ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು | ಆರೋಗ್ಯ ಇಲಾಖೆ ಕಟ್ಟಡಕ್ಕೆ ಬೇಕಿದೆ ಚಿಕಿತ್ಸೆ

ಘಟ್ಟದಹಳ್ಳಿಯಲ್ಲಿ ಪಾಳು ಬಿದ್ದ ಆರೋಗ್ಯ ಸಹಾಯಕಿ ವಸತಿ ಗೃಹ
Published 10 ಜುಲೈ 2024, 6:54 IST
Last Updated 10 ಜುಲೈ 2024, 6:54 IST
ಅಕ್ಷರ ಗಾತ್ರ

ಹಳೇಬೀಡು: ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಕಟ್ಟಡ ಪಾಳು ಬಿದ್ದಿರುವುದರಿಂದ ಘಟ್ಟದಹಳ್ಳಿ ಗ್ರಾಮದ ಜನರಿಗೆ ಸುರಕ್ಷತೆ ಇಲ್ಲದಂತಾಗಿದೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ವಸತಿ ಗೃಹಕ್ಕಾಗಿ 20 ವರ್ಷದ ಹಿಂದೆ ನಿರ್ಮಾಣವಾದ ಕಟ್ಟಡ ಇನ್ನೂ ಉದ್ಘಾಟನೆ ಕಂಡಿಲ್ಲ.

ಆರೋಗ್ಯ ಸಹಾಯಕಿ ವಾಸ ಮಾಡಲು ಅನುಕೂಲವಾಗುವಂತೆ ಸುಸಜ್ಕಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಟ್ಟಡಲ್ಲಿ ಮಹಿಳೆಯರ ಆರೋಗ್ಯ ಸಮಸ್ಯೆ ಆಲಿಸಿ, ಸಲಹೆ ಸೂಚನೆ ಕೊಡಲು ಅನುಕೂಲವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಕಟ್ಟಡವನ್ನು ಇಲಾಖೆ ಸದುಪಯೋಗ ಮಾಡಿಕೊಳ್ಳದೇ, ಗಿಡಗಂಟಿಗಳಿಂದ ಮುಚ್ಚಿ ಹೋಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಬ್ರಾಹ್ಮಣರ ಆಗ್ರಹಾರದ ಬಳಿ, ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಕಚೇರಿಗೂ ಹೊಸ ಕಟ್ಟಡ ನಿರ್ಮಾಣವಾಗಿದೆ. ಊರಿನ ಚನ್ನಕೇಶವ ದೇವಾಲಯ ಜೀರ್ಣೋದ್ದಾರ ಕಂಡು ಊರಿನ ಸೊಬಗು ಹೆಚ್ಚಿಸಿದೆ. ಕೃಷಿ ಪತ್ತಿನ ಸಹಕಾರ ಸಂಘವೂ ಸುಸಜ್ಜಿತ ಕಟ್ಟಡದಲ್ಲಿ ಮಾದರಿಯಾಗಿ ಮುನ್ನಡೆಯುತ್ತಿದೆ. ಆದರೆ ಆರೋಗ್ಯ ಇಲಾಖೆಯ ಕಟ್ಟಡ ಗ್ರಾಮಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎನ್ನುವುದು ಗ್ರಾಮಸ್ಥರ ಆಕ್ರೋಶ.

ಆರೋಗ್ಯ ಇಲಾಖೆ ಕಟ್ಟಡವನ್ನು ಆವರಿಸಿರುವ ಅನುಪಯುಕ್ತ ಗಿಡಗಳಲ್ಲಿ ಕ್ರಿಮಿಕೀಟಗಳು ವಾಸವಾಗಿವೆ. ಕಟ್ಟಡ ಸ್ಥಿತಿಗತಿ ನೋಡುವವರು ಇಲ್ಲದೇ, ಮಳೆ ಬಂದಾಗ ಕಟ್ಟಡದ ಸುತ್ತ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣವಾಗುತ್ತದೆ. ಆರೋಗ್ಯ ಇಲಾಖೆ ಕಟ್ಟಡದ ಅವ್ಯವಸ್ಥೆಯಿಂದ ಆರೋಗ್ಯಕರ ಪರಿಸರ ಇಲ್ಲದಂತಾಗಿದೆ ಎಂದು ದೂರುತ್ತಿದ್ದಾರೆ.

ಗ್ರಾಮದ ಪರಿಶಿಷ್ಟ ಜನಾಂಗದ ಕಾಲೊನಿ, ಮಾಚೇನಹಳ್ಳಿ, ಮೊಹಮದ್ಪುರ, ಲಿಂಗಪ್ಪನಕೊಪ್ಪಲು, ದ್ಯಾವಪ್ಪನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಪಾಳುಬಿದ್ದ ಕಟ್ಟಡ ಇದೆ. ಕಟ್ಟಡದ ಪಕ್ಕದಲ್ಲಿಯೇ ಹಳ್ಳಿಗಳಿಗೆ ತೆರಳುವ ಜನ ಓಡಾಡುತ್ತಾರೆ. ಜನರಿಗೆ ಸುರಕ್ಷತೆ ಇಲ್ಲದಂತಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೆಂದ್ರಕ್ಕೆ ಸಮೀಪದಲ್ಲಿಯೇ ಕಟ್ಟಡ ಇರುವುದರಿಂದ ಹಾವು, ಚೇಳು ಮೊದಲಾದ ವಿಷಜಂತುಗಳಿಂದ ಮಕ್ಕಳಿಗೆ ತೊಂದರೆ ಆಗುವ ಸಾದ್ಯತೆ ಇದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಬಾಲಚಂದ್ರ.

ಕಟ್ಟಡವನ್ನು ಆರೋಗ್ಯ ಕುಟುಂಬ ಇಲಾಖೆಯವರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಗ್ರಾಮ ಪಂಚಾಯಿತಿಗಾದರೂ ಕೊಡಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್.ವಿ. ಜೈಕುಮಾರ್.

ಕಟ್ಟಡ ಆರೋಗ್ಯ ಸೇವೆ ಮೀಸಲಿರಲಿ

ಕಟ್ಟಡವನ್ನು ಸುಸ್ಥಿತಿಗೆ ತಂದು ಆರೋಗ್ಯ ಇಲಾಖೆ ಬಳಕೆ ಮಾಡಿಕೊಳ್ಳಬೇಕು. ಕಟ್ಟಡದಲ್ಲಿ ನಿರಂತರ ಆರೋಗ್ಯ ಸೇವೆ ದೊರಕುವಂತಾಗಬೇಕು. ಮಹಿಳಾ ಆರೋಗ್ಯ ಸುರಕ್ಷಣಾಧಿಕಾರಿ ಪ್ರತಿದಿನ ಕಟ್ಟಡದಲ್ಲಿ ಜನರಿಗೆ ಆರೋಗ್ಯ ಸಲಹೆ ನೀಡಬೇಕು ಎನ್ನುವುದು ಘಟ್ಟದಹಳ್ಳಿ ರೈತರಕೊಪ್ಪಲು ನಿವಾಸಿ ಕೃಷ್ಣಮೂರ್ತಿ ಅವರ ಮನವಿ. ಆರೋಗ್ಯ ನಿರೀಕ್ಷಣಾಧಿಕಾರಿ ವಾರದಲ್ಲಿ ಎರಡು ದಿನವಾದರೂ ಗ್ರಾಮಕ್ಕೆ ಬಂದು ಕಟ್ಟಡದಲ್ಲಿ ಜನರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಕಟ್ಟಡಕ್ಕೆ ಬಳಕೆ ಮಾಡಿದ ಹಣ ಸದುಪಯೋಗ ಆಗುತ್ತದೆ ಎನ್ನುತ್ತಾರೆ ಅವರು.

ಕಟ್ಟಡ ಪಾಳು ಬಿದ್ದಿರುವ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು. ಕಟ್ಟಡ ಸುಸ್ಥಿತಿಯಲ್ಲಿ ಇಟ್ಟುಕೊಂಡು ಸುರಕ್ಷತೆ ಕಾಪಾಡಲು ಇಲಾಖೆಗೆ ಸೂಚಿಸಲಾಗುವುದು.
ಎಲ್.ವಿ.ಜೈಕುಮಾರ್, ಘಟ್ಟದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ಗ್ರಂಥಾಲಯ ಬಳಕೆಗೆ ಕಟ್ಟಡ ಕೊಡುವಂತೆ ಕೇಳಿದ್ದೇವು. ಪಂಚಾಯಿತಿಗೆ ಕಟ್ಟಡ ಹಸ್ತಾಂತರಿಸಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಗೆ ಪತ್ರ ಬರೆಯುತ್ತೇವೆ.
ಕೃಷ್ಣಪ್ಪ ಪೂಜಾರ್, ಘಟ್ಟದಹಳ್ಳಿ ಪಿಡಿಒ
ಸಮುದಾಯ ಆರೋಗ್ಯ ಅಧಿಕಾರಿ ನೇಮಕ ಮಾಡಲಾಗುತ್ತಿದೆ. ಘಟ್ಟದಹಳ್ಳಿ ಕಟ್ಟಡದಲ್ಲಿ ಅಧಿಕಾರಿ ವಾಸವಾಗಿದ್ದು ಜನರಿಗೆ ಆರೋಗ್ಯ ಸಲಹೆ ಹಾಗೂ ಸೇವೆ ನೀಡಲಿದ್ದಾರೆ.
ಡಾ.ಶಿವಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT