪಿ ಹೇಮಂತ್‌ ದತ್ತ ಹೇಳಿಕೆ ನೀಡಿದ್ದಾನೆ ಎಂದು ವಿವರಿಸಿದರು.

ಹೇಮಂತ್ ನಾಯ್ಕ ಕಾಣೆಯಾಗಿರುವ ಬಗ್ಗೆ ಫೆ. 7ರಿಂದ ಅವರ ಸಹೋದರ ಮಂಜ ನಾಯ್ಕ್ ದೂರು ನೀಡಿದ್ದರು. ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಚಾಕು ಮತ್ತು ಮೃತ ಹೇಮಂತ್ ನಾಯ್ಕ ಅವರ ಮೊಬೈಲ್ ಫೋನ್ ಹಾಗೂ ಡಿಲೆವರಿ ಮಾಡಲು ಬಾಕಿ ಇದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹರಿರಾಂ ಶಂಕರ್‌
ತಿಳಿಸಿದರು.

ಈ ಪ್ರಕರಣದ ನಂತರ ಅರಸೀಕೆರೆ ಪಟ್ಟಣದಲ್ಲಿ ಊಹಾಪೋಹಗಳು ಎದ್ದಿದ್ದು, ಅರಸೀಕೆರೆ ಡಿವೈಎಸ್ಪಿ ಲೋಕೇಶ್‌ ಹಾಗೂ ಇನ್‌ಸ್ಪೆಪೆಕ್ಟರ್ ಗಂಗಾಧರ್ ನೇತೃತ್ವದ ತಂಡ ಕಡಿಮೆ ಅವಧಿಯಲ್ಲಿ ತನಿಖೆ ಕೈಗೊಂಡು ಪ್ರಕರಣದ ಗೊಂದಲಕ್ಕೆ ತೆರೆ ಎಳೆದಿದೆ. ಈ ತಂಡಕ್ಕೆ ₹15 ಸಾವಿರ ನಗದು ಬಹುಮಾನ ಘೋಷಣೆ ಮಾಡಿರುವುದಾಗಿ
ತಿಳಿಸಿದರು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT