ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ- ಮಾರನಹಳ್ಳಿವರೆಗೆ ರಸ್ತೆ ದುರಸ್ತಿಗೊಳಿಸದಿದ್ದರೆ ದೂರು ನೀಡುತ್ತೇನೆ: ಶಾಸಕ

ಹೆದ್ದಾರಿಯ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸೂಚನೆ
Last Updated 28 ಜುಲೈ 2021, 4:24 IST
ಅಕ್ಷರ ಗಾತ್ರ

ಸಕಲೇಶಪುರ: ‘ಹಾಸನದಿಂದ ಮಾರನಹಳ್ಳಿವರೆಗೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿರುವ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೂಡಲೇ ದುರಸ್ತಿ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ನಾನೇ ಪೊಲೀಸರಿಗೆ ದೂರು ನೀಡಿ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳಿದರು.

ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಅತಿವೃಷ್ಟಿ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಹಾಸನದಿಂದ ಸಕಲೇಶಪುರಕ್ಕೆ30 ನಿಮಿಷದಲ್ಲಿ ಪ್ರಯಾಣ ಮಾಡಬಹುದು. ಆದರೆ, ರಸ್ತೆ ಸರಿಯಿಲ್ಲದೆ 2 ಗಂಟೆ ಬೇಕಾಗಿದೆ. ಇನ್ನು ಸಕಲೇಶಪುರದಿಂದ ಮಾರನಹಳ್ಳಿವರೆಗೆ ರಸ್ತೆಯೇ ಕಾಣಿಸದಷ್ಟು ಗುಂಡಿಗಳಿವೆ. ಗರ್ಭಿಣಿಯರಂತೂ ಈ ರಸ್ತೆಯಲ್ಲಿ ಪ್ರಯಾಣ ಮಾಡುವುದಕ್ಕೆ ಸಾಧ್ಯವೇ ಇಲ್ಲ. ನಿತ್ಯ ಹತ್ತಾರು ವಾಹನಗಳು ಕೆಟ್ಟು ನಿಲ್ಲುತ್ತವೆ. ಮಳೆ ನೀರು ರಸ್ತೆಯಲ್ಲಿ ಕಳ್ಳದಂತೆ ಹರಿಯುತ್ತದೆ. ಹೇಗೆ ದುರಸ್ತಿ ಮಾಡುತ್ತಾರೋ ಗೊತ್ತಿಲ್ಲ, ಒಂದು ವಾರದೊಳಗೆ ಗುಂಡಿಮುಕ್ತ ಹಾಗೂ ರಸ್ತೆಯಲ್ಲಿ ನೀರು ಹರಿಯದಂತೆ ಕ್ರಮ ಕೈಗೊಳ್ಳಿ’ ಎಂದು ಎಚ್ಚರಿಕೆ ನೀಡಿದರು.

‘ಗಾಳಿ ಮಳೆಯಿಂದ ವಿದ್ಯುತ್‌ ತಂತಿ ತುಂಡಾಗಿ ಬಿದ್ದು ದೊಡ್ಡನಾಗರ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ಕು ಹಸುಗಳು ಸಾವನ್ನಪ್ಪಿವೆ. ಈ ಕುಟುಂಬಕ್ಕೆ ₹ 1.8 ಲಕ್ಷ ಪರಿಹಾರ ನೀಡಲಾಗುವುದು. ಈ ಸಭೆಯಲ್ಲಿಯೇ ಪರಿಹಾರದ ಚೆಕ್‌ ವಿತರಣೆ ಮಾಡಬೇಕಿತ್ತು. ಕೆಲವು ತಾಂತ್ರಿಕ ದೋಷಗಳಿಂದ ತಡವಾಗಿದೆ. ನಾನೇ ಖುದ್ದು ಅವರ ಮನೆಗೆ ತೆರಳಿ ಚೆಕ್‌ ವಿತರಣೆ ಮಾಡುವೆ’ ಎಂದು ಹೇಳಿದರು.

‘ದೋಣಿಗಾಲ್‌ ಗ್ರಾಮದಲ್ಲಿ ಚತುಷ್ಪಥ ಅವೈಜ್ಞಾನಿಕ ಕಾಮಗಾರಿಯಿಂದ ಸುಮಾರು 30 ಎಕರೆ ಭತ್ತ ಬೆಳೆಯುವ ಗದ್ದೆಯ ಮೇಲೆ ಭಾರಿ ‍ಪ್ರಮಾಣದ ಮಣ್ಣು ಬಂದು ಭತ್ತ ಬೆಳೆಯುವುದಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಪಕ್ಕದಲ್ಲಿ ಅಡಿಕೆ ಹಾಗೂ ಕಾಫಿ ತೋಟಗಳಿಗೂ ಹಾನಿ ಆಗಿದ್ದು, ಈ ಕುಟುಂಬಗಳಿಗೂ ಸಹ ಕೂಡಲೇ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದರು.

ತಹಶೀಲ್ದಾರ್‌ ಎಚ್‌.ಬಿ. ಜೈಕುಮಾರ್, ಡಿವೈಎಸ್‌ಪಿ ಅನಿಲ್‌ಕುಮಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್. ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಬಿ. ಶಿವಾನಂದ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT