ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಪರಂಪರೆ, ಇತಿಹಾಸ ಆಲಿಸಿದ ಜಪಾನಿಗರು

ಶ್ರವಣಬೆಳಗೊಳಕ್ಕೆ ಜಪಾನ್ ಚಿಕುಶಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭೇಟಿ
Last Updated 23 ಫೆಬ್ರುವರಿ 2020, 13:40 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ‘ಭಾರತದ ವಿವಿಧ ಧರ್ಮ ಸಂಸ್ಕೃತಿಗಳ ಮತ್ತು ಸಾಹಿತ್ಯದ ಉತ್ತಮ ವಿಚಾರಗಳ ಬಗ್ಗೆ ಜಪಾನ್‌ ದೇಶದ ಚಿಕುಶಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಆಸಕ್ತಿಯಿಂದ ಚರ್ಚೆಯಲ್ಲಿ ಭಾಗವಹಿಸಿ ವಿಭಿನ್ನ ಪ್ರಶ್ನೆಗಳನ್ನು ಕೇಳಿದ್ದು ಸಂತಸ ತಂದಿದೆ’ ಎಂದು ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಾನುವಾರ ಹೇಳಿದರು.

ಪಟ್ಟಣದ ಕಾನಜಿ ಯಾತ್ರಿಕಾಶ್ರಮದಲ್ಲಿ ಜಪಾನ್‌ ದೇಶದ ಚಿಕುಶಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಜೈನ ಇತಿಹಾಸ ಮತ್ತು ಪ್ರಾಚೀನತೆಯ ಶೈಕ್ಷಣಿಕ ಪ್ರವಾಸ ನಿಮಿತ್ತ ಏರ್ಪಡಿಸಿದ್ದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಮಾತನಾಡಿದರು.

‘ಶ್ರವಣಬೆಳಗೊಳ ಕ್ಷೇತ್ರವು 2300 ವರ್ಷಗಳ ಜೈನ ಪರಂಪರೆಯ ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ಚಂದ್ರಗಿರಿಯ ಚಿಕ್ಕಬೆಟ್ಟವು ಧ್ಯಾನ ಮತ್ತು ಸಲ್ಲೇಖನ ಸಮಾಧಿ ಮರಣಕ್ಕೆ ಪ್ರಸಿದ್ಧಿಯಾಗಿದೆ. ಹಾಗೆಯೇ 500ಕ್ಕೂ ಹೆಚ್ಚು ಶಿಲಾ ಶಾಸನಗಳನ್ನು ಈ ಕ್ಷೇತ್ರವು ಹೊಂದಿದೆ’ ಎಂದು ಹೇಳಿದರು.

ಚಿಕುಶಿ ವಿಶ್ವವಿದ್ಯಾನಿಲಯದ ಅನೇಕ ವಿದ್ಯಾರ್ಥಿಗಳು ಮಹಾಮಸ್ತಕಾಭಿಷೇಕ ಮತ್ತು ವೈರಾಗ್ಯ ಮೂರ್ತಿ ಬಾಹುಬಲಿಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಕುತೂಹಲದಿಂದ ಕೇಳಿದರು.

ಚಾರುಕೀರ್ತಿ ಶ್ರೀಗಳು, ‘ಬಾಹುಬಲಿಯ ಏಕಶಿಲಾ ಮೂರ್ತಿಯನ್ನು ಗಂಗ ವಂಶದ ರಾಚಮಲ್ಲನ ಮಂತ್ರಿ ಚಾವುಂಡರಾಯ ನಿರ್ಮಿಸಿದ್ದು, ಮತ್ತು ಶಿಲ್ಪಿ ಅರಿಷ್ಠನೇಮಿ ಕೆತ್ತಿದ್ದು, ಮೂರ್ತಿ ನಿರ್ಮಾಣದ ಸಮಯದಲ್ಲಿ ಕೆತ್ತನೆಯಿಂದ ಬಂದಂತಹ ಚೂರುಗಳನ್ನು ಸಂಗ್ರಹಿಸಿ ಅದರ ಸಮಾನವಾದ ಚಿನ್ನದ ಬೇಡಿಕೆಯನ್ನು ಶಿಲ್ಪಿ ಇಟ್ಟಿದ್ದು, ಮೂರ್ತಿ ನಿರ್ಮಾಣದ ನಂತರ ಭವ್ಯ ಮೂರ್ತಿಯ ಮುಂದೆ ಯಾವ ಸಂಪತ್ತು ನನಗೆ ಬೇಡ’ ಎಂದು ಶಿಲ್ಪಿ ತ್ಯಾಗ ಮಾಡಿದ್ದರ ಬಗ್ಗೆ ವಿವರಿಸಿದರು.

ಚಿಕುಶಿ ವಿಶ್ವ ವಿದ್ಯಾಲಯದ ಪ್ರೊ.ತೊಮೊಯೋಕಿ ಯುನೋ ಮಾತನಾಡಿ, ವಿದ್ಯಾರ್ಥಿಗಳು ಜಪಾನಿ ಭಾಷೆಯಲ್ಲಿ ಕೇಳಿದ ಪ್ರಶ್ನೆಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಶ್ರೀಗಳವರ ಬಳಿ ಉತ್ತರ ಪಡೆದು ಪುನಃ ಜಪಾನಿ ಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಹಂಪ ನಾಗರಾಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಹುಬಲಿ ಗೀತೆಯನ್ನು ಸರ್ವೇಶ್‌ ಜೈನ್‌ ಹಾಡಿದರು. ಕಾರ್ಯಕ್ರಮಕ್ಕೂ ಮೊದಲು ವಿದ್ಯಾರ್ಥಿಗಳು ವಿಂಧ್ಯಗಿರಿಯ ಬಾಹುಬಲಿ ದರ್ಶನ ಪಡೆದರು. ಕ್ಷೇತ್ರದ ವತಿಯಿಂದ ಉಪನ್ಯಾಸಕರಿಗೆ ಮತ್ತು 25 ವಿದ್ಯಾರ್ಥಿಗಳಿಗೆ ಜೈನ ಸಾಹಿತ್ಯ ಪುಸ್ತಕಗಳನ್ನು ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾರತದ ರಾಷ್ಟ್ರಗೀತೆ ಮತ್ತು ಜಪಾನ್‌ ದೇಶದ ರಾಷ್ಟ್ರಗೀತೆಯನ್ನು ಹಾಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಪ್ರೊಫೆಸರ್‌ಗಳಾದ ಯುನೋ, ಪ್ರತಿಮಾ ಪಾರ್ಶ್ವನಾಥ, ಇಚಿನೋಸಿ, ತೊಕಿಸತೊ, ಎಚ್‌.ಕೊಬಯಾಶಿ, ಟಿ.ಕೊಬಯಾಶಿ, ಕೌಜಿರಿ, ಸೊತೊಮಿ, ಯು.ಕೆ.ಯ ನವೀನ್‌ ಸಂಕಿಘಟ್ಟ, ಮದನ್‌ಗೌಡ, ಮತ್ತು 25 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT