ಶುಕ್ರವಾರ, ಡಿಸೆಂಬರ್ 4, 2020
24 °C
ಕೊನೆಯ ಎರಡು ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ

ಹಾಸನಾಂಬೆ ದರ್ಶನ: ಪುನೀತರಾದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಶಕ್ತಿ ದೇವತೆ ದರ್ಶನವನ್ನು ಭಾನುವಾರ ಸಹಸ್ರಾರು ಭಕ್ತರು ಪಡೆದರು. ಯಾವುದೇ ಗೊಂದಲಗಳಿಗೆ
ಅವಕಾಶವಾಗದಂತೆ ಜಿಲ್ಲಾಡಳಿತ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿತು.

ಕೋವಿಡ್‌ ಭೀತಿಯಿಂದಾಗಿ ಈ ಬಾರಿ ಸಾರ್ವಜನಿಕ ದರ್ಶನಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಆನ್‌ಲೈನ್‌ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲ ಮುಂಭಾಗ ಜಮಾಯಿಸಿದ ಕಾರಣ ಶನಿವಾರ ಸಂಜೆ ಹಾಗೂ ಭಾನುವಾರ ದೇವಿ ದರ್ಶನಕ್ಕೆ ಅವಕಾಶ ನೀಡಲಾಯಿತು.

ನಸುಕಿನ 5 ರಿಂದಲೇ ಭಕ್ತರು ದರ್ಶನ ಪಡೆದು ಪುನೀತರಾದರು. ಕ್ರಮೇಣ ಸರತಿ ಸಾಲು ಬೆಳೆಯಿತು. ಮಧ್ಯಾಹ್ನ ನಂತರ ಸರತಿ ಸಾಲು ಮುಂದೆ ಸಾಗದೆ ಜನದಟ್ಟಣೆ ಹೆಚ್ಚಾಯಿತು. ವಿಷಯ ತಿಳಿದ ನಗರ ಹಾಗೂ ಸುತ್ತಮುತ್ತಲ ಜಿಲ್ಲೆಯ ಭಕ್ತರು ಹಾಸನಾಂಬ ದರ್ಶನ ಪಡೆಯಲು ಆಗಮಿಸತೊಡಗಿದರು.

ದೇವಾಲಯಕ್ಕೆ ಪ್ರವೇಶ ನಿಷೇಧಿಸಿದ್ದರೂ ಅನೇಕರು ದೇವಾಲಯ ಹೊರಗೆ ನಿಂತು ದೇವಿಯ ಕೈ ಮುಗಿದು ಹಿಂತಿರುಗುತ್ತಿದ್ದರು. ಆದರೆ, ಕೊನೆಯ ದಿನ ದೇವಿಯ ದರ್ಶನ ಭಾಗ್ಯ ದೊರೆಯಿತು. ಸಂಜೆ ದೇವರ ರಥೋತ್ಸವ ಹಾಗೂ ಮೆರವಣಿಗೆ ಸರಳವಾಗಿ ನೆರವೇರಿತು. ಗರ್ಭಗುಡಿ ಬಾಗಿಲು ತೆರೆದ ಮೊದಲ ದಿನ ಹಾಗೂ ಕೊನೆ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ನ.16ರಂದು ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. 

‘ಸಂಪ್ರದಾಯದಂತೆ ಅಶ್ವಯುಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.17ಕ್ಕೆ ಅಮ್ಮನವರ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಾಗಿದೆ. ಬಿದಿಗೆ ದಿನ ಬಾಗಿಲು ಮುಚ್ಚಬೇಕು. ಮಂಗಳವಾರ ತದಿಗೆ ಇರುವುದರಿಂದ ಅಂದು ಬಾಗಿಲು ಮುಚ್ಚಿದರೆ ಅನಾನುಕೂಲವಾಗಲಿದೆ. ಹಾಗಾಗಿ ಅಮ್ಮನ ಪ್ರೇರಣೆಯಂತೆ ಸೋಮವಾರ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು’ ಎಂದು ದೇಗುಲದ ಪ್ರಧಾನ ಅರ್ಚಕ ನಾಗರಾಜ್ ತಿಳಿಸಿದರು.

ಬೇಡಿಕೆ ಈಡೇರಿಸಿದ ಅಧಿದೇವತೆ
ಹಾಸನ: ‘ಕಳೆದ ವರ್ಷ ಶಾಸಕನಲ್ಲದೆ ದೇವಿ ದರ್ಶನಕ್ಕೆ ಬಂದಿದ್ದ ನಾನು ಈ ಬಾರಿ ಸಚಿವನಾಗಿ ಬಂದಿದ್ದೇನೆ. ಹಾಸನಾಂಬೆ ನನ್ನ ಪ್ರಾರ್ಥನೆಯನ್ನು ಈಡೇರಿಸಿದ್ದಾಳೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

ಶನಿವಾರ ರಾತ್ರಿ ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019ರ
ನವೆಂಬರ್‌ನಲ್ಲಿ ಹಾಸನಾಂಬ ಜಾತ್ರೆಗೆ ಬಂದಾಗ ಉಪಚುನಾವಣೆಯಲ್ಲಿ ಗೆಲ್ಲಿಸುವಂತೆ ಪ್ರಾಥಿಸಿದ್ದೆ. ಈಗ ಕೃಷಿ ಸಚಿವನಾಗಿ ತಾಯಿಯ ದರ್ಶನ ಪಡೆದಿದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ಭೇಟಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಅಭಿವೃದ್ಧಿ ವಿಚಾರವಾಗಿ ನಾಯಕರಿಬ್ಬರು ಮಾತುಕತೆ ನಡೆಸಿರಬಹುದು. ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.