ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ತುಂತುರು ಮಳೆ: ಜಮೀನು ಜಲಾವೃತ

ದೊಡ್ಡಕೆರೆಗೆ ಕುರಿ– ಮೇಕೆ ಬಲಿ ಕೊಟ್ಟು ಸಂಭ್ರಮ
Last Updated 19 ಮೇ 2022, 15:49 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಮಳೆ ಆರ್ಭಟ ಗುರುವಾರ ಕೊಂಚ ತಗ್ಗಿದ್ದು, ಮಧ್ಯಾಹದಿಂದ ತುಂತುರು ಮಳೆಯಾಗುತ್ತಿದೆ.

ಬುಧವಾರ ರಾತ್ರಿಯಿಂದ ಬೆಳಗಿನವರೆಗೂ ಉತ್ತಮ ಮಳೆಯಾಗಿದೆ. ಬೆಳಿಗ್ಗೆ ಕೊಂಚ ಬಿಡುವು ನೀಡಿದೆ. ಚಳಿಯ ಜತೆಗೆ ಮೋಡ ಕವಿದ ವಾತಾವರಣ ಮುಂದುವರಿದಿದೆ. ಮಳೆಗೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಕೆರೆ-ಕಟ್ಟೆ ಕೋಡಿ ಬಿದ್ದು, ಈಗಲೂ ಎಲ್ಲೆಂದರಲ್ಲಿ ಹರಿಯುತ್ತಿರುವುದರಿಂದ ತೆಂಗಿನ ತೋಟ, ಹತ್ತಾರು ಎಕರೆ ಜಮೀನು ಜಲಾವೃತವಾಗಿದೆ.

ಹೊಳೆನರಸೀಪುರ ತಾಲ್ಲೂಕಿನ ಎಲೆಚಾಗಹಳ್ಳಿ ಗ್ರಾಮದಲ್ಲಿ ಶುಂಠಿ, ಬಾಳೆ, ಅಡಿಕೆ ಬೆಳೆ ಪ್ರವೇಶ ನೀರಿನಲ್ಲಿ ಮುಳುಗಿದೆ. ಜೋರು ಮಳೆಗೆ ಹಿರೀಸಾವೆ ದೊಡ್ಡ ಕೆರೆ ತುಂಬಿ ಹರಿದ ಹಿನ್ನೆಲೆ ಸಂತಸಗೊಂಡ ಸ್ಥಳೀಯರು, ಕೋಡಿ ಬಿದ್ದು ಹರಿಯುತ್ತಿರುವ ನೀರಿನ ಮಧ್ಯೆಯೇ ಕುರಿ ಮತ್ತು ಮೇಕೆಯನ್ನು ಬಲಿಕೊಟ್ಟು ಸಂಭ್ರಮಾಚರಣೆ ಮಾಡಿದರು.ಕಳೆದ ಎರಡೂವರೆ ದಶಕದ ಬಳಿಕ ಮೊದಲ ಬಾರಿಗೆ ಒಡಲು ತುಂಬಿಕೊಂಡ ಸಂತಸದಲ್ಲಿ ಕೊಳ್ಳೇನಹಳ್ಳಿ ರೈತರು ಒಟ್ಟಾಗಿ ಸೇರಿ ಪ್ರಾಣಿ ಬಲಿಕೊಟ್ಟು ಹಬ್ಬ ಮಾಡಿ ಖುಷಿಪಟ್ಟರು.

ಎರಡು ದಿನಗಳ ಸತತ ಮಳೆಯಿಂದ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ರೈತ ಕುಮಾರ್ ಎಂಬುವರ ಮನೆ ಗೋಡೆ ಕುಸಿದಿದೆ. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮನೆ ಸಂಪೂರ್ಣ ಕುಸಿಯುವ ಭೀತಿ ಕುಟುಂಬ ಸದಸ್ಯರನ್ನು ಕಾಡುತ್ತಿದೆ.

ಹೊಳೆನರಸೀಪುರ ಪುರಸಭೆ 5ನೇ ವಾರ್ಡ್‍ನಲ್ಲಿ ಮಳೆ ನೀರು ಮನೆಗೆ ನುಗ್ಗಿ ಮನೆ ಮಂದಿ ಪರದಾಡಿದರು. ಜೋರು ಮಳೆಯಿಂದ ಸಕಲೇಶಪುರ ತಾಲ್ಲೂಕು ಕಲ್ಲಾರೆಹಳ್ಳಿ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರು ಗದ್ದೆಯಂತಾಗಿದೆ. ತುಂತುರು ಮಳೆ ನಡುವೆಯೇ ಮಕ್ಕಳು ಶಾಲೆಗೆ ತೆರಳಿದರು.

ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜೀವನದಿ ಹೇಮಾವತಿ ಜಲಾಶಯದ ಒಳ ಹರಿವಿನ ಪ್ರಮಾಣ ದಿಢೀರ್ ಹೆಚ್ಚಳವಾಗಿದೆ. ಒಳ ಹರಿವು 7441 ಕ್ಯುಸೆಕ್‌ ಇದ್ದು, ನೀರಿನ ಮಟ್ಟ 2902.53 ಅಡಿಗೇರಿದೆ. ಕಳೆದ ವರ್ಷ ಇದೇ ದಿನ 2884.35 ಅಡಿ ನೀರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT