ಶನಿವಾರ, ಮಾರ್ಚ್ 6, 2021
32 °C
ಬೀಡುಬಿಟ್ಟ ಕಾಡಾನೆ ನೋಡಲು ಮಳೆಯ ನಡುವೆ ಜಮಾಯಿಸಿದ ಜನರು

ಹುಣಸಿನಕೆರೆಯಲ್ಲಿ ಒಂಟಿ ಸಲಗನ ಮೋಜಿನಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಉಪಟಳ ನೀಡುತ್ತಿದ್ದ ಗಜ ಗಲಾಟೆ, ಈಗ ನಗರಕ್ಕೂ ವ್ಯಾಪಿಸಿದೆ. ಶನಿವಾರ ಬೆಳ್ಳಂ ಬೆಳಗ್ಗೆ ನಗರದ ಹೊರವಲಯದ ಹುಣಸಿನಕೆರೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿ, ಇನ್ನೂ ಕೆರೆಯಲ್ಲೇ ಬೀಡು ಬಿಟ್ಟಿದ್ದು, ನೆರೆಹೊರೆಯ ಜನರಲ್ಲಿ ಭೀತಿ ಹೆಚ್ಚಿಸಿದೆ.

ಕಾಡಿನಿಂದ ನಾಡಿಗೆ ಬಂದಿರುವ ಸಲಗನನ್ನು ನೋಡಲು ಮಳೆಯ ನಡುವೆಯೂ ಜನರು ಕೆರೆ ಸಮೀಪದ ಜಮಾಯಿಸಿದ್ದಾರೆ. ಕೆರೆಯ ಆಳಕ್ಕೆ ಇಳಿದು ಮೋಜಿನಾಟದಲ್ಲಿ ತೊಡಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಸಲಗನ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ. ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸುತ್ತಿದ್ದರೂ ಸಾರ್ವಜನಿಕರು ಕುತೂಹಲಕ್ಕೆ ಕೆರೆಯ ಸಮೀಪವೇ ಬರುತ್ತಿದ್ದಾರೆ.

‘ಹಗಲು ವೇಳೆ ಸಲಗನನ್ನು ವಾಪಸ್‌ ಕಾಡಿಗೆ ಕಳುಹಿಸಲು ಯಾವುದೇ ರೀತಿ ಕಾರ್ಯಾಚರಣೆ ನಡೆಸುವುದಿಲ್ಲ. ರಾತ್ರಿ ನಂತರ ಅದೇ ಹೋಗಬೇಕು. ಅಲ್ಲಿಯವರೆಗೂ ಕಾಯಲಾಗುವುದು’ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದರು.

ಕಾಡಂಚಿನಲ್ಲಿ ಮೇಲಿಂದ ಮೇಲೆ ದಾಳಿ ನಡೆಸುವ ಮೂಲಕ ಬೆಳೆ ನಷ್ಟ ಜೊತೆಗೆ ಜೀವ ಹಾನಿ ಮಾಡುತ್ತಿದ್ದ ಒಂಟಿ ಸಲಗ ಬೆಳಗಿನ ಜಾವ ಹಳೇಬೀಡು ಕಡೆಯಿಂದ ಬಂದಿದೆ. ಕೆರೆಯ ನೀರಿನ ಮಧ್ಯೆ ಸಲಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುವುದನ್ನು ಕಂಡ ಶ್ವಾನಗಳು ಒಂದೇ ಸಮನೆ ಬೊಗಳಲು ಆರಂಭಿಸಿವೆ.

ಕೆರೆ ಏರಿ ಮೇಲೆ ವಾಯು ವಿಹಾರ ನಡೆಸುತ್ತಿದ್ದವರಿಗೆ ಕೆರೆಯಲ್ಲಿ ನೀರಾಟವಾಡುತ್ತಿದ್ದ ಸಲಗ ಕಂಡಿದೆ. ಆನೆ ನೋಡಿದ ಜನರು ಒಂದು ಕಡೆ ಅಚ್ಚರಿ ಪಡುತ್ತಿದ್ದರೆ, ಮತ್ತೊಂದೆಡೆ ಏನು ಮಾಡುವುದೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.

‘ಈ ಭಾಗದಲ್ಲಿ ಒಂಟಿ ಸಲಗವೊಂದು ಊರ ಪಕ್ಕಕ್ಕೇ ಬಂದಿರುವುದು ಇದೇ ಮೊದಲು. ಕೆರೆಗೆ ಇಳಿಯುವ ಬದಲು ಗ್ರಾಮದೊಳಗೆ ನುಗ್ಗಿದ್ದರೆ ಏನು ಅನಾಹುತ ಮಾಡುತ್ತಿತ್ತೋ’ ಎಂದು ಸ್ಥಳೀಯರಾದ ಚಮನ್ ಪಾಷಾ, ಮುಜಾಹಿದ್ ಷರೀಫ್ ಆತಂಕ ವ್ಯಕ್ತಪಡಿಸಿದರು.‌

‘ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಅರಣ್ಯದಿಂದ ಇಲ್ಲಿಗೆ ಬಂದಿರಬಹುದು. ಕೆಲ ದಿನಗಳ ಹಿಂದೆ ಹಳೇಬೀಡು ಬಳಿ ರೈತ ಮಹಿಳೆಯನ್ನು ಬಲಿ ಪಡೆದ ಸಲಗ ಇದೇನಾ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಸದ್ಯದ ಮಟ್ಟಿಗೆ ಸಲಗ ಕೆರೆಯಿಂದ ಹೊರಗೆ ಬರುವ ಸಾಧ್ಯತೆ ಕಡಿಮೆ. ಹೀಗಾಗಿ ಸಲಗನನ್ನು ಮರಳಿ ಕಾಡಿಗಟ್ಟಲು ಯಾವುದೇ ರೀತಿಯ ಕಾರ್ಯಾಚರಣೆ ಮಾಡುವಂತಿಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ತಿಳಿಸಿದರು.

‘ಆದರೆ, ಅದು ಕೆರೆಯಿಂದ ಬೇರೆ ಕಡೆ ಅಥವಾ ಜನಸಂದಣಿ ಪ್ರದೇಶಕ್ಕೆ ಹೋಗದಂತೆ ಎಚ್ಚರ ವಹಿಸಿದ್ದೇವೆ. ರಾತ್ರಿ ನಂತರ ಅದು ಇಲ್ಲಿಂದ ಬೇರೆ ಕಡೆ ಹೋಗುವ ಸಾಧ್ಯತೆ ಇದೆ. ಅಲ್ಲಿಯವರೆಗೂ ಏನನ್ನೂ ಮಾಡಲಾಗುವುದಿಲ್ಲ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು