ಶನಿವಾರ, ಮೇ 28, 2022
31 °C
ಸತತ ಮಳೆ; ಜಮೀನಿನಲ್ಲಿ ಕೊಳೆಯುತ್ತಿವೆ ಕಾಯಿಪಲ್ಲೆ

ಹೊಳೆನರಸೀಪುರ: ಗಗನಕ್ಕೇರಿದ ತರಕಾರಿ, ಹೂವಿನ ಬೆಲೆ

ಎಚ್‌.ವಿ. ಸುರೇಶ್‌ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಹೊಳೆನರಸೀಪುರ: ತಾಲ್ಲೂಕಿನಲ್ಲಿ ದಿನೇ ದಿನೇ ಮಳೆ ಹೆಚ್ಚಾಗಿದ್ದು ಜಮೀನಿನಲ್ಲಿ ತರಕಾರಿ ಕೊಳೆಯುತ್ತಿರುವುದರಿಂದ ಮಾರುಕಟ್ಟೆ ಸರಬರಾಜಿನಲ್ಲಿ ತೀವ್ರ ಕುಸಿತ ಕಂಡಿದ್ದು ತರಕಾರಿ ಹಾಗೂ ಹೂವಿನ ಬೆಲೆ ಗಗನಕ್ಕೇರಿದೆ.

ಇಲ್ಲಿಯವರೆಗೂ ₹ 40ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ ನುಗ್ಗೇಕಾಯಿ, ₹ 160ಕ್ಕೆ ಏರಿದ್ದರೆ, ₹ 20ಕ್ಕೆ ಕೆ.ಜಿ. ಮಾರಾಟ ಆಗುತ್ತಿದ್ದ ಟೊಮೆಟೊ ₹ 80ಕ್ಕೆ ಏರಿದೆ. ಅತಿ ಕಡಿಮೆಗೆ ಅಂದರೆ ₹ 20 ರಿಂದ ₹ 30ಕ್ಕೆ ಕೆ.ಜಿ ಮಾರಾಟವಾಗುತ್ತಿದ್ದ  ದಪ್ಪಮೆಣಸಿನಕಾಯಿ ₹ 150ಕ್ಕೆ ಏರಿದೆ.

₹ 20ಕ್ಕೆ  ಒಂದು ಮಾರಾಟ ಆಗುತ್ತಿದ್ದ ಹೂಕೋಸಿನ ಬೆಲೆಯೂ ₹ 50 ಆಗಿದೆ. ₹ 20ಕ್ಕೆ ಕೆ.ಜಿ ಇದ್ದ ಈರುಳ್ಳಿ ₹ 50ಕ್ಕೆ ಏರಿದೆ. ಇದೇ ರೀತಿ ಸೊಪ್ಪಿನ ಬೆಲೆಯೂ ಬಹಳ ಹೆಚ್ಚಾಗಿದ್ದು ₹ 2, 3ಕ್ಕೆ ಮಾರಾಟವಾಗುತ್ತಿದ್ದವು ₹ 10 ಆಗಿದೆ. ಮೆಂತೆ ಸೊಪ್ಪು  ₹ 15ಕ್ಕೆ ಒಂದು ಕಟ್ಟು ಆಗಿದೆ. ₹ 40ರಿಂದ 50ಕ್ಕೆ ಮಾರು ಮಾರಾಟ ಆಗುತ್ತಿದ್ದ ಕನಕಾಂಬರ ಹಾಗೂ ಮಲ್ಲಿಗೆ ಹೂವು ₹ 200 ಆಗಿದೆ. ಹೂವಿನ ಬೆಲೆ ಹೆಚ್ಚಾಗಲು ಮಳೆ ಮೂಲ ಕಾರಣವಾಗಿದೆ. ಆದರೆ, ಬೆಳಗಾದರೆ ತುಳಸಿ ವಿವಾಹ ಇರುವುದರಿಂದ ನಾಳೆ ಹೂವಿನ ಬೆಲೆ ಎಷ್ಟಾಗುವುದೋ ಆ ದೇವರೇ ಬಲ್ಲ ಎನ್ನುವಂತಾಗಿದೆ.

ಮಳೆಯಿಂದಾಗಿ ಒಂದೆಡೆ ತರಕಾರಿ, ಹೂವು ಬಾರದಿರುವುದರಿಂದ ತುಟ್ಟಿಯಾಗಿದ್ದರೆ, ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವದರಿಂದ ವ್ಯಾಪಾರಸ್ಥರು ಲಾಭವೂ ಕಡಿಮೆಯಾಗಿ, ಖರೀದಿಸಿದ ಮಾಲು ಖರ್ಚಾದರೆ ಸಾಕು ಎನ್ನುತ್ತಿದ್ದಾರೆ.

ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ತರಕಾರಿ ಬಾರದ ಕಾರಣ ಬರುವ ತರಕಾರಿಗೆ ಬೆಲೆ ತೀವ್ರವಾಗಿ ಹೆಚ್ಚಾಗಿದೆ ಎನ್ನುತ್ತಾರೆ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಅವ್ವಯ್ಯಕ್ಕ, ಅಶೋಕ, ಸ್ವಾಮಿ.

‘ನಾವು ಹಾಸ್ಟೆಲ್‌ಗಳಿಗೆ ₹ 100ಕ್ಕೆ  3 ಕೆ.ಜಿ. ವಿವಿಧ  ಬಗೆಯ ತರಕಾರಿ ಕೊಳ್ಳುತ್ತಿದ್ದೆವು. ಈಗ ಸಾಧ್ಯ ಆಗುತ್ತಿಲ್ಲ. ತರಕಾರಿ ಬೆಲೆ ಇಷ್ಟಾದರೆ ಸರ್ಕಾರ ನೀಡುವ ದರಕ್ಕೆ ತರಕಾರಿ ತೆಗೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ಆದ್ದರಿಂದ 3 ಕೆ.ಜಿ. ತರಕಾರಿ ಬಳಸುವ ಜಾಗದಲ್ಲಿ 1 ಕೆ.ಜಿ ತರಕಾರಿ ಬಳಸಿ ಅಡುಗೆ ಮಾಡಿ ಬಡಸಬೇಕಾದ ಅನಿವಾರ್ಯತೆ ಇದೆ’ ಎಂದು ಸರ್ಕಾರಿ ಹಾಸ್ಟೆಲ್‌ನ ಅಡುಗೆಯವರು ಸಮಸ್ಯೆ ಹೇಳಿದರು.

ಇನ್ನು ಹೋಟೆಲ್‌ಗಳ ಇಡ್ಲಿ ಸಾಂಬಾರ್‌, ಅನ್ನ ಸಾಂಬಾರ್‌ನಲ್ಲಿ ಬೇರೆ ತರಕಾರಿ ಕಾಣದಾಗಿದೆ. ಆಲೂಗೆಡ್ಡೆ, ಬದನೆಕಾಯಿ, ಬೀನ್ಸ್‌ 1 ಕೆಜಿಗೆ ₹ 40ರ  ಆಸುಪಾಸಿನಲ್ಲಿದ್ದು ಎಲ್ಲ ಹೋಟೆಲ್‌ಗಳಲ್ಲಿ ಈ ತರಕಾರಿಗಳು ಮಾತ್ರ ಹೆಚ್ಚಾಗಿ ಬಳಕೆ ಆಗುತ್ತಿದೆ.

ಇದುವರೆಗೂ ಬಳಸಿದ ನ್ಯೂಸ್‌ ಪೇಪರ್‌ 1 ಕೆ.ಜಿಗೆ ₹ 12 ರಿಂದ ₹ 13 ಕ್ಕೆ ಮಾರಾಟವಾಗುತ್ತಿದ್ದು ಈಗ ಕೆಲವು ದಿನಗಳಿಂದ ₹ 28ರಿಂದ ₹ 30ಕ್ಕೆ ಮಾರಾಟವಾಗುತ್ತಿದ್ದು ದಿನಪತ್ರಿಕೆಗಳನ್ನು ಕೊಂಡು ಓದುವವರಿಗೆ ಓದಿದ ನಂತರವೂ ಉತ್ತಮ ಬೆಲೆ ಸಿಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು