ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಂದ್‌ಗೆ ಹಾಸನ ಜಿಲ್ಲೆಯಲ್ಲಿ ಬೆಂಬಲ

ವಿವಿಧ ಸಂಘಟನೆಗಳ ಮುಖಂಡರ ಸಭೆ: ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್
Published 27 ಸೆಪ್ಟೆಂಬರ್ 2023, 13:51 IST
Last Updated 27 ಸೆಪ್ಟೆಂಬರ್ 2023, 13:51 IST
ಅಕ್ಷರ ಗಾತ್ರ

ಹಾಸನ: ಕಾವೇರಿ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯಕ್ಕೆ ಅನ್ಯಾಯ ಎಸಗುತ್ತಿದೆ ಎಂದು ಆರೋಪಿಸಿ ನಾನಾ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿಯೂ ವ್ಯಾಪಕ ಬೆಂಬಲ ನೀಡಲಾಗುವುದು ಎಂದು ನಾನಾ ಸಂಘಟನೆಗಳ ಮುಖಂಡರು ತಿಳಿಸಿದರು.

ಬುಧವಾರ ನಗರದ ಸಾಹಿತ್ಯ ಪರಿಷತ್ ಭವನದ ಸಭಾಂಗಣದಲ್ಲಿ ಸಭೆ ಸೇರಿದ ಮುಖಂಡರು, ಹಾಸನ ನಗರದಲ್ಲಿ ಶುಕ್ರವಾರ (ಸೆ.29) ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ ಬಂದ್ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಬಂದ್‌ಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ, ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಭರ್ತಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ಪ್ರತಿದಿನ ನೀರು ಹರಿಸಲಾಗುತ್ತಿದೆ. ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಆರ್‌ಎಸ್‌ನಲ್ಲಿ ಒಳಹರಿವು ಇದ್ದು, ತಮಿಳುನಾಡಿಗೆ ನೀರು ಹರಿಸುವುದಾಗಿ ಹೇಳುತ್ತಿದ್ದಾರೆ. ಇಂತಹ ಬರ ಪರಿಸ್ಥಿತಿಯಲ್ಲಿ ನಾಡಿಗೆ ನೀರಿನ ಕೊರತೆ ಉಂಟಾಗುವ ತೀರ್ಮಾನ ಕೈಗೊಳ್ಳುವ ಮೂಲಕ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ದೂರಿದರು.

ನಮ್ಮ ಹೋರಾಟ ನಾಡಿನ ಜನರಿಗೆ ಕಾವೇರಿ ವಿಚಾರದಲ್ಲಿ ನ್ಯಾಯ ಒದಗಿಸುವುದಾಗಿದೆ. ಹಾಸನ ನಗರದಲ್ಲೂ ಬೇಸಿಗೆಯಲ್ಲಿ ನೀರಿನ ತೊಂದರೆ ಉಂಟಾಗುವ ಸ್ಥಿತಿ ಇದೆ. ಸಾರ್ವಜನಿಕರು ಬಂದ್‌ಗೆ ಸಹಕರಿಸಬೇಕು. ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಪಟೇಲ್ ಮನವಿ ಮಾಡಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌. ದ್ಯಾವೇ ಗೌಡ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಮಲ್ಲೇಶ ಗೌಡ, ಉದಯ್ ಕುಮಾರ್, ಸಮೀರ್ ಅಹಮದ್ ಹಾಜರಿದ್ದರು.

‘ರೈತರ ಹಿತ ದೃಷ್ಟಿಯಿಂದ ಕರ್ನಾಟಕ ಬಂದ್ ಬೆಂಬಲಿಸಿ’

ನುಗ್ಗೇಹಳ್ಳಿ: ರೈತರ ಹಿತ ದೃಷ್ಟಿಯಿಂದ ಸೆ. 29ರಂದು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ ಅನ್ನು ತಾಲ್ಲೂಕಿನ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಬೆಂಬಲಿಸುವಂತೆ ಕರ್ನಾಟಕ ರಾಜ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಸ್. ರಾಮಚಂದ್ರು ಮನವಿ ಮಾಡಿದರು.

ರಾಜ್ಯದ ರೈತರ ಜೀವನಾಡಿ ಕೆಆರ್‌ಎಸ್ ಜಲಾಶಯದ ನೀರಿನ ಹಂಚಿಕೆ ಪ್ರಮಾಣದಲ್ಲಿ ಅನೇಕ ವರ್ಷಗಳಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯದ ರೈತರ ಹಿತದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ರಾಜ್ಯ ವಿರೋಧಿ ನಿಲುವನ್ನು ವಿರೋಧಿಸಿ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ಬಂದ್ ಯಶಸ್ವಿಗೊಳ್ಳಲು ಸಹಕಾರ ನೀಡುವಂತೆ ಕೋರಿದರು.

ಸಂಘಟನೆಯ ಹೋಬಳಿ ಅಧ್ಯಕ್ಷ ಸೋಮಶೇಖರಯ್ಯ, ಸಂಘಟನೆಯ ಪ್ರಮುಖರಾದ ಹುಲ್ಲೇನಹಳ್ಳಿ ರಾಮಕೃಷ್ಣ, ಕಂಬೇಗೌಡ, ಮಂಜಣ್ಣ, ಆಟೊ ರಾಜಣ್ಣ, ಚಂದ್ರಣ್ಣ, ಅಂಗಡಿ ಮಂಜಣ್ಣ, ಪುಟ್ಟೇಗೌಡ, ಆಟೊ ರಘು, ಸತೀಶ್, ರಾಮಣ್ಣ, ಶಿವಸ್ವಾಮಿ, ಉದ್ಯಮಿ ಜಗದೀಶ್, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಸಮೀವುಲ್ಲಾ, ಗೋಪಾಲ್, ಹೂವಿನಹಳ್ಳಿ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT