ಬುಧವಾರ, ಅಕ್ಟೋಬರ್ 21, 2020
22 °C
ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ಹಾಥರಸ್‌ ಯುವತಿಯ ಅತ್ಯಾಚಾರ: ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಸಿಐಟಿಯು, ಕೆಪಿಆರ್‍ಎಸ್ ಮತ್ತು ಡಿಎಚ್‍ಎಸ್‌ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

‘ಯುವತಿಯ ಶವವನ್ನು ಕುಟುಂಬದವರಿಗೂ ನೀಡದೆ ಪೊಲೀಸರೇ ಅಂತ್ಯಸಂಸ್ಕಾರ ನಡೆಸಿರುವುದು ಸರಿಯಲ್ಲ. ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಅಪರಾಧಿಗಳಿಗೆ ರಕ್ಷಣೆ ನೀಡುವುದರಲ್ಲಿ, ಸಾಕ್ಷಿ, ಪುರಾವೆಗಳನ್ನು ನಾಶ ಮಾಡುವುದರಲ್ಲಿ ಮತ್ತು ನೊಂದ ಕುಟುಂಬವನ್ನು ಬೆದರಿಸುವವರಿಗೆ ಬಹಿರಂಗ ಬೆಂಬಲ ನೀಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಲಿತರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿವೆ ’ಎಂದು ಪ್ರತಿಭಟಾನಾಕಾರರು ಆರೋ‍ಪಿಸಿದರು.

ಕೆಪಿಆರ್‌ಎಸ್‌ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ಕುಮಾರ್‌ ಮಾತನಾಡಿ, ‘ಪರಿಶಿಷ್ಟ ಜಾತಿಗಳು ಮತ್ತು
ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989 ಯನ್ನು ಹಿಂದಿನ ಸರ್ಕಾರಗಳು ಸಮರ್ಪಕವಾಗಿ ಜಾರಿ ಮಾಡಲಿಲ್ಲ. ಆದರೆ
ಬಿಜೆಪಿ ಸರ್ಕಾರ ಕಾಯ್ದೆಯನ್ನು ದುರ್ಬಲಗೊಳಿಸುತ್ತಿದೆ. ಅತ್ಯಾಚಾರದ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ನಿಗದಿತ ಅವಧಿಯಲ್ಲಿ ಪಾರದರ್ಶಕವಾಗಿ ನಡೆಸಬೇಕು. ಕರ್ತವ್ಯ ಲೋಪವೆಸಗಿರುವ ಅಲ್ಲಿನ ಜಿಲ್ಲಾಧಿಕಾರಿ, ಪೊಲೀಸ್‌ ಮತ್ತು ಇತರ ಅಧಿಕಾರಿಗಳ ವಿರುದ್ಧ ಕಠಿಣ ಶಿಕ್ಷೆ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಮೃತ ಯುವತಿಯ ಕುಟುಂಬಕ್ಕೆ ಗರಿಷ್ಟ ಮಟ್ಟದ ರಕ್ಷಣೆ ನೀಡಬೇಕು. ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ದೊರಕಿಸಬೇಕು. ನ್ಯಾಯಮೂರ್ತಿ ವರ್ಮಾ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ದೌರ್ಜನ್ಯಕ್ಕೊಳಗಾದವರ ಕುಟುಂಬಗಳಿಗೆ ಕೃಷಿ ಭೂಮಿ, ಸರ್ಕಾರಿ ಉದ್ಯೋಗ ಮತ್ತು ವಾಸಕ್ಕೆ ಮನೆ ಒದಗಿಸಬೇಕು. ಎಲ್ಲರಿಗೂ ಉದ್ಯೋಗವನ್ನು ಮತ್ತು ಕನಿಷ್ಟ ವೇತನವನ್ನು ಖಚಿತ ಪಡಿಸಬೇಕು. ದಲಿತರು ಹಾಗೂ ಮಹಿಳೆಯರ
ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಒದಗಿಸಬೇಕು ಎಂದು ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಡಿಎಚ್‌ಎಸ್‌ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ತಾಲ್ಲೂಕು ಸಂಚಾಲಕ ಎಂ.ಎನ್‌.ಮಧುಸೂದನ್‌, ಮುಖಂಡರಾದ ಅರವಿಂದ, ದೇವರಾಜು, ಜಯಂತಿ, ಶಶಿ ತಟ್ಟೇಕೆರೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.