ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಬೆಳೆ ಸಾಲ ಮನ್ನಾ ಮಾಡಿ

ಕಪ್ಪುಪಟ್ಟಿ ಧರಿಸಿ, ಕರಾಳ ದಿನ ಆಚರಿಸಿದ ರೈತರು
Last Updated 15 ಆಗಸ್ಟ್ 2020, 15:55 IST
ಅಕ್ಷರ ಗಾತ್ರ

ಹಾಸನ: ಹಿಂಗಾರು (ರಾಬಿ) ಬೆಳೆ ಸಾಲ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ (ಸಂಯೋಜಕ), ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಆಶ್ರಯದಲ್ಲಿ ಶನಿವಾರ ನಗರದ ಹೇಮಾವತಿ ಪ್ರತಿಮೆ ಎದುರು ಕಪ್ಪುಪಟ್ಟಿ ಧರಿಸಿ ‘ಕರಾಳ ದಿನ’ಆಚರಿಸಲಾಯಿತು.

ಮುಂಗಾರು ಬೆಳೆಗೆ ಕೂಡಲೇ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಬೇಕು. ಸರ್ಕಾರ ಪ್ರತಿಯೊಬ್ಬ ರೈತನನ್ನು ಸಾಲದಿಂದ ಸಂಪೂರ್ಣ ಮುಕ್ತಿಗೊಳಿಸಲು ಕಾನೂನು ಅಂಗೀಕರಿಸಬೇಕು. ಸ್ವಸಹಾಯ ಗುಂಪುಗಳ ಸಾಲಗಳ ಬಡ್ಡಿ ಮನ್ನಾ ಮಾಡಿ, ಸಾಲ ವಸೂಲಾತಿ ಮಾಡದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ತರಕಾರಿ, ಹಣ್ಣು, ಹಾಲು ಸೇರಿದಂತೆ ಪ್ರತಿ ಬೆಳೆಯ ಉತ್ಪಾದನಾ ವೆಚ್ಚಕ್ಕೆ ಶೇಕಡಾ 50ರಷ್ಟು ಹೆಚ್ಚುವರಿ ಸೇರಿಸಿ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕು. ಈ ಬೆಲೆಗಳಲ್ಲಿ ಬೆಳೆಗಳ ಖರೀದಿಯನ್ನು ಸರ್ಕಾರ ಖಾತ್ರಿ ಪಡಿಸಬೇಕು. ಕನಿಷ್ಟ ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಖರೀದಿಸುವುದು ಕ್ರಿಮಿನಲ್ ಅಪರಾಧವಾಗಿ ಘೋಷಿಸಬೇಕು. ಕೇಂದ್ರ ಸರ್ಕಾರ ಹೊರಡಿಸಿರುವ ಮೂರು ಸುಗ್ರೀವಾಜ್ಞೆಗಳನ್ನು ಹಿಂಪಡೆಯಬೇಕು. ‘ಒಂದು ದೇಶ, ಒಂದು ಮಾರುಕಟ್ಟೆ ರೈತರಿಗೆ ಬೇಡ: ಒಂದು ದೇಶ ಒಂದು ಕನಿಷ್ಟ ಬೆಂಬಲ ಬೆಲೆ ಬೇಕು’ಎಂದು ಒತ್ತಾಯಿಸಿದರು.

ಅಂತರರಾಷ್ಟ್ರೀಯ ಬೆಲೆಗಳಲ್ಲಿ ಡೀಸೆಲ್ ದರ ಶೇಕಡಾ 60 ರಷ್ಟು ಕಡಿಮೆಯಾಗಿದ್ದರೂ ಕೇಂದ್ರ ಸರ್ಕಾರ ತೆರಿಗೆಯನ್ನು ಎರಡು ಪಟ್ಟು ಹೆಚ್ಚಿಸಿ ಡೀಸೆಲ್ ದುಬಾರಿ ಮಾಡಿದೆ. ಕೂಡಲೇ ಇದರ ದರವನ್ನು ಅರ್ಧದಷ್ಟು ಇಳಿಸಬೇಕು. ಆಲಿಕಲ್ಲು ಮಳೆ, ಅಕಾಲಿಕ ಮಳೆ ಮತ್ತು ಲಾಕ್‍ಡೌನ್ ಕಾರಣದಿಂದ ತರಕಾರಿ, ಹಣ್ಣು, ಹಾಲು ಮುಂತಾದ ಬೆಳೆ ನಷ್ಟಕ್ಕೀಡಾದ ರೈತರಿಗೆ ಸರ್ಕಾರ ಪರಿಹಾರಗಳನ್ನು ಒದಗಿಸಬೇಕು ಎಂದರು.

ರೈತರ ಹಾಗೂ ಆದಿವಾಸಿಗಳ ಕೃಷಿ ಭೂಮಿಗಳ ಕಂಪನಿ ಸ್ವಾಧೀನ ನಿಷೇಧಿಸಬೇಕು ಹಾಗೂ ಬಗರ್ ಹುಕುಂ ಸಾಗುವಳಿ
ಸಕ್ರಮಗೊಳಿಸಬೇಕು. ವಿದ್ಯುತ್ ಮಸೂದೆ 2020 ಹಿಂಪಡೆಯಬೇಕು. ಕೊರೊನಾ ಅವಧಿಯ ರೈತರ, ಸಣ್ಣಪುಟ್ಟ ಅಂಗಡಿಗಳ, ಸಣ್ಣ ಉದ್ಯಮಗಳ ಹಾಗೂ ವ್ಯಾಪಾರಿಗಳ ವಿದ್ಯುತ್ ಬಿಲ್‍ಗಳನ್ನು ಮನ್ನಾ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ (ಸಾಮೂಹಿಕ ನಾಯಕತ್ವ) ದ ಜಿಲ್ಲಾ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ, ದಲಿತ ಸಂಘರ್ಷ ಸಮಿತಿ (ಸಂಯೋಜಕ) ನಾಯಕ ರಾಜಶೇಖರ್ ಹಾಗೂ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ದ ರಾಜ್ಯ ಸಂಘಟನಾ ಸಂಚಾಲಕ ಅಂಬುಗ ಮಲ್ಲೇಶ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT