ಹೊಳೆನರಸೀಪುರ: ‘ನೀವೆಲ್ಲಾ ಒಟ್ಟಾಗಿ ದೃಢ ನಿರ್ಧಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ, ಯಾವುದೇ ನಿಂಬೆಹಣ್ಣು, ಮಾಟ–ಮಂತ್ರ ಯಾವುದೂ ಈ ಬಾರಿ ಕೆಲಸ ಮಾಡಲ್ಲ. ಬದಲಾಗಿ ಅದರ ಎಲ್ಲ ದೋಷಗಳು ಅದನ್ನು ಮಾಡಿಸಿದವರಿಗೇ ತಟ್ಟುತ್ತದೆ’ ಎಂದು ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ, ಸಂಸದ ಡಿ.ಕೆ. ಸುರೇಶ್ ಹೇಳಿದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು, ಪುರಸಭೆ ಮಾಜಿ ಸದಸ್ಯ ಓಲೆ ಕುಮಾರ, ಚಂದ್ರು, ಸತೀಶ ಸೇರಿದಂತೆ ಹಲವರನ್ನು ಬುಧವಾರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
‘ಸಾರ್ವಜನಿಕರ ಸ್ವಾತಂತ್ರ್ಯಕ್ಕಾಗಿ, ಉಸಿರು ಕಟ್ಟಿದ ವಾತಾವರಣದಿಂದ ಹೊರಬರಲು, ಸಾಭಿಮಾನದಿಂದ ಬದುಕು ನೆಡೆಸಲು, ರೈತರ ಭೂಮಿ ಒಂದು ಕುಟುಂಬದ ಪಾಲಾಗುವುದನ್ನು ತಪ್ಪಿಸಲು, ಊರು ಬಿಟ್ಟು ಬೇರೆಡೆ ನೆಲೆ ಕಂಡುಕೊಂಡಿರುವ ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರನ್ನು ಮತ್ತೆ ಊರಿಗೆ ಕರೆತಂದು, ಇಲ್ಲಿ ನೆಲೆ ಒದಗಿಸಿಕೊಳ್ಳಲು ನೀವೆಲ್ಲಾ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು‘ ಎಂದು ಹೇಳಿದರು.
‘ಪೊಲೀಸ್ ಠಾಣೆ, ಕಂದಾಯ ಇಲಾಖೆ. ಪುರಸಭೆ ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಆಗುತ್ತಿರುವ ತೊಂದರೆ ಹಾಗೂ ಕಿರುಕುಳದ ಬಗ್ಗೆ ತಿಳಿದಿದೆ. ಇನ್ನು ಇಂತಹ ತೊಂದರೆ ಹಾಗೂ ಕಿರುಕುಳ ಯಾವುದೇ ಕಾಂಗ್ರೆಸ್ ಕಾರ್ಯಕರ್ತರಿಗೆ ಆಗಬಾರದು. ಒಂದು ವೇಳೆ ತೊಂದರೆ ಆದರೆ ರಾಜ್ಯ ಕಾಂಗ್ರೆಸ್ ನಿಮ್ಮ ಜೊತೆ ಇರುತ್ತದೆ. ಯಾವುದೇ ಭಯ ಇಲ್ಲದೆ ಮುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡಿ’ ಎಂದು ತಿಳಿಸಿದರು.
‘ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಪ್ರತೀ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್, ಪ್ರತಿ ಮಹಿಳೆಯರಿಗೆ ₹ 2ಸಾವಿರ ಸಹಾಯ ಧನ ನೀಡುತ್ತೇವೆ. ಎಲ್ಲಿಂದ ಕೊಡುತ್ತಾರೆ ಎಂದು ಬಿಜೆಪಿಯವರು ಪ್ರಶ್ನಿಸುತ್ತಿದ್ದಾರೆ. ಬಿಜೆಪಿಯವರ ಶೇ 40 ಕಮಿಷನ್ ತಡೆದು, ಅದರಲ್ಲಿ ನಮ್ಮ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸುತ್ತೇವೆ‘ ಎಂದು ಹೇಳಿದರು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಚುನಾವಣೆಯಲ್ಲಿ, ಕಾಂಗ್ರೆಸ್ ಬಹುಮತ ಪಡೆದು ಅಧಿಕಾರ ಹಿಡಿಯುತ್ತದೆ. ನಮ್ಮ ಪಕ್ಷದ ಗೆಲುವಿಗೆ ಹೊಳೆನರಸೀಪುರ ತಾಲ್ಲೂಕಿನ ಜನರು ಮುನ್ನುಡಿ ಬರೆಯಲಿದ್ದಾರೆ. ಹಾಸನ ಜಿಲ್ಲೆಯ ಎಲ್ಲ 7 ಕ್ಷೇತ್ರದಲ್ಲೂ ಈ ಬಾರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ‘ ಎಂದರು.
ಪುರಸಭೆ ಮಾಜಿ ಸದಸ್ಯ ಓಲೆಕುಮಾರ್. ಚಂದ್ರ, ಸತೀಶ ನಾಗರಾಜ, ಶ್ರೀಧರ್, ಉಮೇಶ್, ಲಕ್ಕೇಗೌಡ, ಶ್ರೀನಿವಾಸ್, ಜಗದೀಶ್, ಗೋಪಾಲಕೃಷ್ಣ, ಗುಜರಿ ಅನ್ವರ್, ಸೇರಿದಂತೆ ಅನೇಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ನಾಯಕಿ ಅನುಪಮಾ, ಶ್ರೇಯಸ್ ಪಟೇಲ್, ಬಾಗೂರು ಮಂಜೇಗೌಡ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್, ಹರದನಹಳ್ಳಿ ಪುಟ್ಟರಾಜು, ದುದ್ದ ಸುರೇಶ್, ಚನ್ನರಾಯಪಟ್ಟಣ ಶಂಕರ್, ವನ್ನಿಕೊಪ್ಪಲು ಮಂಜು ಇದ್ದರು.
‘ಶೇ 99 ಕಿರುಕುಳ ನೀಡಿದರು’
‘ನಾನು 40 ವರ್ಷಗಳಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ. ನಾನು ಜೆಡಿಎಸ್ ಗೆಲುವಿಗೆ ಹಗಲಿರುಳು ಕೆಲಸ ಮಾಡಿರುವುದನ್ನು ನೀವೂ ನೋಡಿದ್ದೀರಿ. ನನಗೆ ಶೇ 1 ಸಹಾಯ ಮಾಡಿ, ಶೇ 99 ಕಿರುಕುಳ ನೀಡಿದರು’ ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು ಹೇಳಿದರು.
‘ಇತ್ತೀಚೆಗೆ ನನ್ನನ್ನು ನಿವೃತ್ತಿಗೊಳಿಸುತ್ತೇನೆ ಎಂದರು. 65 ವರ್ಷದ ಅವರೇ ನಿವೃತ್ತಿ ಆಗಿಲ್ಲ. ನಾನೇಕೆ ನಿವೃತ್ತನಾಗಲಿ. ಅವರು ನನ್ನನ್ನು ನಿವೃತ್ತಿಗೊಳಿಸುವುದೇನು, ನಾನೇ ಅವರ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದೇನೆ. ನಾನು ಜೆಡಿಎಸ್ ಪಕ್ಷಕ್ಕೆ ದುಡಿದಿದ್ದಕ್ಕಿಂತ ಹೆಚ್ಚು ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತೇನೆ. ಜೆಡಿಎಸ್ ನಾಯಕರು ನನಗೆ ತೊಂದರೆ ಕೊಡಬಹುದು. ಆದರೆ ನನ್ನನ್ನು ಕಾಪಾಡಲು ಸಂಸದ ಡಿ.ಕೆ. ಸುರೇಶ್ ಇದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.