ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಪ್ರಜ್ವಲ್‌ ಹೆಸರು ಘೋಷಣೆಗೆ ಪ್ರೀತಂ ಗೌಡ ಪರೋಕ್ಷ ಆಕ್ಷೇಪ

Published 30 ಡಿಸೆಂಬರ್ 2023, 14:44 IST
Last Updated 30 ಡಿಸೆಂಬರ್ 2023, 14:44 IST
ಅಕ್ಷರ ಗಾತ್ರ

ಹಾಸನ: ‘ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ತಿಳಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕೀಯವಾಗಿ ಜೆಡಿಎಸ್‌ ಪಕ್ಷವು ಎನ್‌ಡಿಎ ಮೈತ್ರಿಕೂಟದ ಒಂದು ಭಾಗವಾಗಿ ಬಂದಿದೆ. ಬಿಜೆಪಿ ಕಾರ್ಯಕರ್ತರು ಟಿಕೆಟ್ ಕೇಳುತ್ತಿದ್ದಾರೆ. ಆರ್‌ಪಿಐನವರು ರಾಜ್ಯದಲ್ಲಿ ಒಂದು ಸ್ಥಾನ ಕೊಡಿ ಎಂದು ಕೇಳುತ್ತಿದ್ದಾರೆ. ಇದು ಸಹಜ. ಹಾಗಾಗಿ ಇನ್ನೂ ಟಿಕೆಟ್ ಹಂಚಿಕೆ ಅಂತಿಮವಾಗಿಲ್ಲ’ ಎಂದರು.

‘ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್‌ ಮೈತ್ರಿ ಆಗಿದ್ದರೂ, ಜೆಡಿಎಸ್ -ಬಿಜೆಪಿ‌ ಮಧ್ಯೆ ಪೈಪೋಟಿ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ಇಬ್ಬರು ಬಿಜೆಪಿ ಶಾಸಕರಿದ್ದಾರೆ. ಒಳ್ಳೆಯ ವಾತಾವರಣವಿದೆ. ಹಾಸನ ಕ್ಷೇತ್ರವನ್ನು ಬಿಜೆಪಿಗೆ ಕೊಟ್ಟರೆ ಗೆಲುವಿನ ಅವಕಾಶ ಹೆಚ್ಚಿದೆ ಎನ್ನುವುದು ಮತದಾರರ ಭಾವನೆಯಾಗಿದೆ’ ಎಂದರು. ಈ ಮೂಲಕ ಪ್ರಜ್ವಲ್‌ ಹೆಸರು ಘೋಷಣೆಗೆ ಪ್ರೀತಂ ಗೌಡ ಪರೋಕ್ಷ ಆಕ್ಷೇಪ ವ್ಯಕ್ತಪಡಿಸಿದರು.

‘ಯಾವ ಸ್ಥಾನ ಯಾರಿಗೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಒಂದು ವೇಳೆ ಮೈತ್ರಿಕೂಟದಲ್ಲಿ ಹಾಸನ ಕ್ಷೇತ್ರವನ್ನು ಜೆಡಿಎಸ್‌ಗೆ ಕೊಟ್ಟರೆ, ಎಚ್‌.ಡಿ. ದೇವೇಗೌಡರು ಹೇಳಿದಂತೆ ಪ್ರಜ್ವಲ್‌ ಎನ್‌ಡಿಎ ಅಭ್ಯರ್ಥಿ ಆಗಲಿದ್ದಾರೆ. ಇದೆಲ್ಲವನ್ನೂ ಪಕ್ಷದ ವರಿಷ್ಠರು ನಿರ್ಧಾರ ಮಾಡಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡುತ್ತಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಕಾಮಿಡಿ ಶೋನಲ್ಲಿ ಚಪ್ಪಾಳೆ ಹೆಚ್ಚಾದಷ್ಟೂ ಮಾತುಗಳೂ ಹೆಚ್ಚಾಗುತ್ತವೆ. ಅವರಿಗೆ ಅಗತ್ಯಕ್ಕೂ ಹೆಚ್ಚಿನ ಮಹತ್ವ ಕೊಟ್ಟಿದ್ದಕ್ಕೆ ಹೀಗಾಗಿದೆ. ಆ ಬಗ್ಗೆ ಜಾಸ್ತಿ ಮಾತನಾಡುವ ಅವಶ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT