ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ–ಆನೆ ಸಂಘರ್ಷ | ಕಾರ್ಯಪಡೆ, ಬ್ಯಾರಿಕೇಡ್‌ ಹೊರತು ಅನ್ಯ ಪರಿಹಾರವಿಲ್ಲ: ಕೇಂದ್ರ

Published 11 ಆಗಸ್ಟ್ 2023, 7:47 IST
Last Updated 11 ಆಗಸ್ಟ್ 2023, 7:47 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕಿನಲ್ಲಿ ಆನೆಗಳ ಉಪಟಳ ಹೆಚ್ಚುತ್ತಿದ್ದು, ಮಾನವ–ಆನೆ ಸಂಘರ್ಷ ತಡೆ ಪ್ರಾಥಮಿಕವಾಗಿ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಕೇಂದ್ರ ಸರ್ಕಾರ ಹೇಳಿದೆ.

ದಿನದಿಂದ ದಿನಕ್ಕೆ ಆನೆಗಳು ಮನೆಗಳ ಬಾಗಿಲಿಗೆ ಬರುತ್ತಿದ್ದು, ಬೆಳೆ ನಾಶವಂತೂ ಹೇಳತೀರದಾಗಿದೆ. ಅದಾಗ್ಯೂ ಕೇವಲ ಬ್ಯಾರಿಕೇಡ್‌ ಹಾಗೂ ಆನೆ ಕಾರ್ಯಪಡೆ ರಚನೆ ಮಾತ್ರ ಸದ್ಯಕ್ಕಿರುವ ಪರಿಹಾರ ಮಾರ್ಗಗಳು ಎನ್ನುವುದನ್ನು ಕೇಂದ್ರ ಸರ್ಕಾರ ಉತ್ತರವೇ ಹೇಳುತ್ತಿದೆ.

ಸಂಸದ ಪ್ರಜ್ವಲ್‌ ರೇವಣ್ಣ ಅವರು, ಈಚೆಗೆ ಲೋಕಸಭೆಯಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಅಶ್ವಿನಿಕುಮಾರ್‌ ಚೌಬೆ ನೀಡಿರುವ ಉತ್ತರದಲ್ಲಿ ಈ ಅಂಶಗಳು ಸ್ಪಷ್ಟವಾಗಿವೆ.

2018–19 ರಿಂದ 2022–23 ರವರೆಗೆ ಒಟ್ಟು 18 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವರ ಕುಟುಂಬಗಳಿಗೆ ₹1.25 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಆನೆಗಳಿಂದ ಆಗುತ್ತಿರುವ ಬೆಳೆ ಹಾಗೂ ಪ್ರಾಣ ಹಾನಿಗೆ ಪರಿಹಾರ ನೀಡಲು ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಅದರ ಪ್ರಕಾರ ಬೆಳೆ ನಷ್ಟಕ್ಕೆ ಪರಿಹಾರವನ್ನೂ ಒದಗಿಸಲಾಗುತ್ತಿದೆ ಎನ್ನುವ ಉತ್ತರವನ್ನು ಕೇಂದ್ರ ಸಚಿವರು ನೀಡಿದ್ದಾರೆ.

ಶಾಶ್ವತ ಪರಿಹಾರವಿಲ್ಲ: ಆನೆಗಳನ್ನು ಸ್ಥಳಾಂತರ ಮಾಡಬೇಕು ಎನ್ನುವ ಜನರ ಬೇಡಿಕೆ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ಕೇಂದ್ರ ಸರ್ಕಾರ ನೀಡಿರುವ ಉತ್ತರದ ಪ್ರಕಾರ, ರಾಜ್ಯ ಸರ್ಕಾರ ಆನೆ ಕಾರ್ಯಪಡೆಯನ್ನು ರಚಿಸಿದ್ದು, ಅದಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿದೆ. ಡಿಸಿಎಫ್‌ ನೇತೃತ್ವದ ಆನೆ ಕಾರ್ಯಪಡೆಯ 27 ತಂಡಗಳನ್ನು ರಚಿಸಿದ್ದು, 108 ಜನ ವಾಚರ್‌ಗಳನ್ನು ನಿಯೋಜಿಸಲಾಗಿದೆ.

ಇತರ ಜೊತೆಗೆ ರೈಲ್ವೆ ಹಳಿಗಳನ್ನು ಉಪಯೋಗಿಸಿ, ಬ್ಯಾರಿಕೇಡ್‌ ನಿರ್ಮಾಣ ಮಾಡುವ ಕಾರ್ಯ ಹಮ್ಮಿಕೊಳ್ಳಲಾಗಿದೆ. 2020–21 ರಲ್ಲಿ 4.511 ಕಿ.ಮೀ., 2021–22 ರಲ್ಲಿ 5.148 ಕಿ.ಮೀ. ಬ್ಯಾರಿಕೇಡ್ ನಿರ್ಮಾಣ ಪೂರ್ಣಗೊಂಡಿದೆ. ಜೊತೆಗೆ 2022–23 ರಲ್ಲಿ 11.147 ಕಿ.ಮೀ. ಬ್ಯಾರಿಕೇಡ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ಇದರ ಜೊತೆಗೆ ಬೆಳೆಗಾರರು ತಮ್ಮ ಬೆಳೆ ಸಂರಕ್ಷಣೆ ಮಾಡಿಕೊಳ್ಳಲು ಸೌರ ವಿದ್ಯುತ್ ಬೇಲಿ ಅಳವಡಿಸಿಕೊಳ್ಳಬಹುದಾಗಿದ್ದು, ಇದಕ್ಕೆ ಶೇ 50 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಚೌಬೆ ತಿಳಿಸಿದ್ದಾರೆ.

ಆನೆ ವಾಸಸ್ಥಾನ ಅಭಿವೃದ್ಧಿ: ಆನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ತಪ್ಪಿಸಲು, ಆನೆಗಳು ಇರುವ ಸ್ಥಳದಲ್ಲಿಯೇ ಅಗತ್ಯ ಆಹಾರ, ನೀರು ಒದಗಿಸಲು ಕೇಂದ್ರ ಪುರಸ್ಕೃತ ಹಲವು ಯೋಜನೆಗಳ ಅಡಿಯಲ್ಲಿ ಅನುದಾನ ನೀಡಲಾಗುತ್ತಿದೆ.

ಆನೆಗಳಿಗೆ ನೀರಿನ ತೊಟ್ಟಿಗಳ ನಿರ್ಮಾಣ, ಅಗತ್ಯ ಆಹಾರ ನೀಡುವ ಮರಗಳನ್ನು ಬೆಳೆಸುವುದು, ಬಿದಿರು ಬೆಳೆಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆರಂಭಿಸಬಹುದಾಗಿದೆ. ಇದರ ಜೊತೆಗೆ ಪ್ರಾಣಿಗಳ ರಕ್ಷಣಾ ಕೇಂದ್ರವನ್ನು ಆರಂಭಿಸಬಹುದು. ಇದೆಲ್ಲದರ ಪರಿಣಾಮ ಮಾನವ–ಆನೆ ಸಂಘರ್ಷ ಕಡಿಮೆ ಮಾಡಬಹುದು ಎಂದು ಕೇಂದ್ರ ಸಚಿವ ಚೌಬೆ ತಿಳಿಸಿದ್ದಾರೆ.

ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗವು ಗುರುವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿತು
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗವು ಗುರುವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿತು
2001–02 ರಿಂದ ಇಲ್ಲಿಯವರೆಗೆ 47 ಕಾಡಾನೆಗಳ ಸ್ಥಳಾಂತರ ನಾಲ್ಕು ಕಾಡಾನೆಗಳಿಗೆ ರೆಡಿಯೊ ಕಾಲರ್‌ ಅಳವಡಿಕೆ ಆನೆ ಕಾರ್ಯಪಡೆ ಮೂಲಕ ಚಲನವಲನದ ಮೇಲೆ ನಿಗಾ
‘ಆನೆ ಸ್ಥಳಾಂತರಕ್ಕೆ ಪ್ರಸ್ತಾವ ಸಲ್ಲಿಸಿ’
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗವು ಗುರುವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಮಲೆನಾಡಿನ ಭಾಗದಲ್ಲಿನ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಈ ಭಾಗದಲ್ಲಿ ಕಾಡೆಮ್ಮೆ ಕಾಡುಕೋಣಗಳ ಹಾವಳಿಯೂ ಹೆಚ್ಚಾಗಿದ್ದು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಸಹಾಯಧನ ನೀಡುವಂತೆ ಬೇಡಿಕೆ ಸಲ್ಲಿಸಲಾಯಿತು. ಹಾಸನ ಜಿಲ್ಲೆಯ ಆಲೂರು ಬೇಲೂರು ಸಕಲೇಶಪುರ ಮತ್ತು ಅರಕಲಗೂಡು ತಾಲ್ಲೂಕಿನ ಕಾಫಿ ಬೆಳೆಗಾರರಿಗೂ ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಂತೆ ಕಾಡಾನೆ ಬೆಳೆ ನಷ್ಟಕ್ಕೆ ಕಾಡಾನೆ ಬೆಳೆ ನಷ್ಟ ಪರಿಹಾರ ವಿಮೆಯನ್ನು ಜಾರಿಗೆ ತರುವಂತೆ ಬೇಡಿಕೆ ಸಲ್ಲಿಸಲಾಯಿತು. ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಕೆ.ಎನ್. ಸುಬ್ರಹ್ಮಣ್ಯ ಪದಾಧಿಕಾರಿಗಳಾದ ಎಂ.ಬಿ. ರಾಜೀವ್ ಎಂ.ಎಸ್. ಚಂದ್ರಶೇಖರ್ ಕೆ.ಪಿ. ಕೃಷ್ಣೇಗೌಡ ಎನ್.ಈ. ಸೋಮಶೇಖರ್ ಎಚ್.ಎಂ. ರಮೇಶ್ ಕಸಬಾ ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷ ಆರ್.ಎಂ. ಚಂದ್ರಶೇಖರ್ ಪದಾಧಿಕಾರಿಗಳಾದ ಬಿ.ಎಂ. ಮದನ್ ಕುಮಾರ್ ಕೆ.ವಿ ಮೇಘರಾಜ್ ವಿಲ್ಫಿ ಡಿಸೋಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT