ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ | ಕಾಫಿ ಸೇವನೆಯಿಂದ ಹೃದ್ರೋಗ, ರಕ್ತದೊತ್ತಡ ನಿಯಂತ್ರಣ

ಕಾಫಿ ವಿತ್ ಡಾಕ್ಟರ್ ಕಾರ್ಯಕ್ರಮದಲ್ಲಿ ಡಾ.ಸಿ.ಎನ್‌. ಮಂಜುನಾಥ
Published 6 ಜನವರಿ 2024, 15:50 IST
Last Updated 6 ಜನವರಿ 2024, 15:50 IST
ಅಕ್ಷರ ಗಾತ್ರ

ಸಕಲೇಶಪುರ: ಪ್ರತಿದಿನ ಎರಡು ಲೋಟ ಕಾಫಿ ಕುಡಿಯುವುದರಿಂದ ಶೇ 18 ರಷ್ಟು ಹೃದ್ರೋಗ, ಶೇ16 ರಷ್ಟು ರಕ್ತದೊತ್ತಡ ಸಮಸ್ಯೆ, ಪಾರ್ಶ್ವವಾಯು ಹಾಗೂ ಇನ್ನಿತರ ಸಮಸ್ಯೆಗಳು ಗುಣಮುಖವಾಗುತ್ತವೆ. ಮೆದುಳು ಚುರುಕಾಗುತ್ತದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್ ಹೇಳಿದರು.

ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ 46ನೇ ವರ್ಷಾಚರಣೆ ಅಂಗವಾಗಿ ಶನಿವಾರ ಇಲ್ಲಿಯ ಸುಭಾಷ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ಕಾಫಿ ವಿತ್‌ ಡಾಕ್ಟರ್ಸ್‌’ ಬೆಳೆಗಾರರ ಸಮ್ಮೇಳನ ಹಾಗೂ ಕಾಫಿ ಕೃಷಿ ಮೇಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅಮೆರಿಕದ ಕಾಲೇಜ್‌ ಆಫ್ ಕಾರ್ಡಿಯಾಲಜಿ ಸತತ 10 ವರ್ಷಗಳ ಕಾಲ ಅಧ್ಯಯನ ಮಾಡಿದ್ದು, ನಿತ್ಯ 2–3 ಲೋಟ ಕಾಫಿ ಕುಡಿಯುವ ಸುಮಾರು 5 ಲಕ್ಷ ಜನರ ಆರೋಗ್ಯದ ಮೇಲೆ ಸಂಶೋಧನೆ ನಡೆಸಿದೆ. ಹೃದ್ರೋಗ, ರಕ್ತದೊತ್ತಡ ಸೇರಿದಂತೆ ಹತ್ತಕ್ಕೂ ಹೆಚ್ಚು ಕಾಯಿಲೆಗಳು ಕಾಫಿ ಸೇವನೆಯಿಂದ ನಿವಾರಣೆ ಆಗುತ್ತವೆ. 10 ವರ್ಷ ಹೆಚ್ಚು ಬದುಕಬಹುದು ಎಂದು ವರದಿ ನೀಡಿದೆ ಎಂದು ತಿಳಿಸಿದರು.

ಇದಕ್ಕೆ ಉದಾಹರಣೆಯಾಗಿ ಮಲೆನಾಡಿನ ಗ್ರಾಮೀಣ ಭಾಗದಲ್ಲಿ 90–100 ವರ್ಷ ಆರೋಗ್ಯವಂತರಾಗಿ ಬದುಕಿ ಬಾಳಿರುವುದು ಸಾಕ್ಷಿಯಾಗಿದೆ ಎಂದರು.

ಗುಣಮಟ್ಟದ ಕಾಫಿ: ಮನೆಗಳಲ್ಲಿ, ಹೋಟೆಲ್‌ಗಳಲ್ಲಿ ಗುಣಮಟ್ಟ ಹಾಗೂ ರುಚಿಕರವಾದ ಕಾಫಿ ತಯಾರು ಮಾಡಬೇಕು. ಕೆಲವೆಡೆ ಕಾಫಿ ಕುಡಿದರೆ ಕಾಫಿಯ ಘಮವೇ ಇರುವುದಿಲ್ಲ. ಅಂತಹ ತಪ್ಪುಗಳು ಆಗದಂತೆ ಕಾಫಿ ಕುಡಿದರೆ, ಒತ್ತಡಗಳು ಕಡಿಮೆ ಆಗುವಂತೆ ತಯಾರು ಮಾಡುವ ಬಗ್ಗೆ ತರಬೇತಿ ಅಗತ್ಯ ಎಂದರು.

ಆರೋಗ್ಯವನ್ನು ಕಾಪಾಡುವ ಕಾಫಿ ಬಳಕೆ ಬಗ್ಗೆ ಹೆಚ್ಚು ಪ್ರಚಾರದ ಅಗತ್ಯವಿದೆ. ಹೊಸ ಬ್ರಾಂಡ್‌ಗಳನ್ನು ಮಾಡಬೇಕು. ಕಾಫಿ ಸಂತೆಗಳನ್ನು ನಡೆಸಬೇಕು. ಉತ್ತರ ಕರ್ನಾಟಕ, ಉತ್ತರ ಭಾರತದಲ್ಲಿ ಕಾಫಿಯ ಬಗ್ಗೆ ಹೆಚ್ಚು ಪ್ರಚಾರ ಅಗತ್ಯವಿದೆ. ವಿಶ್ವವಿದ್ಯಾಲಯಗಳಲ್ಲಿ ಕಾಫಿಗೆ ಸಂಬಂಧಿಸಿದ ಕಾಫಿಗೆ ಸಂಶೋಧನಾ ವಿಭಾಗ ಮಾಡಬೇಕು ಎಂದರು.

ಬೇರೆಯವರಿಗೆ ಸಹಾಯ, ಸ್ನೇಹ ಹಂಚುವುದು, ನಂಬಿಕೆ ಉಳಿಸಿಕೊಳ್ಳುವುದೇ ನಿಜವಾದ ಆಸ್ತಿ. ಬೇರೆಯವರ ಹೃದಯವನ್ನು ಗೆಲ್ಲಬೇಕು. ದ್ವೇಷವನ್ನು ಕಳೆದುಕೊಳ್ಳಬೇಕು. ಪ್ರೀತಿ, ಸಂತೋಷವನ್ನು ಹಂಚಬೇಕು. ಇದರಿಂದ ಆರೋಗ್ಯವಂತರಾಗಿ ಇರುವುದಕ್ಕೆ ಸಾಧ್ಯ ಎಂದರು.

ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಕೆ.ಎನ್‌. ಸುಬ್ರಹ್ಮಣ್ಯ ಮಾತನಾಡಿ, ನನ್ನ ಅಧ್ಯಕ್ಷತೆಯಲ್ಲಿ ಎರಡು ವರ್ಷಗಳಲ್ಲಿ ಗ್ರಾಮ ಪಂಚಾಯಿತಿ, ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದ ಬೆಳೆಗಾರರ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಶಕ್ತಿ ಮೀರಿ ಶ್ರಮಿಸಿದ್ದರ ಫಲವಾಗಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ. ಮಣ್ಣೇ ಹೊನ್ನು, ಕಾಫಿ ಅಂದು, ಇಂದು, ಮುಂದು, ಕಾಫಿ ವಿತ್ ಡಾಕ್ಟರ್‌ ಸೇರಿದಂತೆ ಸಮಾವೇಶ, ಸಮ್ಮೇಳನಗಳ ಮೂಲಕ ಬೆಳೆಗಾರ ಪರವಾಗಿ ಸರ್ಕಾರದ ಗಮನ ಸೆಳೆಯುವುದು ಸೇರಿದಂತೆ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಸಕಲೇಶಪುರದ ಸುಭಾಷ್ ಮೈದಾನದಲ್ಲಿ ಶನಿವಾರ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಹಮ್ಮಿಕೊಂಡಿದ್ದ ಕಾಫಿ ವಿತ್‌ ಡಾಕ್ಟರ್ಸ್‌ ಬೆಳೆಗಾರರ ಸಮ್ಮೇಳನ ಹಾಗೂ ಕಾಫಿ ಕೃಷಿ ಮೇಳದ ಸಮಾರಂಭದಲ್ಲಿ ಭಾಗವಹಿಸಿದ್ದ ಬೆಳೆಗಾರರು
ಸಕಲೇಶಪುರದ ಸುಭಾಷ್ ಮೈದಾನದಲ್ಲಿ ಶನಿವಾರ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಹಮ್ಮಿಕೊಂಡಿದ್ದ ಕಾಫಿ ವಿತ್‌ ಡಾಕ್ಟರ್ಸ್‌ ಬೆಳೆಗಾರರ ಸಮ್ಮೇಳನ ಹಾಗೂ ಕಾಫಿ ಕೃಷಿ ಮೇಳದ ಸಮಾರಂಭದಲ್ಲಿ ಭಾಗವಹಿಸಿದ್ದ ಬೆಳೆಗಾರರು

ಸಾಂಬಾರ್ ಮಂಡಳಿ ರಾಷ್ಟ್ರೀಯ ಉಪಾಧ್ಯಕ್ಷ ಕೆ. ಸತ್ಯನಾರಾಯಣ, ಸಾಂಬಾರ್ ಮಂಡಳಿಯಿಂದ ಬೆಳೆಗಾರರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್‌, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಬೆಳೆಗಾರರ ಧ್ವನಿಯಾಗಿದೆ ಎಂದು ಶ್ಲಾಘಿಸಿದರು.

ಶಾಸಕರಾದ ಸಿಮೆಂಟ್ ಮಂಜು, ಶಾಸಕ ಎ.ಮಂಜು, ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಅಧ್ಯಕ್ಷ ಡಾ. ಎಚ್‌.ಟಿ. ಮೋಹನ್‌ಕುಮಾರ್ ಮಾತನಾಡಿದರು. ಕೆಜಿಎಫ್ ಮಾಜಿ ಅಧ್ಯಕ್ಷ ಡಾ. ಎನ್‌.ಕೆ. ಪ್ರದೀಪ್ ಅವರಿಗೆ ಕಾಫಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಚ್‌ಡಿಪಿಎ ವೆಬ್‌ ಅಧ್ಯಕ್ಷ ಎಚ್‌.ಎಸ್‌. ಧರ್ಮರಾಜ್‌, ಕಾಫಿ ಮಂಡಳಿ ಸದಸ್ಯರಾದ ಎಂ.ಬಿ. ಉದಯ್‌ ಕುಮಾರ್, ಜಿ.ಕೆ. ಕುಮಾರ್ ಇದ್ದರು. ಎಚ್‌ಡಿಪಿಎ ಕಾರ್ಯದರ್ಶಿ ಎಂ.ಬಿ. ರಾಜೀವ್ ವಂದಿಸಿದರು. ಸಿ.ಎಸ್‌. ಮಹೇಶ್‌ ಹಾಗೂ ನಂದಿತಾ ಧರ್ಮರಾಜ್ ನಿರೂಪಿಸಿದರು.

ಕಾಫಿ ಮಂಡಳಿ ವತಿಯಿಂದ ಮುಂದಿನ 10 ವರ್ಷಗಳಲ್ಲಿ ಕಾಫಿ ಉತ್ಪಾದನೆ ದ್ವಿಗುಣಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ
–ಎಂ.ಜೆ. ದಿನೇಶ್, ಕಾಫಿ ಮಂಡಳಿ ಅಧ್ಯಕ್ಷ
ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘ ಕಾಫಿ ಬೆಳೆಗಾರರ ಬೆನ್ನೆಲುಬಾಗಿದೆ. ಡಾ. ಮಂಜುನಾಥ್ ಅವರನ್ನು ಕರೆಸಿ ಕಾಫಿ ಸೇವನೆ ಪ್ರಯೋಜನ ತಿಳಿಸಿರುವುದು ಒಳ್ಳೆಯ ಬೆಳವಣಿಗೆ.
–ಡಾ. ಕೆ.ಜಿ. ಜಗದೀಶ್‌, ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಚಿಕೋರಿ ಮುಕ್ತ ಕಾಫಿ

ಶುಗರ್‌ಲೆಸ್‌ ಕಾಫಿಗಿಂತ ಚಿಕೋರಿ ಲೆಸ್‌ ಕಾಫಿ ಸೇವನೆ ಮಾಡಬೇಕು. ಕಾಫಿ ಪುಡಿಗೆ ಚಿಕೋರಿ ಮಿಶ್ರಣ ಮಾಡುವುದು ಸರಿಯಲ್ಲ ಎಂದು ಡಾ.ಸಿ.ಎನ್. ಮಂಜುನಾಥ್‌ ಹೇಳಿದರು. ಚಿಕೋರಿ ಮಿಶ್ರಣ ಮಾಡುವುದನ್ನು ಬ್ರಿಟಿಷರು ಜಾರಿಗೆ ತಂದಿದ್ದು ಅವರ ಕಾನೂನುಗಳ ಮೂಲ ಉದ್ದೇಶವೇ ಭಾರತೀಯರಿಗೆ ತೊಂದರೆ ನೀಡಬೇಕು ಎಂಬುದಾಗಿತ್ತು.

ಅವರು ಜಾರಿಗೆ ತಂದಿರುವ ಇನ್ನೂ ಹಲವು ಕಾನೂನುಗಳು ತಿದ್ದುಪಡಿ ಆಗಬೇಕು. ಕಾಫಿಗೆ ಚಿಕೋರಿ ಮಿಶ್ರಣ ಮಾಡದೆ ಇರುವ ಹಾಗೆ ಹೊಸ ತಿದ್ದುಪಡಿ ತಂದು ಶಿಕ್ಷಾರ್ಹ ಕಾಯ್ದೆ ಜಾರಿಗೆ ತರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT