ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಲೋಕಸಭೆ: ನೇರ ಸ್ಪರ್ಧೆಯಲ್ಲಿ ಮೊಮ್ಮಕ್ಕಳ ಸವಾಲ್‌

ಪ್ರಜ್ವಲ್‌ಗೆ ಕಾಡುತ್ತಿರುವ ಬಿಜೆಪಿಗರ ಮೌನ: ಶ್ರೇಯಸ್‌ಗೆ ತಲೆನೋವಾದ ಮೂಲ ಕಾಂಗ್ರೆಸ್ಸಿಗರ ಅಸಮಾಧಾನ
Published 16 ಏಪ್ರಿಲ್ 2024, 20:58 IST
Last Updated 16 ಏಪ್ರಿಲ್ 2024, 20:58 IST
ಅಕ್ಷರ ಗಾತ್ರ

ಹಾಸನ: ತಾತಂದಿರ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿರುವ ಮೊಮ್ಮಕ್ಕಳು ನೇರ ಸ್ಪರ್ಧೆಗೆ ಇಳಿದಿರುವುದರಿಂದ ಈ ಬಾರಿಯ ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ರಾಜ್ಯದ ಗಮನ ಸೆಳೆದಿದೆ.

‌ಹಾಸನ ಜಿಲ್ಲೆಯ ಏಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಹಾಸನ ಕ್ಷೇತ್ರದಲ್ಲಿ ಮಾಜಿ ಸಚಿವ ದಿ. ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್‌ ಪಟೇಲ್‌ ಕಾಂಗ್ರೆಸ್‌ ಅಭ್ಯರ್ಥಿ. ಎಚ್‌.ಡಿ. ದೇವೇಗೌಡರ ಮೊಮ್ಮಗ, ಶಾಸಕ ಎಚ್‌.ಡಿ.ರೇವಣ್ಣನವರ ಮಗ ಪ್ರಜ್ವಲ್‌ ರೇವಣ್ಣ ಜೆಡಿಎಸ್‌ ಅಭ್ಯರ್ಥಿ.

ವಯಸ್ಸು, ರಾಜಕೀಯ ಹಿನ್ನೆಲೆ, ಆಸ್ತಿ, ವಿದ್ಯಾರ್ಹತೆ ಸೇರಿದಂತೆ ಎಲ್ಲ ಮಾನದಂಡಗಳಲ್ಲೂ ಸಮಬಲವನ್ನು ಹೊಂದಿರುವ ಉಭಯ ಅಭ್ಯರ್ಥಿಗಳೂ, ಆಯಾ ಪಕ್ಷದೊಳಗಿನ ಒಳೇಟಿನ ಆತಂಕ ಎದುರಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ಆಸರೆಯಾಗಿದ್ದರೆ, ‘ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವುದೇ ಗುರಿ’ ಎನ್ನುವ ಮೂಲಕ ಜೆಡಿಎಸ್‌ ಅಭ್ಯರ್ಥಿ ಮತಯಾಚಿಸುತ್ತಿದ್ದಾರೆ.

ವರಿಷ್ಠರ ಮಾತಿಗೆ ಕಟ್ಟುಬಿದ್ದು, ಒಲ್ಲದ ಮನಸ್ಸಿನಿಂದಲೇ ಮೈತ್ರಿಗೆ ಕೈಜೋಡಿಸಿರುವ ಜಿಲ್ಲೆಯ ಬಿಜೆಪಿ ನಾಯಕರು, ಪ್ರಚಾರದಲ್ಲಿ ಸಕ್ರಿಯವಾಗಿಲ್ಲ. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರ ಬಣದ ದಿವ್ಯ ಮೌನ, ಪ್ರಜ್ವಲ್‌ ಪಾಲಿಗೆ ಬಿಡಿಸಲಾರದ ಗಂಟಿನಂತಾಗಿದೆ.

ದೇವೇಗೌಡರು ತಮ್ಮ ವಿರುದ್ಧ ಬಿಜೆಪಿ ವರಿಷ್ಠರಿಗೆ ದೂರು ನೀಡಿರುವುದು ಪ್ರೀತಂಗೌಡರಿಗೆ ಇರಿಸು–ಮುರಿಸು ಉಂಟು ಮಾಡಿದೆ. ವರಿಷ್ಠರ ಮಾತಿಗೆ ಬೆಲೆ ಕೊಟ್ಟು, ಮತಯಾಚಿಸುತ್ತಿದ್ದರೂ, ಎಲ್ಲಿಯೂ ಪ್ರಜ್ವಲ್‌ ಹೆಸರು ಹೇಳುತ್ತಿಲ್ಲ. ‘ಪ್ರೀತಂಗೌಡರ ಈ ಮುನಿಸು, ಪ್ರಜ್ವಲ್‌ ಪಾಲಿಗೆ ಮುಳ್ಳಾಗಲಿದೆಯೇ’ ಎಂಬ ಆತಂಕ ಜೆಡಿಎಸ್ ವಲಯದಲ್ಲಿ ಹೆಚ್ಚಾಗುತ್ತಿದೆ.

ಹೆಚ್ಚಾದ ಶಿವಲಿಂಗೇಗೌಡರ ಪ್ರಭಾವ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡರ ಪ್ರಭಾವವೇ ಹೆಚ್ಚಾಗುತ್ತಿರುವುದು, ಜಿಲ್ಲೆಯ ಮೂಲ ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.

‘ಪಕ್ಷದಿಂದ ಮೊದಲ ಬಾರಿಗೆ ಶಾಸಕರಾದರೂ, ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಎಲ್ಲ ಅಭಿವೃದ್ಧಿ ಕಾರ್ಯಗಳು ಅರಸೀಕೆರೆಗಷ್ಟೇ ಸೀಮಿತವಾಗಿವೆ. ಕೆ.ಎನ್‌. ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ, ಎಲ್ಲವೂ ಶಿವಲಿಂಗೇಗೌಡರ ಆಣತಿಯಂತೆ ನಡೆಯುತ್ತಿದೆ. ಅಲ್ಲದೇ ಅವರ ಮಾತಿನಂತೆಯೇ ಶ್ರೇಯಸ್‌ ಪಟೇಲ್‌ಗೆ ಟಿಕೆಟ್‌ ನೀಡಲಾಗಿದೆ’ ಎಂಬ  ಅಸಮಾಧಾನ ಮೂಲ ಕಾಂಗ್ರೆಸ್ಸಿಗರ ವಲಯದಲ್ಲಿ ಶಮನಗೊಂಡಿಲ್ಲ.

‘ಈ ಬಾರಿ ಚುನಾವಣೆಯಲ್ಲಿ ಶಿವಲಿಂಗೇಗೌಡರೇ ಕಾಂಗ್ರೆಸ್‌ ಪ್ರಚಾರದ ಸಾರಥ್ಯ ವಹಿಸಿದ್ದು, ನಾವು ನೇಪಥ್ಯಕ್ಕೆ ಸರಿಯುವಂತಾಗಿದೆ’ ಎನ್ನುವ ಆರೋಪವೂ ಮೂಲ ಕಾಂಗ್ರೆಸ್ಸಿಗರಿಂದ ಕೇಳಿ ಬರುತ್ತಿದೆ.

ಆರಂಭದಲ್ಲಿಯೇ ಮಾಜಿ ಸಚಿವ ಬಿ. ಶಿವರಾಂ, ಈ ಬಗ್ಗೆ ಅಪಸ್ವರ ಎತ್ತಿದ್ದೂ ಆಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವರಾಂ ಮತ್ತು ಶಿವಲಿಂಗೇಗೌಡರ ಮಧ್ಯೆ ರಾಜೀ ಸಂಧಾನ ಮಾಡಿದ್ದರೂ, ಶಿವರಾಂ ಮುನಿಸು ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ.

ಇದರ ಜೊತೆಗೆ, ‘ಗುಪ್ತವಾಗಿ ಎಚ್‌.ಡಿ. ರೇವಣ್ಣನವರ ಸಂಪರ್ಕದಲ್ಲಿರುವ ನಾಯಕರನ್ನು ಕಡೆಗಣಿಸಿದರೆ ಕಷ್ಟವಾಗಲಿದೆ’ ಎಂಬುದು ಶ್ರೇಯಸ್ ಪಟೇಲ್‌ ಅವರಿಗೂ ಗೊತ್ತಿದೆ. ಹೀಗಾಗಿ ಎಲ್ಲ ನಾಯಕರನ್ನು ಒಟ್ಟಿಗೆ ಕರೆದೊಯ್ಯುವ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ.

ತೆರೆಗೆ ಸರಿದ ಸಮಸ್ಯೆಗಳು:

ಈ ಬಾರಿಯ ಚುನಾವಣೆ ಎರಡು ರಾಜಕೀಯ ಕುಟುಂಬಗಳ ಮಧ್ಯೆ ನಡೆಯುತ್ತಿದ್ದು, ಸಮಸ್ಯೆಗಳ ಪ್ರಸ್ತಾಪವೇ ಇಲ್ಲದಂತಾಗಿದೆ.

ಹಾಸನದ ವಿಮಾನ ನಿಲ್ದಾಣ, ಮಲೆನಾಡು ಭಾಗದ ಕಾಡಾನೆ ಸಮಸ್ಯೆ, ಬೃಹತ್ ಕೈಗಾರಿಕೆಗಳ ಸ್ಥಾಪನೆ, ನನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆ ಸೇರಿದಂತೆ ಅಭಿವೃದ್ಧಿಯ ಕುರಿತು ಯಾವುದೇ ಚರ್ಚೆ ಆಗುತ್ತಿಲ್ಲ.

ಕಣದಲ್ಲಿರುವ ಅಭ್ಯರ್ಥಿಗಳು:

ಬಿಎಸ್ಪಿಯ ಗಂಗಾಧರ್ ಬಹುಜನ್,  ಕರ್ನಾಟಕ ರಾಷ್ಟ್ರ ಸಮಿತಿಯ ದೇವರಾಜಾಚಾರಿ ಎಂ.ವೈ., ಬಹುಜನ್‌ ಭಾರತ ಪಕ್ಷದ ಎಸ್.ಕೆ. ನಿಂಗರಾಜ, ಉತ್ತಮ ಪ್ರಜಾಕೀಯ ಪಕ್ಷದ ಪ್ರತಾಪ ಕೆ.ಎ., ಪೂರ್ವಾಂಚಲ ಮಹಾಪಂಚಾಯತ್‌ನ ಎಚ್.ಡಿ. ರೇವಣ್ಣ ಆರ್‌ಪಿಐನ ಶಿವರಾಜ್ ಬಿ. ಹಾಗೂ 7 ಮಂದಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶ್ರೇಯಸ್ ಪಟೇಲ್‌
ಶ್ರೇಯಸ್ ಪಟೇಲ್‌
ಹಾಸನ ಜಿಲ್ಲೆಯ ಮಲೆನಾಡಿನ ಜನರನ್ನು ಕಾಡುತ್ತಿರುವ ಕಾಡಾನೆ ಉಪಟಳ (ಸಾಂದರ್ಭಿಕ ಚಿತ್ರ)
ಹಾಸನ ಜಿಲ್ಲೆಯ ಮಲೆನಾಡಿನ ಜನರನ್ನು ಕಾಡುತ್ತಿರುವ ಕಾಡಾನೆ ಉಪಟಳ (ಸಾಂದರ್ಭಿಕ ಚಿತ್ರ)
ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಇನ್ನೂ ನಡೆಯುತ್ತಲೇ ಇದೆ.
ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಇನ್ನೂ ನಡೆಯುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT