ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಜಿಲ್ಲೆಗೆ ₹10 ಕೋಟಿ ನೀಡಿ: ಎಚ್‌.ಡಿ. ರೇವಣ್ಣ

ರೆಮ್‌ಡಿಸಿವಿರ್‌ ಚುಚ್ಚುಮದ್ದಿನ ಅಭಾವ: ಸರ್ಕಾರ ವಿರುದ್ಧ ಅಸಮಾಧಾನ
Last Updated 27 ಏಪ್ರಿಲ್ 2021, 5:13 IST
ಅಕ್ಷರ ಗಾತ್ರ

ಹಾಸನ: ‘ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಜಿಲ್ಲೆಯಲ್ಲಿ ರೆಮ್‌ಡಿಸಿವಿರ್‌ ಚುಚ್ಚುಮದ್ದು ಕೊರತೆ ಉಂಟಾಗಿದೆ. ಕೋವಿಡ್‌ ಹತೋಟಿ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಆರೋಪಿಸಿದರು.

‘ಕೊರೊನಾ ನಿಯಂತ್ರಣಕ್ಕೆ ಅಗತ್ಯ ಸಿದ್ಧತೆ ಮತ್ತು ಕ್ರಮ ಕೈಗೊಳ್ಳಲು ಪ್ರತಿ ಜಿಲ್ಲೆಗೆ ₹ 10 ಕೋಟಿ ಕೂಡಲೇ ನೀಡಬೇಕು ಎಂದು ಕಳೆದ 10 ದಿನಗಳಿಂದ ಕೇಳುತ್ತಿದ್ದರೂ ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸದೇ ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಜಿಲ್ಲೆಯಲ್ಲಿ ರೆಮ್‌ಡಿಸಿವಿರ್‌ ಚುಚ್ಚುಮದ್ದಿಗೆ ತುಂಬಾ ಅಭಾವ ಉಂಟಾಗಿದೆ. ಯಾವುದೇ ಮೆಡಿಕಲ್‌ ಶಾಪ್‌ಗಳಲ್ಲಿಯೂ ಸಿಗುತ್ತಿಲ್ಲ. ನಾನು ನಿನ್ನೆ ಕರೆ ಮಾಡಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ 480 ಡೋಸ್‌ ಚುಚ್ಚುಮದ್ದು ತರಿಸಿ ಕೊಟ್ಟಿದ್ದೇನೆ. ಜಿಲ್ಲೆಯ ಡ್ರಗ್‌ ಕಂಟ್ರೋಲ್‌ ಅಧಿಕಾರಿ ನಾಪತ್ತೆಯಾಗಿದ್ದಾರೆ. ಜಿಲ್ಲೆಗೆ ಅಗತ್ಯಕ್ಕೆ ಅನುಗುಣವಾಗಿ ಸರ್ಕಾರವೇ ತಾಲ್ಲೂಕುವಾರು ರೆಮ್‌ಡಿಸಿವಿರ್‌ ಚುಚ್ಚುಮದ್ದು ರವಾನೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಈ ಚುಚ್ಚುಮದ್ದನ್ನು ಮನಬಂದಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದೆ. ಅಲ್ಲದೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವೆಚ್ಚಗಳ ಬಗ್ಗೆ ಪ್ರಕಟಣೆ ಹೊರಡಿಸದೇ ಬಡವರು, ರೈತರ ಸುಲಿಗೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳಲು ಯಾವುದೇ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ಆರೋಪಿಸಿದರು.

‘ಕೋವಿಡ್‌ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ಕೂಡಲೇ ಜಿಲ್ಲೆಯ ಶಾಸಕರ ಸಭೆ ಕರೆಯಬೇಕು ಎಂದು ಕೆಲವು ದಿನಗಳಿಂದ ಮನವಿ ಮಾಡಿದರೂ ಈ ಬಗ್ಗೆ ಗಮನಹರಿಸಿಲ್ಲ. ರಾಜ್ಯ ಸರ್ಕಾರವು ಜಿಲ್ಲೆಯಲ್ಲಿ ಅತ್ಯಂತ ನಿರ್ಲಕ್ಷ್ಯವಾಗಿ ನೋಡುತ್ತಿದೆ. ನನ್ನ 21 ವರ್ಷದ ರಾಜಕೀಯ ಅವಧಿಯಲ್ಲಿ ಈ ಮಟ್ಟದ ಸರ್ಕಾರವನ್ನು ನೋಡಿಲ್ಲ’ ಎಂದು ಅಸಮಾಧಾನವ್ಯಕ್ತಪಡಿಸಿದರು.

ಇಂತದ ತುರ್ತು ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ವಾಸ್ತವ್ಯ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಮಾತು ಜಿಲ್ಲೆಯಲ್ಲಿ ನಡೆಯುವುದಿಲ್ಲ. ಜಿಲ್ಲೆಯನ್ನು ಲೂಟಿಕೋರರು ನಿಯಂತ್ರಿಸುತ್ತಿದ್ದು. ಬಡವರ ನೋವನ್ನು ಕೇಳುವವರು ಯಾರು ಇಲ್ಲ. ಕೊರೊನಾ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT