ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

350 ಹಾಸಿಗೆಯ ಹಾಸನ ಜಿಲ್ಲಾಸ್ಪತ್ರೆ ಕೋವಿಡ್‌ 19 ಆಸ್ಪತ್ರೆಯಾಗಿ ಪರಿವರ್ತನೆ

ಸರ್ಕಾರಿ ಆಸ್ಪತ್ರೆಯಲ್ಲಿ 21 ಐಸಿಯು, 28 ವೆಂಟಿಲೇಟರ್
Last Updated 3 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಹಾಸನ: ರಾಜ್ಯದಲ್ಲಿ ಕೋವಿಡ್‌– 19 ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ. ಜಿಲ್ಲಾಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ ಹಾಗೂ ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ 28 ಕೃತಕ ಉಸಿರಾಟ ಘಟಕ (ವೆಂಟಿಲೇಟರ್‌) ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ 21 ಐಸಿಯುಗಳಿವೆ. ಜಿಲ್ಲಾಸ್ಪತ್ರೆಯಲ್ಲಿ 18, ಅರಕಲಗೂಡು, ಅರಸೀಕೆರೆ, ಆಲೂರು, ಚನ್ನರಾಯಪಟ್ಟಣ, ಬೇಲೂರು ಆಸ್ಪತ್ರೆಗಳಲ್ಲಿ ತಲಾ ಒಂದು ಹಾಗೂ ಸಕಲೇಶಪುರ, ಹೊಳೆನರಸೀಪುರ ಆಸ್ಪತ್ರೆಗಳಲ್ಲಿ ತಲಾ 2 ವೆಂಟಿಲೇಟರ್‌ ಇದೆ.

ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 50 ಹಾಸಿಗೆಯ ಐಸಿಯು ಇದೆ. ಇಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿರುವ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಕೋವಿಡ್‌ 19 ಪೀಡಿತರಿಗಾಗಿಯೇ 350 ಹಾಸಿಗೆಯ ಪ್ರತ್ಯೇಕ ವಾರ್ಡ್‌ ಸಹ ಮಾಡಲಾಗಿದೆ.

ಏಳು ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಮೂರು ಹಾಸಿಗೆಯ ಐಸಿಯು ಸೌಲಭ್ಯವಿದೆ. ಎಲ್ಲಾ ತಾಲ್ಲೂಕುಗಳಲ್ಲಿಯೂ ಸ್ಪೇಷಲ್‌ ಕ್ವಾರಂಟೈನ್‌ ಸೆಂಟರ್‌ ತೆರೆದಿದ್ದು, 50 ಮಂದಿಯನ್ನು ಇರಿಸಬಹುದಾಗಿದೆ.

ಜಿಲ್ಲೆಯಲ್ಲಿ ಎನ್.95 ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳ ಕೊರತೆ ಇದ್ದರೂ ಎಲ್ಲಾ ವೈದ್ಯರು ಮಾಸ್ಕ್‌ ಧರಿಸಿಯೇ ತಪಾಸಣೆ ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ 24 ತಾಸು ಸಹಾಯವಾಣಿ 08172–246575 ಹಾಗೂ ಕ್ಷಿಪ್ರ ಪ್ರತಿಕ್ರಿಯ ತಂಡ ರಚಿಸಿದೆ. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಯೋಗಾಲಯದಲ್ಲಿ ಕೊರೊನಾ ವೈರಸ್ ಸೋಂಕು ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೂ 40 ಮಾದರಿಗಳ ವೈದ್ಯಕೀಯ ವರದಿ ನೆಗೆಟಿವ್ ಬಂದಿದೆ.

ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲೆಯಲ್ಲಿರುವ 4,48,600 ಕುಟುಂಬಗಳ ಪೈಕಿ 4,22,852 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಇದರಲ್ಲಿ 1503 ಜನರಿಗೆ ಕೆಮ್ಮು, ಶೀತ ಇದೆ. ಹೊರ ಜಿಲ್ಲೆಯಿಂದ 48331, ಹೊರ ರಾಜ್ಯದಿಂದ 2418, ವಿದೇಶದಿಂದ 110 ಮಂದಿ ಬಂದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 11 ಫಿವರ್‌ ಕ್ಲಿನಿಕ್‌ ತೆರೆಯಲಾಗಿದೆ. ತಾಲ್ಲೂಕು ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ತಪಾಸಣೆ ನಡೆಸಿ, ಕೊರೊನಾ ಶಂಕಿತರನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡುವ ವ್ಯವಸ್ಥೆ ಮಾಡಲಾಗಿದೆ.

ತಾಲ್ಲೂಕು ವೈದ್ಯಾಧಿಕಾರಿ, ಸಹಾಯಕ ಅಧಿಕಾರಿ ಹಾಗೂ ಪೊಲೀಸ್‌ ಸಿಬ್ಬಂದಿ ಪ್ರತಿದಿನ ಗೃಹ ವಾಸ್ತವ್ಯದಲ್ಲಿರುವವರ ಮನೆಗೆ ತೆರಳಿ ವೈದ್ಯಕೀಯ ತಪಾಸಣೆ ನಡೆಸುತ್ತಿದ್ದಾರೆ. ವಾಪಸ್‌ ಬಂದವರು ಹಾಗೂ ಅವರ ಮನೆಯ ಸದಸ್ಯರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ವಿದೇಶದಿಂದ ಜಿಲ್ಲೆಗೆ ಬಂದಿರುವವರಲ್ಲಿ ಕೊರೊನಾ ಸೋಂಕಿನ ಶಂಕೆ ಕಂಡು ಬಂದರೆ ಪ್ರತ್ಯೇಕವಾಗಿ ಗೃಹ ವಾಸ್ತವ್ಯದಲ್ಲಿ (ಕ್ವಾರಂಟೈನ್‌) ಇರಿಸುವುದು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT