ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಚುನಾವಣೆ ಮುಕ್ತಾಯವಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ ಅಧಿಕೃತ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ. ಆದರೆ, ಬಿಜೆಪಿಯಿಂದಲೇ ಆಯ್ಕೆಯಾಗಿ ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದ್ದ ಲತಾದೇವಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಶಾಸಕ ಸ್ವರೂಪ್ ಪ್ರಕಾಶ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ.
ಬುಧವಾರ ನಡೆದ ಚುನಾವಣೆಯಲ್ಲಿ ನಗರಸಭೆ ನೂತನ ಅಧ್ಯಕ್ಷರಾಗಿ 9 ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಎಂ.ಚಂದ್ರೇಗೌಡ, ಉಪಾಧ್ಯಕ್ಷೆಯಾಗಿ 35 ನೇ ವಾರ್ಡ್‌ನ ಲತಾದೇವಿ ಸುರೇಶ್ ಆಯ್ಕೆಯಾಗಿದ್ದಾರೆ.
ಬೆಳಿಗ್ಗೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಎಂ.ಚಂದ್ರೇಗೌಡ, ಗಿರೀಶ್ ಚೆನ್ನವೀರಪ್ಪ, ಅಮೀರ್ ಜಾನ್ ಹಾಗೂ ಕಾಂಗ್ರೆಸ್‌ನ ರೋಹಿನಾ ತಾಜ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಶಿಲ್ಪಾ ವಿಕ್ರಂ, ಜೆಡಿಎಸ್‌ನ ಹೇಮಲತಾ ಕಮಲ್‌ಕುಮಾರ್, ಬಿಜೆಪಿಯಿಂದ ಗೆದ್ದು ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿರುವ ಲತಾದೇವಿ ಸುರೇಶ್, ಗೌಸಿಯಾ ಅಲ್ಮಾಸ್ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮುಗಿದ ನಂತರ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಎಂ.ಚಂದ್ರೇಗೌಡ ಹಾಗೂ ಕಾಂಗ್ರೆಸ್‌ನ ರೋಹಿನ್ ತಾಜ್, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶಿಲ್ಪಾ ವಿಕ್ರಂ, ಲತಾ ದೇವಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದರು.
ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಶಾಸಕ ಸ್ವರೂಪ್ ಪ್ರಕಾಶ್ ಮತ ಸೇರಿ ಒಟ್ಟು 36 ಮತಗಳಿದ್ದವು. ಜೆಡಿಎಸ್‌ನ ಎಂ. ಚಂದ್ರೇಗೌಡರಿಗೆ 34 ಮತಗಳು ಬಂದಿದ್ದು, ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲತಾ ದೇವಿ ಅವರಿಗೆ 21 ಮತಗಳು ಬಂದಿದ್ದು, ಬಿಜೆಪಿ ಅಧಿಕೃತ ಅಭ್ಯರ್ಥಿ ಶಿಲ್ಪಾ ವಿಕ್ರಂ ಅವರಿಗೆ 14 ಮತಗಳು ದೊರೆತವು.
ಸರಣಿ ಸಭೆ: ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಚುನಾವಣೆ ಪ್ರಕ್ರಿಯೆಗಳು ಆರಂಭವಾದವು. ನಾಮಪತ್ರ ಸಲ್ಲಿಕೆ ಮುಗಿದ ನಂತರ ನಗರದ ಖಾಸಗಿ ಹೋಟೆಲ್‍ನಲ್ಲಿ ಶಾಸಕರಾದ ಎಚ್.ಡಿ. ರೇವಣ್ಣ ಮತ್ತು ಎಚ್.ಪಿ. ಸ್ವರೂಪ್ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರ ಗೌಪ್ಯ ಸಭೆ ನಡೆಯಿತು.
ಯಾವ ರೀತಿ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳನ್ನು ಪಡೆಯಬೇಕು. ಬಿಜೆಪಿಗೆ ಯಾವ ರೀತಿ ಪ್ರತ್ಯುತ್ತರ ನೀಡಬೇಕು ಎಂಬುದರ ಕುರಿತು ಚರ್ಚೆಗಳು ನಡೆದು, ಅಂತಿಮವಾಗಿ ತಂತ್ರಗಾರಿಕೆ ರೂಪಿಸಿದರು. ಇದರ ಪರಿಣಾಮವಾಗಿಯೇ ಉಪಾಧ್ಯಕ್ಷರನ್ನಾಗಿ ಬಿಜೆಪಿಯಿಂದ ಗೆದ್ದು ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿರುವ ಲತಾ ದೇವಿ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಈ ಮೂಲಕ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿ ಸದಸ್ಯೆಗೆ ನೀಡುವ ಮೂಲಕ ಮೈತ್ರಿ ಧರ್ಮ ಪಾಲಿಸುವುದು ಒಂದೆಡೆಯಾದರೆ, ಜೆಡಿಎಸ್ ಜೊತೆಗೆ ಬಂದಿರುವ ಲತಾ ದೇವಿ ಅವರಿಗೆ ಸೂಕ್ತ ಸ್ಥಾನ ಮಾನ ಕೊಟ್ಟಂತಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಇದರ ಪರಿಣಾಮ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾಗಿದ್ದ ಗಿರೀಶ್ ಚನ್ನವೀರಪ್ಪ ಮತ್ತು ಅಮೀರ್ ಜಾನ್, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್‍ನ ಇಬ್ಬರೂ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದರು.
ಉಪ ವಿಭಾಗಾಧಿಕಾರಿ ಮಾರುತಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಸ್ವರೂಪ್ ಪ್ರಕಾಶ್ ಅಭಿನಂದಿಸಿದರು.
‘ಶಾಸಕರು ಮತ್ತು ರೇವಣ್ಣ ಸಾಹೇಬರ ಸಹಕಾರದಿಂದ ನಾನು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದೇನೆ. ನನ್ನ ಪರವಾಗಿ ಮತ ಚಲಾಯಿಸಿದ ಎಲ್ಲ ಸದಸ್ಯರಿಗೂ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ’ ಎಂದು ನೂತನ ಉಪಾಧ್ಯಕ್ಷೆ ಲತಾದೇವಿ ಸುರೇಶ್ ಹೇಳಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಎರಡೂ ಪಕ್ಷಗಳ ಮಧ್ಯೆ ತಲಾ 10 ತಿಂಗಳು ಅಧಿಕಾರ ಹಂಚಿಕೆ ಆಗಬೇಕು. 10 ತಿಂಗಳು ಜೆಡಿಎಸ್ ಹಾಗೂ ಉಳಿದ ಹತ್ತು ತಿಂಗಳು ಬಿಜೆಪಿಗೆ ಅವಕಾಶ ಸಿಗಬೇಕು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ದಾಳ ಉರುಳಿಸಿದ್ದರು. ಆದರೆ ಪ್ರತಿದಾಳ ಉರುಳಿಸಿದ ಜೆಡಿಎಸ್ ಮುಖಂಡರು ಅಧ್ಯಕ್ಷ ಸ್ಥಾನ ಉಳಿಸಿಕೊಂಡಿದ್ದಲ್ಲದೇ ತಮ್ಮನ್ನು ಬೆಂಬಲಿಸುತ್ತಿರುವ ಬಿಜೆಪಿ ಸದಸ್ಯೆಯನ್ನೇ ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡುವ ಮೂಲಕ ಪ್ರೀತಂ ಗೌಡ ಹಾಗೂ ಬಿಜೆಪಿ ಮುಖಂಡರಿಗೆ ಪ್ರತ್ಯುತ್ತರ ನೀಡಿದ್ದಾರೆ. ವಿಪ್ ಜಾರಿ ಅಸ್ತ್ರದ ಮೂಲಕ ಶಿಲ್ಪಾ ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಬಿಜೆಪಿ ತಂತ್ರವೂ ವಿಫಲವಾಗಿದೆ.
ವಿಪ್ ಉಲ್ಲಂಘನೆ ಮಾಡಿದಲ್ಲಿ ಸದಸ್ಯತ್ವದಿಂದ ಅನರ್ಹಗೊಳ್ಳುವಂತೆ ಆತಂಕದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲತಾ ದೇವಿಯವರು ತಮ್ಮ ವಿರುದ್ಧವೇ ಮತ ಚಲಾಯಿಸುವಂತಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಶಿಲ್ಪಾ ವಿಕ್ರಂ ಹಾಗೂ ಲತಾ ದೇವಿ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದಿದ್ದರಿಂದ ಬಿಜೆಪಿ ಅಭ್ಯರ್ಥಿ ಶಿಲ್ಪಾ ವಿಕ್ರಂ ಪರವಾಗಿ ಲತಾ ದೇವಿ ಮತ ಚಲಾಯಿಸಿದರು. ಈ ಮೂಲಕ ವಿಪ್ ಉಲ್ಲಂಘನೆಯ ತೂಗುಗತ್ತಿಯಿಂದ ತಪ್ಪಿಸಿಕೊಂಡರು. ಆದರೆ ಜೆಡಿಎಸ್‌ನ 17 ಇಬ್ಬರು ಪಕ್ಷೇತರರು ಶಾಸಕ ಸ್ವರೂಪ್ ಪ್ರಕಾಶ್ ಮತ ಸೇರಿ ಒಟ್ಟು 21 ಮತಗಳನ್ನು ಪಡೆದ ಲತಾ ದೇವಿ ಉಪಾಧ್ಯಕ್ಷೆಯಾಗಿ ತಮ್ಮದೇ ಪಕ್ಷದ ಅಭ್ಯರ್ಥಿ ಶಿಲ್ಪಾ ವಿಕ್ರಂ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು.
ಬಿಜೆಪಿ–ಜೆಡಿಎಸ್ ಮೈತ್ರಿಕೂಟದಲ್ಲಿ ಮುಂದುವರಿದಿದ್ದ ಭಿನ್ನಾಭಿಪ್ರಾಯದ ಲಾಭ ಪಡೆಯಲು ಕಾಂಗ್ರೆಸ್ ಕೂಡ ತಂತ್ರಗಾರಿಕೆ ರೂಪಿಸಿತ್ತು. ಅದರ ಭಾಗವಾಗಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ರೂಹಿನ್ ತಾಜ್ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ನಾಮಪತ್ರ ಸಲ್ಲಿಸಿದ್ದು ಅಂತಿಮ ಹಂತದಲ್ಲಿ ಜೆಡಿಎಸ್–ಬಿಜೆಪಿ ಹೊಂದಾಣಿಕೆ ಆಗದೇ ಇದ್ದರೆ ಬಿಜೆಪಿಯ 14 ಸದಸ್ಯರು ಹಾಗೂ ಪಕ್ಷೇತರರ ಬೆಂಬಲ ಪಡೆದು ಅಧ್ಯಕ್ಷ ಸ್ಥಾನ ಪಡೆಯಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ಸಿಗರದ್ದಾಗಿತ್ತು. ಒಂದು ವೇಳೆ ಅಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಅಧಿಕೃತ ಅಭ್ಯರ್ಥಿ ಶಿಲ್ಪಾ ವಿಕ್ರಂ ಅವರಿಗೆ ಕಾಂಗ್ರೆಸ್‌ನ ಇಬ್ಬರು ಸದಸ್ಯರ ಬೆಂಬಲ ನೀಡಲು ನಿರ್ಧರಿಸಲಾಗಿತ್ತು. ಆದರೆ ಈ ಲೆಕ್ಕಾಚಾರಗಳು ತಲೆಕೆಳಗಾಗಿದ್ದು ಶಾಸಕ ಸ್ವರೂಪ್ ಬೆಂಬಲಿಗರಿಗೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನ ದೊರೆತಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.